ನನ್ನ ಮೊಮ್ಮಗ ಗೋರಕ್ಷಕ: ಉಮರ್ ಖಾಲಿದ್ ಮೇಲೆ ದಾಳಿ ನಡೆಸಿದ ಆರೋಪಿಯ ಅಜ್ಜಿ

Update: 2018-08-17 14:23 GMT

ಜಜ್ಜರ್ (ಹರ್ಯಾಣ), ಆ.17: ನನ್ನ ಮೊಮ್ಮಗ ಸ್ಥಳೀಯವಾಗಿ ಎಲ್ಲರ ಪ್ರೀತಿಪಾತ್ರನಾಗಿದ್ದಾನೆ. ಆತ ಯಾವಾಗಲೂ ಗೋರಕ್ಷಣೆಯಲ್ಲಿ ವ್ಯಸ್ತನಾಗಿರುತ್ತಾನೆ ಎಂದು ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಮೇಲೆ ದಾಳಿ ನಡೆಸಿರುವುದಾಗಿ ಹೇಳಿಕೊಂಡಿರುವ ನವೀನ್ ದಲಾಲ್‌ನ ಅಜ್ಜಿ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಆರು ದಿನಗಳ ಹಿಂದೆ ಆತ ಮನೆಯಿಂದ ಹೋದವ ಇನ್ನೂ ವಾಪಸ್ ಬಂದಿಲ್ಲ. ಆದರೆ ನನಗೆ ಆ ಬಗ್ಗೆ ಚಿಂತಿಯಿಲ್ಲ. ಆತ ಯಾವಾಗಲೂ ಗೋರಕ್ಷಣೆಯ ಕಾರ್ಯ ನಿಮಿತ್ತ ಹಲವು ದಿನಗಳ ಕಾಲ ಮನೆಯಿಂದ ದೂರ ಇರುತ್ತಾನೆ ಎಂದು ದಲಾಲ್‌ನ ಏಕಮಾತ್ರ ಜೀವಂತ ಸಂಬಂಧಿಯಾಗಿರುವ ಅಜ್ಜಿ ಗ್ಯಾನೊ ದೇವಿ ತಿಳಿಸಿದ್ದಾರೆ.

ಹರ್ಯಾಣದ ಜಜ್ಜರ್ ಜಿಲ್ಲೆಯಲ್ಲಿರುವ ಮಂಡೊತಿ ಗ್ರಾಮದ ನಿವಾಸಿಯಾಗಿರುವ ನವೀನ್ ದಲಾಲ್ ತನ್ನ ಬಿಎ ಪದವಿ ಶಿಕ್ಷಣ ಮುಗಿಸಿದ ನಂತರ ಗೋರಕ್ಷಣ ಸೇನೆಯನ್ನು ಸ್ಥಾಪಿಸಿ ಯುವಕರನ್ನು ಗೋರಕ್ಷಣೆಗೆ ಪ್ರೇರೇಪಿಸುತ್ತಿದ್ದ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸೋಮವಾರದಂದು ಉಮರ್ ಖಾಲಿದ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಆಗಂತುಕನೊಬ್ಬ ಅವರ ಮೇಲೆ ದಾಳಿ ನಡೆಸಿದ್ದರು. ಘಟನೆಯ ಕುರಿತು ನಂತರ ಫೇಸ್‌ಬುಕ್‌ನಲ್ಲಿ ವಿಡಿಯೊ ಹಾಕಿದ ನವೀನ್ ದಲಾಲ್, ಈ ದಾಳಿಯನ್ನು ನಾನು ಮತ್ತು ನನ್ನ ಗೆಳೆಯ ದರ್ವೇಶ್ ಸಹಾಪುರ್ ನಡೆಸಿರುವುದಾಗಿ ಹೇಳಿಕೊಂಡಿದ್ದ. ಖಾಲಿದ್ ಮೇಲೆ ದಾಳಿ ನಡೆಸಿ ನಾವು ದೇಶಕ್ಕೆ ಸ್ವಾತಂತ್ರದ ಉಡುಗೊರೆಯನ್ನು ನೀಡಲು ಬಯಸಿದ್ದೆವು ಎಂದು ಆತ ಹೇಳಿಕೊಂಡಿದ್ದ. ಆಗಸ್ಟ್ 17ರಂದು ಸಿಖ್ ಕ್ರಾಂತಿಕಾರಿ ಕರ್ತಾರ್ ಸಿಂಗ್ ಸರ್ಬಾ ಅವರ ನಿವಾಸದಲ್ಲಿ ಪೊಲೀಸರಿಗೆ ಶರಣಾಗುವುದಾಗಿ ಆತ ವಿಡಿಯೊದಲ್ಲಿ ತಿಳಿಸಿದ್ದ. ಸದ್ಯ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ದಿಲ್ಲಿ ಪೊಲೀಸರ ವಿಶೇಷ ತಂಡ ಅವರ ಶೋಧಕಾರ್ಯದಲ್ಲಿ ನಿರತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News