400ಕ್ಕೂ ಅಧಿಕ ನೆರೆಸಂತ್ರಸ್ತರಿಗೆ ಆಶ್ರಯ-ಆಹಾರ ನೀಡುತ್ತಿರುವ ಮದ್ರಸ

Update: 2018-08-17 14:29 GMT

ಕೋಝಿಕ್ಕೋಡ್,ಆ.17: ಶತಮಾನದಲ್ಲಿ ಕಂಡರಿಯದ ಭೀಕರ ಮಳೆಯಿಂದ ತತ್ತರಿಸಿರುವ ಕೇರಳದಲ್ಲಿ ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ತಾಲೂಕಿನ ಪೆರಂಬ್ರ ಬ್ಲಾಕ್‌ನ ಚೆರುವನ್ನೂರು ಗ್ರಾಮದಲ್ಲಿಯ ಮದ್ರಸಾವೊಂದು 400ಕ್ಕೂ ಅಧಿಕ ನೆರೆಸಂತ್ರಸ್ತರಿಗೆ ಆಶ್ರಯ-ಆಹಾರ ಒದಗಿಸುವ ಮೂಲಕ ಮಾನವೀಯತೆಯನ್ನು ಮೆರೆದಿದೆ. ಇದಕ್ಕಾಗಿ ಅದು ತನ್ನ ತರಗತಿಗಳನ್ನೂ ರದ್ದುಗೊಳಿಸಿದೆ.

470 ಪುರುಷರು,ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 120 ನಿರ್ವಸಿತ ಕುಟುಂಬಗಳು ಹುಜ್ಜತುಲ್ ಇಸ್ಲಾಂ ಮದ್ರಸಾದಲ್ಲಿ ಆಶ್ರಯ ಪಡೆದುಕೊಂಡಿವೆ.

ಅಹ್ಮದ್ ಮುಸ್ಲಿಯಾರ್ ಅವರ ಮಾರ್ಗದರ್ಶನದಲ್ಲಿ ಮುಸ್ಲಿಂ ಅನಾಥಾಶ್ರಮ ಸಂಸ್ಥೆಯು ನಡೆಸುತ್ತಿರುವ ಈ ಮದ್ರಸಾ ನೆರೆಪೀಡಿತರಿಗೆ ಪರಿಹಾರವನ್ನು ಕಲ್ಪಿಸುವಲ್ಲಿ ಪ್ರಮುಖ ಸಾಮುದಾಯಿಕ ಪ್ರಯತ್ನವಾಗಿದ್ದು,ನಾಲ್ಕು ದಿನಗಳಲ್ಲಿ ಜಿಲ್ಲೆಯ ಅತ್ಯಂತ ದೊಡ್ಡ ಪರಿಹಾರ ಶಿಬಿರಗಳಲ್ಲೊಂದಾಗಿದೆ. ಅದು ಚೆರುವನ್ನೂರು ಮತ್ತು ಸುತ್ತಲಿನ ಗ್ರಾಮಗಳ ನಿರ್ವಸಿತರಿಗೆ ವಸತಿ ಕಲ್ಪಿಸಲು ನೆರೆಯ ಶಾಲಾ ಕಟ್ಟಡವನ್ನೂ ಬಳಸಿಕೊಂಡಿದೆ.

ರವಿವಾರ ಸಮೀಪದ ಪ್ರದೇಶಗಳಲ್ಲಿ ನೆರೆ ನೀರಿನ ಮಟ್ಟ ಹೆಚ್ಚಿದಾಗ ಮದ್ರಸಾ ಎಚ್ಚರಿಕೆಯನ್ನು ಹೊರಡಿಸಿತ್ತು. ಆಗಿನಿಂದ ಹೆಚ್ಚೆಚ್ಚು ಜನರು ಈ ಶಿಬಿರಕ್ಕೆ ಆಗಮಿಸುತ್ತಿದ್ದಾರೆ ಎಂದು ಮದ್ರಸಾಕ್ಕೆ ನೆರವಾಗುತ್ತಿರುವ ಸ್ಥಳೀಯ ನಿವಾಸಿ ಅಜಯ ಕುಮಾರ ಸುದ್ದಿಗಾರರಿಗೆ ತಿಳಿಸಿದರು.

 ಸುತ್ತುಮುತ್ತಲಿನ ಗ್ರಾಮಸ್ಥರು ವಿವಿಧ ತಂಡಗಳಾಗಿ ನೆರವಾಗುತ್ತಿದ್ದಾರೆ. ಕೆಲವರು ಆಹಾರ ಪೂರೈಕೆಯ ಹೊಣೆ ಹೊತ್ತಿದ್ದರೆ ಬಟ್ಟೆಗಳು,ಹೊದಿಕೆಗಳು,ಔಷಧಿಗಳಂತಹ ಇತರ ಅಗತ್ಯ ಸಾಮಗ್ರಿಗಳನ್ನು ಒದಗಿಸುವಂತೆ ಇತರರನ್ನು ಕೋರಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News