ಅಟಲ್ ಬಿಹಾರಿ ವಾಜಪೇಯಿ: ಯಾರ ಸ್ವತ್ತು ಅಲ್ಲದ ಸ್ವಂತಿಕೆಯ ನಾಯಕ

Update: 2018-08-16 18:42 GMT

ಸಮಾಜದ ಮುಖ್ಯವಾಹಿನಿಯಿಂದ ನೇಪಥ್ಯಕ್ಕೆ ಸರಿಯುವ ಮುನ್ನ ಅಂದರೆ ಸುಮಾರು ಒಂದು ದಶಕಕ್ಕೆ ಮುನ್ನ ಅಟಲ್ ಬಿಹಾರಿ ವಾಜಪೇಯಿಯವರ ಎರಡು ಗುಣಗಳು ಸುಸ್ಪಷ್ಟವಾಗಿದ್ದವು. ಸಾರ್ವಜನಿಕ ಭಾಷಣದಲ್ಲಿ ಸುದೀರ್ಘ ವಿರಾಮ ನೀಡುತ್ತಿದ್ದುದು ಒಂದು; ಇಂದಿನಿಂದ ಹೆಚ್ಚು ಸಹನಶೀಲರಾಗಿದ್ದ ಶ್ರೋತೃಗಳನ್ನು ಹಿಡಿದಿಡುವ ತಂತ್ರವಾಗಿ ಇದನ್ನು ಬಳಸುತ್ತಿದ್ದರು. ಇದು ಎರಡು ಉದ್ದೇಶ ಈಡೇರಿಸುತ್ತಿತ್ತು. ತಮ್ಮ ಯೋಚನೆ ಕ್ರೋಡೀಕರಿಸಲು ಅವರಿಗೆ ಅವಕಾಶ ಮಾಡಿಕೊಡುತ್ತಿದ್ದುದು ಒಂದು; ಹಾಗೂ ಸಾರ್ವಜನಿಕ ಭಾಷಣಗಳಲ್ಲಿ ನಾಟಕೀಯ ಪರಿಣಾಮವನ್ನು ನೀಡುತ್ತಿದ್ದುದು ಮತ್ತೊಂದು.

ಅವರ ಇನ್ನೊಂದು ವೈಶಿಷ್ಟ ಎಲ್ಲರಿಗೂ ತಿಳಿದದ್ದು; ಆದರೆ ಅದನ್ನು ಪಕ್ಕಾ ರಾಜಕಾರಣಿಯಲ್ಲದ ಕೆ.ಎನ್.ಗೋವಿಂದಾಚಾರ್ಯ ಅವರಂಥ ನಾಯಕರ ಮಾತಿನಲ್ಲಿ ಬಣ್ಣಿಸುವುದು ಸೂಕ್ತ. ವಾಜಪೇಯಿಯವರ ವ್ಯಕ್ತಿತ್ವವನ್ನು ನಿಖರವಾಗಿ ಅಂದಾಜಿಸುವುದು ಕಷ್ಟ. ಏಕೆಂದರೆ ಅವರು ತಮ್ಮ ನಿಲುವಿಗೆ ಮುಖವಾಡ ಹಾಕಿರುತ್ತಾರೆ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ನಿಲುವು ಬದಲಿಸುತ್ತಾರೆ. ಉದಾಹರಣೆಗೆ 1990ರಲ್ಲಿ ಲಾಲ್‌ಕೃಷ್ಣ ಅಡ್ವಾಣಿಯವರು ಸೋಮನಾಥದಿಂದ ಅಯೋಧ್ಯೆ ವರೆಗೆ ಕೈಗೊಂಡ ರಥಯಾತ್ರೆ ಬಗ್ಗೆ ಅಸಮ್ಮತಿ ಸೂಚಿಸಿದ್ದರು. ಆದರೆ ರಾಮ ಲಲ್ಲಾ ಕಾರಣವನ್ನು ಅವರ ಪಕ್ಷ ಒಪ್ಪಿಕೊಂಡ ಸಂದರ್ಭದಲ್ಲಿ, ಪ್ರಧಾನಿಯಾದ ಬಳಿಕ 2000 ಡಿಸೆಂಬರ್‌ನಲ್ಲಿ, ರಾಮಮಂದಿರ ಹೋರಾಟ ದೇಶದ ಆಶೋತ್ತರಗಳ ಸಂಕೇತ ಎಂದು ವಾಜಪೇಯಿ ಬಣ್ಣಿಸಿದ್ದರು.

