ಚೀನಾದ ಪತ್ರಕರ್ತೆಗೆ ಆಮಿರ್ ಖಾನ್ ನೀಡಿದ ಸಂದರ್ಶನದ ವೀಡಿಯೋ ವೈರಲ್

Update: 2018-08-17 09:30 GMT

ಹೊಸದಿಲ್ಲಿ, ಆ.17: ಬಾಲಿವುಡ್ ನಟ ಆಮಿರ್ ಖಾನ್ ಅವರು ಚೀನಾದ ಪತ್ರಕರ್ತೆಯೊಬ್ಬರಿಗೆ ನೀಡಿದ ಸಂದರ್ಶದಲ್ಲಿ ತಮ್ಮ ಹಾಲಿ ಪತ್ನಿ ಕಿರಣ್ ರಾವ್ ಹಾಗೂ ಮಾಜಿ ಪತ್ನಿ ರೀನಾ ದತ್ತ ಜತೆಗಿನ ತಮ್ಮ ಸಂಬಂಧದ ಬಗ್ಗೆ ಹೇಳಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೀಡಿಯೋ ಯಾವಾಗ ಚಿತ್ರೀಕರಿಸಲಾಗಿತ್ತೆಂದು ತಿಳಿಯದೇ ಇದ್ದರೂ ಈ ವರ್ಷದ ಮೊದಲ ಭಾಗದಲ್ಲಿ ಆಮಿರ್ ಖಾನ್ ಚೀನಾಗೆ ಭೇಟಿ ನೀಡಿದ ಸಂದರ್ಭ ನೀಡಿದ ಸಂದರ್ಶನ ಇದೆಂದು ಊಹಿಸಲಾಗಿದೆ. ಆಮಿರ್ ಅವರ ‘ದಂಗಲ್’ ಹಾಗೂ ‘ಸೀಕ್ರೆಟ್ ಸೂಪರ್ ಸ್ಟಾರ್’ ಚಿತ್ರಗಳು ಚೀನಾದಲ್ಲಿ ಯಶಸ್ವಿಯಾಗಿ ಓಡಿದ್ದನ್ನು ಇಲ್ಲಿ ಸ್ಮರಿಸಬಹುದು.

ವೀಡಿಯೋದಲ್ಲಿ ತಾವು ಕಿರಣ್ ಅವರನ್ನು ರೀನಾ ಅವರಿಗೆ ವಿಚ್ಛೇದನ ನೀಡುವ ಮೊದಲೇ ಭೇಟಿಯಾಗಿದ್ದಾಗಿ ಆಮಿರ್ ಹೇಳಿಕೊಂಡಿದ್ದಾರೆ. “ನಾನು ಕಿರಣ್ ರನ್ನು ‘ಲಗಾನ್’ ಚಿತ್ರ ತಯಾರಿಸುತ್ತಿದ್ದಾಗ ಭೇಟಿಯಾಗಿದ್ದೆ. ಆದರೆ ಆಗ ನಮ್ಮ ನಡುವೆ ಯಾವುದೇ ಸಂಬಂಧವಿರಲಿಲ್ಲ, ನಾವು ಉತ್ತಮ ಸ್ನೇಹಿತರೂ ಆಗಿರಲಿಲ್ಲ. ಆಕೆ ನಮ್ಮ ಚಿತ್ರ ತಂಡದ ಒಬ್ಬ ಸದಸ್ಯರಾಗಿದ್ದರಷ್ಟೇ. ವಿಚ್ಛೇದನದ ನಂತರ ನಾವು ಮತ್ತೆ ಭೇಟಿಯಾದೆವು'' ಎಂದು ಆಮಿರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ತಾವು ಮತ್ತು ಕಿರಣ್ ರಾವ್ ಯಾವಾಗ ಡೇಟಿಂಗ್ ಆರಂಭಿಸಿದ್ದು ಹಾಗೂ ಯಾವಾಗ ವಿವಾಹವಾಗಲು ನಿರ್ಧರಿಸಿದ್ದು ಎಂಬ ಬಗ್ಗೆಯೂ ಅವರು ಹೇಳಿದ್ದಾರೆ. “ಆ ಕ್ಷಣದಲ್ಲಿ ಆಕೆಯ ಫೋನ್ ಬಂದಿತ್ತು ಹಾಗೂ ಅರ್ಧ ಗಂಟೆ ಮಾತನಾಡಿದೆ. ಫೋನ್ ಕೆಳಗಿಟ್ಟಾಗ ಆಕೆಯ ಜತೆ ಮಾತನಾಡಿದ್ದಕ್ಕೆ ಖುಷಿಯಾಗಿತ್ತು. ವಿವಾಹವಾಗುವುದಕ್ಕಿಂತ ಮುಂಚೆ ಒಂದು ಅಥವಾ ಒಂದೂವರೆ ವರ್ಷ ನಾವು ಜತೆಯಾಗಿದ್ದೆವು. ಆಕೆಯಿಲ್ಲದೆ ನನ್ನ ಜೀವನವನ್ನು ಊಹಿಸಲು ಸಾಧ್ಯವಿಲ್ಲ” ಎಂದು ಆಮಿರ್ ಹೇಳಿರುವುದು ವೀಡಿಯೋದಲ್ಲಿ ದಾಖಲಾಗಿದೆ.

ಆಮಿರ್ ಮತ್ತ ರೀನಾ ದತ್ತ 1986ರಲ್ಲಿ ವಿವಾಹವಾಗಿದ್ದು, 2002ರಲ್ಲಿ ಅವರು ಪ್ರತ್ಯೇಕಗೊಂಡಿದ್ದರು. ಅವರಿಗೆ  ಇರಾ ಮತ್ತು ಜುನೈದ್ ಎಂಬ ಇಬ್ಬರು ಮಕ್ಕಳಿದ್ದಾರೆ.  ಆಮಿರ್ ಅವರು ಕಿರಣ್ ರಾವ್ ಅವರನ್ನು 2005ರಲ್ಲಿ ವಿವಾಹವಾಗಿದ್ದು ಅವರ ಪುತ್ರ ಆಝಾದ್ ರಾವ್ ಖಾನ್ 2011ರಲ್ಲಿ ಜನಿಸಿದ್ದ.

“ನನಗೆ ರೀನಾ ದತ್ತಾ ಮೇಲೆ ಆಪಾರ ಪ್ರೀತಿ ಮತ್ತು ಗೌರವವಿದೆ. ನಾವು ಪಾನಿ ಯೋಜನೆಯಲ್ಲಿ ಜತೆಯಾಗಿ ಕೆಲಸ ಮಾಡುತ್ತಿದ್ದೇವೆ. ಆಕೆ ಯೋಜನೆಯ ಸಿಇಒ” ಎಂದು ಆಮಿರ್ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News