ಬಿಜೆಪಿಗೆ ವಿರೋಧವೊಂದೇ ಪ್ರತಿಪಕ್ಷಗಳ ಒಗ್ಗಟ್ಟಿಗೆ ಕಾರಣವಲ್ಲ:ರಾಹುಲ್ ಗಾಂಧಿ

Update: 2018-08-17 14:34 GMT

ಹೊಸದಿಲ್ಲಿ,ಆ.17: ಕೇವಲ ಬಿಜೆಪಿಯನ್ನು ವಿರೋಧಿಸಲೆಂದೇ ಪ್ರತಿಪಕ್ಷಗಳು ಒಗ್ಗಟ್ಟಾಗಿದ್ದಲ್ಲ,ಅವುಗಳ ಸಮಾನ ದೃಷ್ಟಿಯೂ ಇದಕ್ಕೆ ಕಾರಣವಾಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು,ಬಿಜೆಪಿ ಸರಕಾರವನ್ನು ಪದಚ್ಯುತಗೊಳಿಸುವುದು ಬಿಟ್ಟರೆ ಪ್ರತಿಪಕ್ಷಗಳು ಯಾವುದೇ ಸಮಾನ ಸಿದ್ಧಾಂತವನ್ನು ಹೊಂದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆಗೆ ತಿರುಗೇಟು ನೀಡಿದ್ದಾರೆ.

ಅವರು ಗುರುವಾರ ಇಲ್ಲಿ ಜೆಡಿಯು ಬಂಡುಕೋರ ನಾಯಕ ಶರದ್ ಯಾದವ್ ಅವರು ಆಯೋಜಿಸಿದ್ದ ‘ಮಿಶ್ರ ಸಂಸ್ಕೃತಿ ಉಳಿಸಿ’ ಅಭಿಯಾನದಲ್ಲಿ ಇತರ ಒಂಭತ್ತು ಪಕ್ಷಗಳ ನಾಯಕರೊಂದಿಗೆ ವೇದಿಕೆಯನ್ನು ಹಂಚಿಕೊಂಡು ಮಾತನಾಡುತ್ತಿದ್ದರು.

ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ಪ್ರತಿಪಕ್ಷಗಳು ಹೇಗೆ ಒಂದಾಗಿವೆ ಎನ್ನುವುದನ್ನು ವಿವರಿಸಿದ ರಾಹುಲ್,ಈ ಬಗ್ಗೆ ಆಳವಾಗಿ ಚಿಂತನೆ ನಡೆಸಿದಾಗ ಭಾರತವು ಎರಡು ದೃಷ್ಟಿಗಳನ್ನು ಹೊಂದಿದೆ ಎಂಬ ನಿರ್ಧಾರಕ್ಕೆ ತಾನು ಬಂದಿದ್ದೇನೆ. ಒಂದು ಬಿಜೆಪಿಯ ಸಿದ್ಧಾಂತ. ಅದರ ಅಧ್ಯಕ್ಷರು ಇತ್ತೀಚಿಗಷ್ಟೇ ಭಾಷಣವೊಂದರಲ್ಲಿ ಭಾರತವೊಂದು ಬಂಗಾರದ ಪಕ್ಷಿ ಎಂದು ಹೇಳಿದ್ದರು. ಎರಡನೆಯದು ನಮ್ಮ ದೃಷ್ಟಿ. ನಾವು ಭಾರತವನ್ನು ಪ್ರತಿಯೊಂದು ಸಿದ್ಧಾಂತದ ತೊರೆಯನ್ನು ತನ್ನೊಳಗೆ ಸೇರಿಸಿಕೊಳ್ಳುವ ನದಿಯಂತೆ ನೋಡುತ್ತಿದ್ದೇವೆ. ಬಿಜೆಪಿಯ ದೃಷ್ಟಿಗೂ ಬ್ರಿಟಿಷರ ದೃಷ್ಟಿಗೂ ವ್ಯತ್ಯಾಸವಿಲ್ಲ. ಅವರು ಈ ಪಕ್ಷಿಯನ್ನು ಬಂಧನದಲ್ಲಿಡಲು ಪಂಜರವೊಂದನ್ನು ನಿರ್ಮಿಸಲು ಬಯಸಿದ್ದಾರೆ ಮತ್ತು ಅವರು ಅದನ್ನು ಮಾಡದಂತೆ ತಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.

ನೋಟು ನಿಷೇಧವಾಗಿರಲಿ ಅಥವಾ ಅವಸರದ ಜಿಎಸ್‌ಟಿ ಜಾರಿಯಾಗಿರಲಿ,ತೀರ ಸಂಕಷ್ಟಕ್ಕೆ ಗುರಿಯಾಗಿರುವುದು ಸಣ್ಣ ಉದ್ಯಮಿಗಳು ಮತ್ತು ಬಡಜನರು ಮಾತ್ರ ಎಂದು ಹೇಳಿದ ಅವರು ರಫೇಲ್ ಒಪ್ಪಂದವನ್ನೂ ಪ್ರಶ್ನಿಸಿದರು.

ಬಿಜೆಪಿಯ ‘ಕಾಂಗ್ರೆಸ್ ಮುಕ್ತ ಭಾರತ’ ಘೋಷಣೆಯನ್ನು ಪ್ರಸ್ತಾಪಿಸಿದ ಅವರು,‘ಬಿಜೆಪಿ ಮುಕ್ತ ಭಾರತ’ಪ್ರತಿಪಕ್ಷದ ಉದ್ದೇಶವಾಗಿಲ್ಲ. ಅವರನ್ನು ಮುಗಿಸಲು,ಕೊಲ್ಲಲು ಅಥವಾ ನಾಶಗೊಳಿಸಲು ನಾವು ಬಯಸಿಲ್ಲ. ಅವರ ಸಿದ್ಧಾಂತವೆ ಇದೆ ಎನ್ನುವುದು ನಮಗೆ ಗೊತ್ತು,ಆದರೆ ನಮ್ಮ ಸಿದ್ಧಾಂತ ಅದಕ್ಕಿಂತ ಬಲಿಷ್ಠವಾಗಿದೆ ಎಂದು ಹೇಳಲಷ್ಟೇ ನಾವು ಬಯಸಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News