ವಾಜಪೇಯಿಯವರನ್ನು ಸಾಮಾನ್ಯವಾಗಿ, ಸೂಕ್ತವಲ್ಲದ ಪಕ್ಷದಲ್ಲಿರುವ ಸರಿಯಾದ ವ್ಯಕ್ತಿ ಎಂದು ಬಣ್ಣಿಸಲಾಗುತ್ತಿತ್ತು. ಇದನ್ನು ತಮ್ಮ ರಾಜಕೀಯ ಪ್ರವೃತ್ತಿಯ ಸರಿಯಾದ ಬಣ್ಣನೆ ಎಂಬ ಕಾರಣಕ್ಕಾಗಿ ಅಲ್ಲದಿದ್ದರೂ, ಏಕಕಾಲಕ್ಕೆ ಎರಡೂ ದೋಣಿಗಳಲ್ಲಿ ಸವಾರಿ ಮಾಡಲು ಅವಕಾಶವಾಗುತ್ತದೆ ಎಂಬ ಕಾರಣಕ್ಕಾಗಿ ಇದನ್ನು ಅವರು ಒಪ್ಪಿಕೊಂಡಿದ್ದರು. ವಿಭಜನಕಾರಿ ಹಿಂದುತ್ವ ವಿಷಯದ ಬಗ್ಗೆ ಸಾರ್ವಜನಿಕವಾಗಿ ಖಂಡತುಂಡವಾದ ನಿಲುವು ವ್ಯಕ್ತಪಡಿಸದ ಕಾರಣದಿಂದ ಆ ಕಾಲದ ಉದಾರವಾದಿಗಳಿಗೆ ಅವರು ಸ್ವೀಕಾರಾರ್ಹರಾಗಿದ್ದರು. ಇಷ್ಟಾಗಿಯೂ ಒಮ್ಮೆ ಸ್ವಯಂ ಸೇವಕರಾಗಿದ್ದವರು ಸದಾ ಸ್ವಯಂಸೇವಕರೇ ಎಂಬ ಆಧಾರದಲ್ಲಿ ಸಂಘ ಪರಿವಾರದ ವ್ಯಕ್ತಿ ಎಂದೇ ಸಂಘ ವಲಯದಲ್ಲಿ ಕರೆಸಿಕೊಂಡಿದ್ದರು.

ಅಟಲ್ ಬಿಹಾರಿ ವಾಜಪೇಯಿ ನೈಜ ರಾಜಕೀಯ ದಾಳ ಉರುಳಿಸುತ್ತಿದ್ದರು. ಯಾವಾಗ ಮತ್ತು ಹೇಗೆ ಹಿಂದುತ್ವ ವಿಚಾರ ಮರೆಮಾಚಬೇಕು ಅಥವಾ ಮತದಾರರಿಗೆ ರುಚಿಸುವಂತೆ ಹೇಗೆ ಸಿಹಿಲೇಪನ ಮಾಡಬೇಕು ಎನ್ನುವುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ತಮ್ಮ ಜಾತ್ಯತೀತ ಮುಖವನ್ನು ಉಳಿಸಿಕೊಳ್ಳುವ ಸಲುವಾಗಿ ಹೇಗೆ ಕೋಮುಶಕ್ತಿಗಳಿಂದ ಪ್ರತ್ಯೇಕವಾಗಿರಬೇಕು ಎಂಬ ಚತುರತೆಯನ್ನೂ ಮೈಗೂಡಿಸಿಕೊಂಡಿದ್ದರು. ಆದರೆ ಅವರೇ ಬೆಳೆಸಿದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ವಿಚಾರ ಬಂದಾಗ ಅವರು ಎಂದೂ ಮೆದು ನಿಲುವು ತಾಳಿರಲಿಲ್ಲ. ವಾಜಪೇಯಿ ಯಾರ ವ್ಯಕ್ತಿಯೂ ಅಲ್ಲದ, ಸ್ವಂತಿಕೆಯ ಅತ್ಯುತ್ಕೃಷ್ಟ ವ್ಯಕ್ತಿ.

