ದಿಲ್ಲಿಯ ಘನತ್ಯಾಜ್ಯ ಗಂಭೀರ ಸಮಸ್ಯೆಯಾಗಿದೆ: ಸರ್ವೋಚ್ಚ ನ್ಯಾಯಾಲಯ

Update: 2018-08-17 14:30 GMT

ಹೊಸದಿಲ್ಲಿ, ಆ.17: ದಿಲ್ಲಿಯಲ್ಲಿ ಜಮೆಯಾಗುತ್ತಿರುವ ಘನತ್ಯಾಜ್ಯ ಒಂದು ಅತ್ಯಂತ ಗಂಭೀರ ಸಮಸ್ಯೆಯಾಗಿದೆ ಎಂದು ತಿಳಿಸಿರುವ ಸರ್ವೋಚ್ಚ ನ್ಯಾಯಾಲಯ ಈ ಸಮಸ್ಯೆಯನ್ನು ನಿಭಾಯಿಸಲು ಸಮಿತಿಯನ್ನು ರಚಿಸುವಂತೆ ಲೆಫ್ಟಿನೆಂಟ್ ಗವರ್ನರ್‌ಗೆ ಶುಕ್ರವಾರ ಸೂಚಿಸಿದೆ.

ಈ ಸಮಸ್ಯೆಯಿಂದ ಪಾರಾಗಲು ದಿಲ್ಲಿಯ ಜನರ ಸಹಾಯ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿರುವ ನ್ಯಾಯಾಧೀಶ ಮದನ್ ಬಿ.ಲೋಕುರ್ ನೇತೃತ್ವದ ಪೀಠ, ರಾಜ್ಯಪಾಲರು ರಚಿಸುವ ಸಮಿತಿಯು ಸಂಬಂಧಿತ ಕ್ಷೇತ್ರದ ತಜ್ಞರು, ನಾಗರಿಕ ಸಮಾಜದ ಮತ್ತು ನಿವಾಸಿಗಳ ಕಲ್ಯಾಣ ಸಂಘದ ಸದಸ್ಯರನ್ನು ಒಳಗೊಂಡಿರಬೇಕು ಎಂದು ಆದೇಶಿಸಿದೆ. ಈ ಸಮಿತಿಯು ಗಾಝಿಯಾಬಾದ್, ಓಕ್ಲಾ ಮತ್ತು ಬಲ್ಸ್ವಾದಲ್ಲಿರುವ ತ್ಯಾಜ್ಯ ವಿಲೇವಾರಿ ಪ್ರದೇಶಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಬೇಕು ಎಂದು ನ್ಯಾಯಾಲಯ ಪೀಠ ಆಗ್ರಹಿಸಿದೆ.

ಲೆ.ಗವರ್ನರ್ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್, ಈ ಬಗ್ಗೆ ಎಲ್‌ಜಿ ಜೊತೆ ಮಾತನಾಡಿ ಒಂದು ವಾರದ ಒಳಗೆ ನ್ಯಾಯಾಲಯಕ್ಕೆ ವರದಿ ನೀಡುವುದಾಗಿ ತಿಳಿಸಿದ್ದಾರೆ.

ವಿಷಯದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಪೀಠ ಆಗಸ್ಟ್ 27ಕ್ಕೆ ನಿಗದಿಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News