ವ್ಯಾಪಂ ಹಗರಣ: ಖಾಸಗಿ ಕಾಲೇಜಿನ ಮಾಜಿ ಮುಖ್ಯಸ್ಥರಿಗೆ ಜಾಮೀನು ನೀಡಲು ನ್ಯಾಯಾಲಯ ನಕಾರ

Update: 2018-08-17 14:34 GMT

ಇಂದೋರ್, ಆ.17: ಮಧ್ಯ ಪ್ರದೇಶದಲ್ಲಿ ನಡೆದಿರುವ ವ್ಯಾಪಂ ಹಗರಣದಲ್ಲಿ ಹಣ ವಂಚನೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಖಾಸಗಿ ವೈದ್ಯಕೀಯ ಕಾಲೇಜಿನ ಮಾಜಿ ಮುಖ್ಯಸ್ಥರಿಗೆ ಜಾಮೀನು ಮಂಜೂರು ಮಾಡಲು ವಿಶೇಷ ನ್ಯಾಯಾಲಯ ನಿರಾಕರಿಸಿದೆ.

ಆರೋಪಿ ವಿನೋದ್ ಭಂಡಾರಿಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಮರೇಶ್ ಸಿಂಗ್ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಭಂಡಾರಿ ವಿರುದ್ಧ ಜಾರಿ ನಿರ್ದೇಶನಾಲಯ ಹಣ ವಂಚನೆ ಆರೋಪ ಹೊರಿಸಿದೆ.

ವ್ಯಾಪಂ (ಮಧ್ಯ ಪ್ರದೇಶ ವೃತ್ತಿಪರ ಪರೀಕ್ಷೆ ಮಂಡಳಿ) ಎಂದು ಕರೆಯಲಾಗುವ ದಾಖಲಾತಿ ಮತ್ತು ನೇಮಕ ಹಗರಣ ನಡೆದ ಸಮಯದಲ್ಲಿ ಭಂಡಾರಿ ಶ್ರೀ ಔರೊಬಿಂದೊ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ವೈದ್ಯಕೀಯ ಕಾಲೇಜಿನ ಮುಖ್ಯಸ್ಥರಾಗಿದ್ದರು ಎಂದು ಇಡಿ ಅಧಿಕಾರಿಗಳು ಆರೋಪಿಸಿದ್ದಾರೆ.

ವಿನೋದ್ ಭಂಡಾರಿ, ಮಧ್ಯ ಪ್ರದೇಶದ ಸರಕಾರಿ ಅಧಿಕಾರಿಗಳು ಮತ್ತು ಪರೀಕ್ಷೆ ಮಾಫಿಯಾ ಜೊತೆ ಸೇರಿಕೊಂಡು 2012 ಮತ್ತು 2013ರ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಯನ್ನು ನಡೆಸುವಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಇಡಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News