ಸ್ವಾತಂತ್ರ್ಯ ಹೋರಾಟ ನಿರ್ಣಾಯಕ ಹಂತಕ್ಕೆ ಬಂದಿದ್ದ 1940ರ ದಶಕದಲ್ಲಿ ಅವರು ರಾಜಕೀಯ ವಲಯದಲ್ಲಿ ಗುರುತಿಸಿಕೊಂಡರು. ಆದರೆ ಹೋರಾಟದ ಬಗ್ಗೆ ಹೆಚ್ಚಿನ ಗಮನವನ್ನೇನೂ ಕೇಂದ್ರೀಕರಿಸಲಿಲ್ಲ. ಅವರ ಪಾಳಯದ ಇತರರಂತೆ ವಾಜಪೇಯಿ ಕೂಡಾ ದೀರ್ಘಾವಧಿ ಗುರಿಯ ಬಗ್ಗೆ ಗಮನ ಹರಿಸಿದರು. ಸಂಯುಕ್ತ ಪ್ರಾಂತದಲ್ಲಿ ಆರೆಸ್ಸೆಸ್ ನಿಯಂತ್ರಿಸುತ್ತಿದ್ದ ದೀನದಯಾಳ್ ಉಪಾಧ್ಯಾಯ ಮತ್ತು ಬಹದ್ದೂರ್‌ರಾವ್ ದೇವರಸ್ ಅವರು 1946ರಲ್ಲಿ ಸಂಘದ ಪ್ರಚಾರ ಸಂಸ್ಥೆಗಳನ್ನು ಸ್ಥಾಪಿಸುವ ವೇಳೆ ಸಾರ್ವಜನಿಕ ಅಭಿಪ್ರಾಯ ಸೃಷ್ಟಿಸಲು ಹಾಗೂ ಪ್ರಸರಿಸಲು ಅವರು ಅವಕಾಶ ಪಡೆದರು. 21ನೇ ವಯಸ್ಸಿನಲ್ಲಿ ವಾಜಪೇಯಿ, ರಾಷ್ಟ್ರಧರ್ಮ ಪತ್ರಿಕೆಯ ಸಂಪಾದಕರಾದರು. ಸಂಸದೀಯ ರಾಜಕಾರಣವನ್ನು ಪ್ರವೇಶಿಸುವ ಮುನ್ನ ಕೆಲ ವರ್ಷಗಳ ಕಾಲ ಪತ್ರಕರ್ತರಾಗಿದ್ದ ಅವರು, ಪಾಂಚಜನ್ಯವನ್ನು ಆರಂಭಿಸಿದ್ದು ಮಾತ್ರವಲ್ಲದೇ, ವೀರ ಅರ್ಜುನ ಪತ್ರಿಕೆಯ ಸಂಪಾದಕತ್ವವನ್ನೂ ವಹಿಸಿಕೊಂಡರು.

