ಕೇರಳದಲ್ಲಿ ನಿಲ್ಲದ ಮಳೆ ಅವಾಂತರ ಚುರುಕುಗೊಂಡ ರಕ್ಷಣಾ ಕಾರ್ಯ

Update: 2018-08-16 15:21 GMT

ಕೊಚ್ಚಿ,ಆ.16: ಎಲ್ಲ ಮೂರೂ ಸಶಸ್ತ್ರ ಪಡೆಗಳು,ಎನ್‌ಡಿಆರ್‌ಎಫ್ ಮತ್ತು ಸ್ವಯಂಸೇವಕರ ಗುಂಪುಗಳು ಕೇರಳದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದು,ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ನೌಕಾಪಡೆಯು ದಕ್ಷಿಣದಲ್ಲಿನ ತನ್ನೆಲ್ಲ ಬಲವನ್ನು ಕೇರಳಕ್ಕೆ ರವಾನಿಸಿದ್ದು, ನೆರೆಯಿಂದಾಗಿ ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡು ದ್ವೀಪಗಳಂತಾಗಿರುವ ಪ್ರದೇಶದಲ್ಲಿ ಸಿಕ್ಕಿ ಹಾಕಿಕೊಂಡಿರುವ ಜನರನ್ನು ಸ್ಥಳಾಂತರಿಸಲು ವಾಯುಪಡೆಯು ಹೆಲಿಕಾಪ್ಟರ್‌ಗಳು ಸೇರಿದಂತೆ 18 ವಿಮಾನಗಳನ್ನು ಕಾರ್ಯಾಚರಣೆಗೆ ತೊಡಗಿಸಿದೆ. ಶತಮಾನದ ಅತ್ಯಂತ ಭೀಕರ ಮಳೆಯಿಂದ ತತ್ತರಿಸಿರುವ ರಾಜ್ಯದ ಹಲವು ಭಾಗಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಂಪೂಣವಾಗಿ ಕುಸಿದಿದೆ. ಕಳೆದೊಂದು ವಾರದಲ್ಲಿ 73ಕ್ಕೂ ಅಧಿಕ ಜನರು ಈ ಭೀಕರ ಪ್ರಕೃತಿ ವಿಕೋಪಕ್ಕೆ ಬಲಿಯಾಗಿದ್ದು,ಬುಧವಾರ ಒಂದೇ ದಿನದಲ್ಲಿ 25 ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಪಡೆಗಳಿಗೆ ಮೋದಿ ಸೂಚನೆ

ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ರಕ್ಷಣಾ ಪಡೆಗಳಿಗೆ ಸೂಚಿಸಿದ್ದಾರೆ.

ಗುರುವಾರ ಬೆಳಿಗ್ಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಪ್ರವಾಹ ಸ್ಥಿತಿ ಕುರಿತು ಚರ್ಚಿಸಿದ್ದೇನೆ. ರಾಜ್ಯಾದ್ಯಂತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಚುರುಕುಗೊಳಿಸುವಂತೆ ರಕ್ಷಣಾ ಸಚಿವಾಲಯಕ್ಕೆ ಸೂಚಿಸಿದ್ದೇನೆ. ಕೇರಳದ ಜನತೆಯ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದೇನೆ ಎಂದು ಅವರು ಟ್ವೀಟಿಸಿದ್ದಾರೆ.

ಕೇಂದ್ರವು ಕೇರಳಕ್ಕೆ ಹೊಸದಾಗಿ ಮತ್ತೆ 12 ಎನ್‌ಡಿಆರ್‌ಎಫ್ ತಂಡಗಳನ್ನು ರವಾನಿಸಿದೆ.

ಕಟ್ಟೆಚ್ಚರ ಘೋಷಣೆ

ಪೆರಿಯಾರ್ ಮತ್ತು ಚಾಲಕುಡಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಚೇರಿಯು ಎಚ್ಚರಿಕೆಯನ್ನು ನೀಡಿದೆ. ಚಾಲಕುಡಿ ನದಿಯ ಒಂದು ಕಿ.ಮೀ. ಮತ್ತು ಅಲುವಾದಿಂದ ಅರ್ಧ ಕಿ.ಮೀ.ವಿಸ್ತೀರ್ಣದಲ್ಲಿಯ ನಿವಾಸಿಗಳು ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುಖ್ಯಮಂತ್ರಿಗಳ ಕಚೇರಿಯು ಟ್ವೀಟಿಸಿದೆ.

ಕುಸಿದು ಬಿದ್ದಿರುವ ಸಂಚಾರ ವ್ಯವಸ್ಥೆ

 ಮಧ್ಯ ಕೇರಳದ ಹಲವು ಭಾಗಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಂಪೂಣವಾಗಿ ಕುಸಿದಿದೆ. ಮೆಟ್ರೋ ಯಾರ್ಡ್‌ನಲ್ಲಿ ನೆರೆನೀರು ನಿಂತಿರುವುದರಿಂದ ಕೊಚ್ಚಿ ಮೆಟ್ರೋ ತನ್ನ ಸೇವೆಗಳನ್ನು ರದ್ದುಗೊಳಿಸಿದೆ. ಕೊಚ್ಚಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯು ಹಲವೆಡೆ ನೆರೆನೀರಿನಲ್ಲಿ ಮುಳುಗಿರುವುದರಿಂದ ನಗರಕ್ಕೆ ಬಸ್ ಸೇವೆಗಳು ವ್ಯತ್ಯಯಗೊಂಡಿವೆ. ರೈಲುಗಳ ಸಂಚಾರಕ್ಕೂ ಭಾರೀ ವ್ಯತ್ಯಯವುಂಟಾಗಿದೆ.