ಅವರ ಮೊದಲ ಚುನಾವಣಾ ಪ್ರಯತ್ನ 1952ರಲ್ಲಿ ಲಕ್ನೋ ಸೆಂಟ್ರಲ್ ಕ್ಷೇತ್ರದಿಂದ ಆರಂಭವಾಯಿತು. ಇದರಲ್ಲಿ ನಿರಾಸೆ ಅನುಭವಿಸಿದರೂ, 1957ರಲ್ಲಿ ಅವರು ಉತ್ತರ ಪ್ರದೇಶದ ಬಲರಾಂಪುರ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದರು. ಇದು ಜೀವನ ಪರ್ಯಂತ ಎಲ್.ಕೆ.ಅಡ್ವಾಣಿಯವರ ಜತೆ ಒಪ್ಪಂದ ಮತ್ತು ವಾದ, ಸ್ನೇಹ ಮತ್ತು ಪೈಪೋಟಿಯ ಅಧ್ಯಾಯವನ್ನು ಆರಂಭಿಸಿತು. ಅಂದು ರಾಜಸ್ಥಾನದವರಾಗಿದ್ದ ಸಿಂಧ್ ಪ್ರಾಂತ್ಯದ ’ನಿರಾಶ್ರಿತ’ ವಾಜಪೇಯಿಯವರನ್ನು ಉಪಾಧ್ಯಾಯ, ಜನ ಸಂಘದ ಐದು ಮಂದಿಯ ತಂಡದಲ್ಲಿ ಸಂಸದೀಯ ಸಂಶೋಧನಾ ಸಹಾಯಕರಾಗಿ ನಿಯೋಜಿಸಿದರು. ಈ ಯುವ ಸಂಸದೀಯ ಪಟು ಮೊದಲ ನೋಟದಲ್ಲೇ ಜವಾಹರಲಾಲ್ ನೆಹರೂ ಅವರನ್ನು ಸೆಳೆದರು.

ಉತ್ತಮ ವಾಗ್ಮಿಯಾಗಿದ್ದ ಇವರು ಹಲವು ಬಾರಿ ಅಡ್ವಾಣಿಯವರ ನೆರವಿನಿಂದ,ಕೇರಳ ಕಮ್ಯುನಿಸ್ಟ್ ಸರಕಾರ ವಜಾಗೊಳಿಸಿದ ಘಟನೆಯಿಂದ ಹಿಡಿದು, ಚೀನಾ ಜತೆಗಿನ ಸಂಘರ್ಷ ವನ್ನು ನಿಭಾಯಿಸಿದ ವಿಚಾರದವರೆಗೆ ಸರಕಾರವನ್ನು ಹಲವು ವಿಷಯಗಳಲ್ಲಿ ಇಕ್ಕಟ್ಟಿಗೆ ಸಿಲುಕಿಸಿದರು. ಇಷ್ಟಾಗಿಯೂ ಅವರು ಇನ್ನೊಂದು ವರ್ಗವನ್ನೂ ಓಲೈಸಿದರು. ನೆಹರೂ ನಿಧನರಾದಾಗ, ಅವರ ಮಾತುಗಳು, ಮಧ್ಯಭಾರತದ ರಾಜಕೀಯ ವಿಭಜನೆಯಲ್ಲಿ ವಾಜಪೇಯಿಗೆ ಖಾಯಂ ಸ್ಥಾನವನ್ನು ಗಳಿಸಿಕೊಟ್ಟವು. ದಲಿತರು ತಮ್ಮ ಸಂರಕ್ಷಕನನ್ನು ಕಳೆದುಕೊಂಡಿದ್ದಾರೆ. ಸಮೂಹದ ಕಣ್ಣಲ್ಲಿ ಅವರು ಧ್ರುವತಾರೆ. ಶಾಂತಿಯೇ ಸ್ವತಃ ಕಂಪಿಸಿದೆ. ಅದರ ಸಂರಕ್ಷಕ ಇನ್ನಿಲ್ಲ. ವಿಶ್ವಭೂಮಿಕೆಯಲ್ಲಿ ಕೊನೆಯ ನಟನೆ ಬಳಿಕ ಪ್ರಧಾನ ಪಾತ್ರ ಕಣ್ಮರೆಯಾಗಿದೆ. ಈ ವೇಳೆಗೆ ವಾಜಪೇಯಿ ಲೋಕಸಭಾ ಸದಸ್ಯತ್ವ ಕಳೆದುಕೊಂಡು ಮೇಲ್ಮನೆಗೆ ಆಯ್ಕೆಯಾಗಿದ್ದರು.

1960ರ ದಶಕದ ಉತ್ತರಾರ್ಧದಲ್ಲಿ ಮತ್ತು 70ರ ದಶಕದ ಪೂರ್ವಾರ್ಧದಲ್ಲಿ, ಬ್ಯಾಂಕ್ ರಾಷ್ಟ್ರೀಕರಣದಿಂದ ಹಿಡಿದು, ಗುಪ್ತ ನಿಧಿ ನಿಷೇಧದ ವರೆಗೆ ಇಂದಿರಾಗಾಂಧಿಯವರ ಆರ್ಥಿಕ ಕ್ರಮಗಳನ್ನು ಬೆಂಬಲಿಸುವ ಮೂಲಕ, ವಾಜಪೇಯಿ ಜನಸಂಘಕ್ಕೆ ಎಡಪಂಥೀಯ ತಿರುವು ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ‘ಮೈ ಕಂಟ್ರಿ, ಮೈ ಲೈಫ್’ ಕೃತಿಯಲ್ಲಿ ಅಡ್ವಾಣಿ ಸ್ಪಷ್ಟಪಡಿಸು ವವರೆಗೂ ವಾಜಪೇಯಿಯವರು ಇಂದಿರಾಗಾಂಧಿ ಹಾಗೂ ದುರ್ಗಾದೇವಿಯನ್ನು ಹೋಲಿ ಸುತ್ತಿದ್ದರು ಎಂದೇ ಜನಜನಿತವಾಗಿತ್ತು. ಆದರೆ ವಾಸ್ತವವಾಗಿ ಜನಸಂಘದ ಸದಸ್ಯರೊಬ್ಬರು ಪಕ್ಷದ ಸಮಾವೇಶದಲ್ಲಿ ನೀಡಿದ ಹೇಳಿಕೆಯನ್ನು ಅವರಿಗೆ ತಪ್ಪಾಗಿ ಆರೋಪಿಸಲಾಗಿತ್ತು.

ಜನತಾ ಪಕ್ಷದ ಸರಕಾರದ ಅವಧಿಯಲ್ಲಿ ವಿದೇಶಾಂಗ ಸಚಿವರಾಗಿ ಮತ್ತು ಅವರು ಪ್ರಧಾನಿ ಯಾಗಿ ಕಾರ್ಯ ನಿರ್ವಹಿಸಿದ ಅವಧಿಯ ಬಗ್ಗೆ ಸಾಖಷ್ಟು ಬರೆಯಬಹುದು. ಆದರೆ, ಆರೆಸ್ಸೆಸ್‌ಗೆ ಪಥ್ಯವಲ್ಲದ ಪಾಕಿಸ್ತಾನ ಮತ್ತು ಚೀನಾ ಜತೆಗೆ ಅವರು ಶಾಂತಿ ಬಯಸಿದ್ದರು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಪೊಖ್ರಾನ್-2 ಅಣ್ವಸ್ತ್ರ ಪರೀಕ್ಷೆಯ ನಿರ್ಧಾರ ಕೂಡಾ ಓಲೈಸುವ ಕ್ರಮವಾಗಿತ್ತು. ಪೊಖ್ರಾನ್-2 ಪರೀಕ್ಷೆಯ ಬಳಿಕ ಭಾರತ ಸುಭದ್ರವಾಗಿದೆಯೇ ಎಂಬ ಪ್ರಶ್ನೆಗೆ ಎಂದೂ ಅವರು ಸಮರ್ಪಕ ಉತ್ತರ ನೀಡಿರಲಿಲ್ಲ.