 ಕೊಚ್ಚಿಯ ಹಲವಾರು ಪ್ರದೇಶಗಳು ನೆರೆಪೀಡಿತವಾಗಿವೆ. ಅಲುವಾದಲ್ಲಿ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದ್ದು,ಪೆರಿಯಾರ್ ನದಿದಂಡೆಗಳು ಮತ್ತು ಪ್ರಸಿದ್ಧ ಶಿವ ಮಂದಿರ ಮುಳುಗಡೆಯಾಗಿವೆ. ದಕ್ಷಿಣ ಕೇರಳದ ಇಡುಕ್ಕಿ ಮತ್ತು ಉತ್ತರ ಕೇರಳದ ಮಲಪ್ಪುರಂ ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ಹೊಸದಾಗಿ ಭೂಕುಸಿತಗಳು ಸಂಭವಿಸಿರುವುದು ವರದಿಯಾಗಿದೆ.

ಕೇರಳದ ಅತ್ಯಂತ ವ್ಯಸ್ತ ವಿಮಾನ ನಿಲ್ದಾಣವಾಗಿರುವ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇಗಳಲ್ಲಿ ನೆರೆನೀರು ತುಂಬಿರುವುದರಿಂದ ಶನಿವಾರದವರೆಗೆ ಮುಚ್ಚಲಾಗಿದೆ. ಸಂಪೂರ್ಣವಾಗಿ ಸೌರ ವಿದ್ಯುತ್‌ನಿಂದ ಕಾರ್ಯಾಚರಿಸುತ್ತಿರುವ ಏಷ್ಯಾದ ಮೊದಲ ವಿಮಾನ ನಿಲ್ದಾಣವಾಗಿರುವ ಇಲ್ಲಿಯ ಬೃಹತ್ ಸೌರಫಲಕಗಳು ನೆರೆನೀರಿನಲ್ಲಿ ಮುಳುಗಿವೆ.

ಎನ್‌ಡಿಆರ್‌ಎಫ್ ತಂಡಗಳಿಗೆ ಪಟ್ಟಣಂಥಿಟ್ಟ ಜಿಲ್ಲೆಯ ವಿವಿಧೆಡೆಗಳಿಂದ ನೆರವು ಕೋರಿ ಕರೆಗಳು ಎಡೆಬಿಡದೆ ಬರುತ್ತಿವೆ. ನೌಕಾಪಡೆಯು ಪ್ರವಾಹಪೀಡಿತ ಪ್ರದೇಶಗಳಲ್ಲಿ ಬೋಟುಗಳೊಂದಿಗೆ ತನ್ನ ರಕ್ಷಣಾ ತಂಡಗಳು ಮತ್ತು ಮುಳುಗುಗಾರರ ತಂಡಗಳನ್ನು ಕಾರ್ಯಾಚರಣೆಯಲ್ಲಿ ತೊಡಗಿಸಿದೆ.

ಮುನ್ನಾರ್ ಮತ್ತು ಪೊನ್ಮುಡಿಯಂತಹ ಜನಪ್ರಿಯ ಪ್ರವಾಸಿ ತಾಣಗಳು ಭೂಕುಸಿತಗಳಿಂದಾಗಿ ಹೆಚ್ಚುಕಡಿಮೆ ಹೊರಜಗತ್ತಿನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿವೆ. ಸರಕಾರಿ ವಾಹನಗಳನ್ನು ಹೊರತುಪಡಿಸಿ ಇತರ ಯಾವುದೇ ವಾಹನಗಳಿಗೆ ಮುನ್ನಾರ್ ಪ್ರವೇಶವನ್ನು ನಿಷೇಧಿಸಲಾಗಿದೆ. ಭಾರೀ ಮಳೆಯಿಂದಾಗಿ ಪಂಪಾ ನದಿಯು ಉಕ್ಕಿ ಹರಿಯುತ್ತಿರುವದರಿಂದ ಶಬರಿಮಲೆಗೆ ಭೇಟಿ ನೀಡದಂತೆ ಜನರಿಗೆ ಸೂಚಿಸಲಾಗಿದೆ. ಕೊಲ್ಲಮ್‌ನಿಂದ ಮೀನುಗಾರಿಕೆ ದೋಣಿಗಳೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿಯ ಜನರ ನೆರವಿಗೆ ಧಾವಿಸಿವೆ.

ಕೇಂದ್ರದಿಂದ ಇನ್ನಷ್ಟು ರಕ್ಷಣಾ ತಂಡಗಳು

ಶನಿವಾರದವರೆಗೂ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದ್ದು,ಕೇಂದ್ರವು ಇನ್ನಷ್ಟು ರಕ್ಷಣಾ ತಂಡಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ರಾಜ್ಯಕ್ಕೆ ರವಾನಿಸಿದೆ.

 ಮೋದಿ ಮತ್ತು ಇತರ ಕೇಂದ್ರ ನಾಯಕರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯನ್,ಸಶಸ್ತ್ರ ಪಡೆಗಳು,ತಟರಕ್ಷಣಾ ಪಡೆ,ಎನ್‌ಡಿಆರ್‌ಎಫ್‌ನ ಒಟ್ಟು 52 ತಂಡಗಳು ಗುರುವಾರ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ ಎಂದು ತಿಳಿಸಿದರು.

ಘಟ್ಟಪ್ರದೇಶಗಳಲ್ಲಿ ನಿರಂತರ ಮಳೆ

ಘಟ್ಟ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 33 ಅಣೆಕಟ್ಟುಗಳಿಂದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. 80,000ಕ್ಕೂ ಅಧಿಕ ಜನರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದು, 8,000ಕೋ.ರೂ.ಹೆಚ್ಚಿನ ಬೆಳೆಹಾನಿ ಮತ್ತು ಆಸ್ತಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News