ಅಧಿಕಾರಾವಧಿಯಲ್ಲಿ ವಾಜಪೇಯಿಯವರು ತಮ್ಮ ಆಕರ್ಷಕ ಸ್ಥಾನಮಾನದಿಂದಾಗಿ ಕೇವಲ ಧಾರ್ಮಿಕವಾಗಿ ಉನ್ನತ ಸ್ಥಾನ ಹೊಂದಿದ್ದರು. ಆದರೆ ಅವರ ಮಾರ್ಗಗಳನ್ನು ವಿರಳವಾಗಿ ಪಾಲಿಸಲಾಗುತ್ತಿದೆ. ಬಿಜೆಪಿ ತನ್ನ ಮಿತ್ರ ಪಕ್ಷಗಳನ್ನು ಮತ್ತು ಮೈತ್ರಿಕೂಟದ ಪಾಲುದಾರರನ್ನು ನಿರ್ವಹಿಸು ವಲ್ಲಿ ಎಡವಿದಾಗ, ಸಮ್ಮಿಶ್ರ ಯುಗವನ್ನು ಪುನರುಜ್ಜೀವನಗೊಳಿಸುವಲ್ಲಿ ವಾಜಪೇಯಿಯವರ ಕೊಡುಗೆ ಮತ್ತು ಇಡೀ ಅವಧಿಯುದ್ದಕ್ಕೂ ಸಮ್ಮಿಶ್ರ ಸರಕಾರ ಮುಂದುವರಿಯುವಲ್ಲಿ ಅವರ ಕೊಡುಗೆಯನ್ನು ಕಡೆಗಣಿಸುವಂತಿಲ್ಲ. ತಮ್ಮ ಜನಾದೇಶವನ್ನು ಪುನಃಸ್ಥಾಪಿಸಿಕೊಂಡಾಗ ಅಂದರೆ 1999ರ ಅಕ್ಟೋಬರ್‌ನಿಂದ ಆರಂಭವಾಗಿ ಒಂದೂವರೆ ದಶಕ ಕಾಲ ರಾಜಕೀಯ ಸ್ಥಿರತೆ ಸಾಧಿಸಿದ ಅವರು, ಸಮ್ಮಿಶ್ರ ಯುಗವನ್ನು ಕಾನೂನುಬದ್ಧಗೊಳಿಸಿ, ಅದಕ್ಕೆ ಬೆಲೆ ತೆತ್ತರು.

ವಾಜಪೇಯಿ ತಮ್ಮ ಪಾಲುದಾರರನ್ನು ಸೂಕ್ತವಾಗಿ ನಿಭಾಯಿಸಿದರು. ಆದರೆ ಸದನವನ್ನು ಸುವ್ಯವಸ್ಥಿತಗೊಳಿಸುವಲ್ಲಿ ವಿಫಲರಾದರು. ಕೆ.ಎಸ್.ಸುದರ್ಶನ್ ಅವರು ಯಾರನ್ನು ಸಚಿವರ ನ್ನಾಗಿ ಮಾಡಬೇಕು, ಯಾರನ್ನು ಹೊರಗಿಡಬೇಕು ಎಂದು ಸೂಚಿಸಿದ್ದರಿಂದ 1998ರ ಮಧ್ಯರಾತ್ರಿ ಯಲ್ಲಿ ಆದ ಅವಮಾನದ ಬಳಿಕ, ಪಕ್ಷದಲ್ಲಿ ಪರ್ಯಾಯ ಶಕ್ತಿಕೇಂದ್ರ ಇರಬಾರದು ಎನ್ನುವುದನ್ನು ಅರ್ಥ ಮಾಡಿಕೊಂಡರು. ಮೂರನೇ ಅವಧಿಯಲ್ಲಿ ಅಂದರೆ 13 ದಿನ ಹಾಗೂ 13 ತಿಂಗಳ ಅಧಿಕಾರಾವಧಿ ಮುಗಿದ ಬಳಿಕ, ಅವರ ಪ್ರಯತ್ನ ಪಕ್ಷದಲ್ಲಿ ನಿಯಂತ್ರಣ ಸಾಧಿಸುವುದಾಗಿತ್ತು. ಬಂಗಾರು ಲಕ್ಷಣ್ ಇದನ್ನು ವಿಫಲಗೊಳಿಸಿದರು ಹಾಗೂ ವಾಜಪೇಯಿಯವರು ಎಂದೂ ವಿನಮ್ರ ಪಕ್ಷವನ್ನು ಹೊಂದಲೇ ಇಲ್ಲ. ಅವರ ಅತಿದೊಡ್ಡ ಲೋಪವೆಂದರೆ, ಆರೆಸ್ಸೆಸ್ ನಾಯಕರನ್ನು ಸಂತುಷ್ಟರಾಗಿಸಲು ವಿಫಲರಾದದ್ದು. ಇದು ಕ್ರಮೇಣ ಎಷ್ಟರ ಮಟ್ಟಿಗೆ ಬೆಳೆಯಿತು ಎಂದರೆ, ಅವರಿಗೆ ಮತ್ತೊಂದು ಅಧಿಕಾರಾವಧಿ ತಪ್ಪಲು ಕಾರಣವಾಯಿತು.

ಅವರ ವೈಫಲ್ಯಗಳು ಸಂಘ ಪರಿವಾರವನ್ನು ನಿರ್ವಹಿಸುವ ಮಾರ್ಗವನ್ನು ಉತ್ತರಾಧಿಕಾರಿಗಳಿಗೆ ತೋರಿಸಿಕೊಟ್ಟವು. ಮೋದಿಯವರಿಗೆ ಭಾಗಶಃ ನೆರವಾಗಿರುವುದು, ವಾಜಪೇಯಿಯವರಿಗಿಂತ ಹೆಚ್ಚಾಗಿ ತಮ್ಮನ್ನು ಹಿಂದುತ್ವದ ಪ್ರತಿಪಾದಕ ಎಂದು ಬಿಂಬಿಸಿಕೊಂಡಿರುವುದು. ಗೌಣಶಕ್ತಿಗಳ ಬಗ್ಗೆ ತೀರಾ ಮೆದುವಾದರು ಹಾಗೂ ತಮ್ಮ ತೆಕ್ಕೆಯಿಂದ ಹೊರಗಿರುವರ ಬಗ್ಗೆ ಬದ್ಧತೆ ಹೊಂದಿ ಕ್ರಮೇಣ ಅವರು ನಿರ್ಜನ ಪ್ರದೇಶ ಸೇರುವಂತಾಯಿತು. ಇಷ್ಟಾಗಿಯೂ ಅವರು ಸಂಘ ಪರಿವಾರದ ಮಟ್ಟಿಗೆ ಸೂಕ್ತ ಸಮಯದ ಸೂಕ್ತ ವ್ಯಕ್ತಿ. ಬಾಬ್ರಿ ಮಸೀದಿ ಧ್ವಂಸದ ಬಳಿಕ ಅಡ್ವಾಣಿ ವಾಜಪೇಯಿಯವರತ್ತ ಮುಖ ಮಾಡಿದರು.

ಅಡ್ವಾಣಿಯಂಥ ಕಟುನಾಯಕರ ಬದಲಾಗಿ ಬಿಜೆಪಿಗೆ ಮಿತ್ರಪಕ್ಷಗಳನ್ನು ಸೆಳೆಯಲು ಸೂಕ್ತ ರಾಜತಾಂತ್ರಿಕ ವ್ಯಕ್ತಿತ್ವದ ಮುಖ ಬೇಕಾಗಿತ್ತು. ಆದರೆ ಅವರ ಬಳಕೆಯ ಅವಧಿ ಮುಗಿದ ತಕ್ಷಣ ಅವರನ್ನು ಸಾರ್ವಜನಿಕ ಜೀವನದಿಂದ ಹೊರಗಿಟ್ಟಿದ್ದರಿಂದ ಜೀವನ ಸುಗಮವಾಯಿತು.

ಕವಿಹೃದಯದ ರಾಜಕಾರಣಿಯಾಗಿ ಅವರು ಬಿಂಬಿಸಿಕೊಂಡರು. ಅವರ ಕವಿತೆಗಳ ಜನಪ್ರಿಯ ಸ್ವರೂಪದ ಬಗ್ಗೆ ಸಾಹಿತ್ಯ ವಿಮರ್ಶಕರು ಭಿನ್ನ ಅಭಿಪ್ರಾಯ ಹೊಂದಿದ್ದರೂ, 1980ರ ದಶಕದಲ್ಲಿ ಬಿಜೆಪಿ ರೂಪುಗೊಂಡ ಬಳಿಕ ಅಧ್ಯಕ್ಷ ಸ್ಥಾನ ವಹಿಸಿ ಅವರು ಮಾಡಿದ ಭಾಷಣಕ್ಕೆ ಅದ್ಭುತ ವೌಲ್ಯವಿದೆ. ಜನತಾ ಪಕ್ಷ ಆರಂಭಿಕ ಭರವಸೆಯ ಬಳಿಕ ಸೀಳಿಹೋಗಿದ್ದರಿಂದ ಹತಾಶ ವಾತಾವರಣ ಇದ್ದ ಸಂದರ್ಭ ಅದು. ಆರೆಸ್ಸೆಸ್ ಕಲ್ಪನೆಗಳ ಪರವಾಗಿದ್ದವರು ರಾಜಕೀಯವಾಗಿ ಅಸ್ಪಶ್ಯರೆನಿಸಿಕೊಂಡಿದ್ದರು. ಇಂದಿರಾಗಾಂಧಿ ಕೂಡಾ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದರು. ಹೊಸದಾಗಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಕೂಡಾ ಸಂಘ ಪರಿವಾರದ ಪ್ರಮುಖ ವೌಲ್ಯಗಳು ಮತ್ತು ಜಯಪ್ರಕಾಶ್ ನಾರಾಯಣ್ ಅವರ ಪರಂಪರೆಯ ನಡುವಿನ ಗೊಂದಲದಲ್ಲಿತ್ತು. ಆದರೆ ವಾಜಪೇಯಿಯವರು ಕಗ್ಗತ್ತಲು ಹೊಸ ಬೆಳಕಿಗೆ ದಾರಿ ಮಾಡಿ ಕೊಡುತ್ತದೆ ಹಾಗೂ ಕಮಲ ಅರಳುತ್ತದೆ ಎಂಬ ವಿಶ್ವಾಸದಲ್ಲಿದ್ದರು.

ಗಾಂಧೀಜಿಯವರ ಸಮಾಜವಾದ ರಾಜಕೀಯ ಪುನರುಜ್ಜೀವನಕ್ಕೆ ರಹದಾರಿಯಾಗುತ್ತದೆ ಎಂದು ವಾಜಪೇಯಿ ಬಲವಾಗಿ ನಂಬಿದ್ದರು. ಆದರೆ, 1984ರಲ್ಲಿ ರಾಜಕೀಯ ಅನನುಭವಿಯಾಗಿದ್ದ ಮಾಧವರಾವ್ ಸಿಂಧ್ಯಾ ಅವರ ವಿರುದ್ಧ ರಾಜಕೀಯ ಮುಖಭಂಗ ಅನುಭವಿಸಿದರು. ಅವರು ಹುದ್ದೆ ತೊರೆದು, ಕಟ್ಟಾ ಹಿಂದುತ್ವವಾದಿ ರಾಜಕಾರಣಕ್ಕೆ ಮತ್ತು ಅಡ್ವಾಣಿಯವರಿಗೆ ದಾರಿ ಮಾಡಿಕೊಟ್ಟರು. ಆ ಕಾಲದಲ್ಲಿ, ನಿಮ್ಮ ನಿರೀಕ್ಷಿತ ನಡೆ ಏನು ಎಂದು ಕೇಳಿದಾಗ, ಹಳೆಯ ಪ್ರಲಾಪದಲ್ಲಿ ನಾನು ಹೋಗಬೇಕೆಂದರೆ ಎಲ್ಲಿ ಹೋಗಬೇಕು? ಎಂದು ಪ್ರತಿಕ್ರಿಯಿಸುತ್ತಿದ್ದರು. ಅಂತಿಮವಾಗಿ ಅವರು ತಮ್ಮ ಗಮ್ಯಸ್ಥಾನ ಕಂಡುಕೊಂಡಿದ್ದಾರೆ.

Writer - ನೀಲಾಂಜನ್ ಮುಖೋಪಾಧ್ಯಾಯ

contributor

Editor - ನೀಲಾಂಜನ್ ಮುಖೋಪಾಧ್ಯಾಯ

contributor

Similar News