ಏಳು ರಾಜ್ಯಗಳಲ್ಲಿ ಮಳೆ,ನೆರೆಯಿಂದಾಗಿ 868 ಜನರ ಸಾವು:ಗೃಹ ಸಚಿವಾಲಯ

Update: 2018-08-17 14:39 GMT

ಹೊಸದಿಲ್ಲಿ,ಆ.17: ಏಳು ರಾಜ್ಯಗಳಲ್ಲಿ ಮಳೆ,ನೆರೆ ಮತ್ತು ಭೂಕುಸಿತಗಳಿಂದಾಗಿ ಈವರೆಗೆ 868 ಜನರು ಸಾವನ್ನಪ್ಪಿದ್ದಾರೆ ಮತ್ತು ಈ ಪೈಕಿ ಕೇರಳವೊಂದರಲ್ಲೇ 247 ಜೀವಗಳು ಬಲಿಯಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯವು ಶುಕ್ರವಾರ ತಿಳಿಸಿದೆ.

ಗೃಹ ಸಚಿವಾಲಯದ ರಾಷ್ಟ್ರೀಯ ತುರ್ತು ಸ್ಥಿತಿ ಪ್ರತಿಕ್ರಿಯೆ ಕೇಂದ್ರ (ಎನ್‌ಇಆರ್‌ಸಿ)ವು ಒದಗಿಸಿರುವ ಅಂಕಿಅಂಶಗಳಂತೆ ಕೇರಳದ 14 ಜಿಲ್ಲೆಗಳಲ್ಲಿ 2.11 ಲಕ್ಷ ಜನರು ಮಳೆ ಮತ್ತು ನೆರೆಯಿಂದಾಗಿ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ ಮತ್ತು 32,500 ಹೆಕ್ಟೇರ್‌ಗೂ ಅಧಿಕ ವಿಸ್ತೀರ್ಣದಲ್ಲಿ ಬೆಳೆ ಹಾನಿಯುಂಟಾಗಿದೆ.

ಉತ್ತರ ಪ್ರದೇಶದಲ್ಲಿ 191,ಪಶ್ಚಿಮ ಬಂಗಾಳದಲ್ಲಿ 183,ಮಹಾರಾಷ್ಟ್ರದಲ್ಲಿ 139,ಗುಜರಾತಿನಲ್ಲಿ 52,ಅಸ್ಸಾಮಿನಲ್ಲಿ 45 ಮತ್ತು ನಾಗಾಲ್ಯಾಂಡ್‌ನಲ್ಲಿ 11 ಜನರು ಮಳೆವಿಕೋಪಕ್ಕೆ ಬಲಿಯಾಗಿದ್ದಾರೆ.

ಕೇರಳದಲ್ಲಿ 28 ಮತ್ತು ಪ.ಬಂಗಾಳದಲ್ಲಿ ಐವರು ಸೇರಿದಂತೆ ಒಟ್ಟು 28 ಜನರು ನಾಪತ್ತೆಯಾಗಿದ್ದಾರೆ ಮತ್ತು ಈ ಏಳು ರಾಜ್ಯಗಳಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ 274 ಜನರು ಗಾಯಗೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ 26,ಅಸ್ಸಾಮಿನಲ್ಲಿ 23,ಪ.ಬಂಗಾಳದಲ್ಲಿ 23,ಕೇರಳದಲ್ಲಿ 14,ಉತ್ತರ ಪ್ರದೇಶದಲ್ಲಿ 13,ನಾಗಾಲ್ಯಾಂಡ್‌ನಲ್ಲಿ 11 ಮತ್ತು ಗುಜರಾತಿನಲ್ಲಿ 10 ಜಿಲ್ಲೆಗಳು ಮಳೆ ಮತ್ತು ನೆರೆಯಿಂದ ಪೀಡಿತವಾಗಿವೆ.

ಕೇರಳದಲ್ಲಿ ಸುಮಾರು ಎರಡು ಲಕ್ಷ ಜನರು ಪರಿಹಾರ ಶಿಬಿರಗಳಲ್ಲಿ ವಾಸವಾಗಿದ್ದು,ಸುಮಾರು 2,000 ರಕ್ಷಣಾ ಕಾರ್ಯಕರ್ತರು ಮತ್ತು 163 ಬೋಟುಗಳನ್ನೊಳಗೊಂಡ 43 ಎನ್‌ಡಿಆರ್‌ಎಫ್ ತಂಡಗಳನ್ನು ರಾಜ್ಯದಲ್ಲಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ನಿಯೋಜಿಸಲಾಗಿದೆ. ಭಾರತೀಯ ವಾಯುಪಡೆಯು 23 ಹೆಲಿಕಾಪ್ಟರ್‌ಗಳು ಮತ್ತು 11 ಸಾರಿಗೆ ವಿಮಾನಗಳನ್ನು ರಕ್ಷಣಾ ಕಾರ್ಯದಲ್ಲಿ ತೊಡಗಿಸಿದೆ. ಇನ್ನೂ ಕೆಲವು ವಿಮಾನಗಳನ್ನು ಬೆಂಗಳೂರು ಮತ್ತು ನಾಗ್ಪುರಗಳಿಂದ ಕಳುಹಿಸಲಾಗುತ್ತಿದೆ.

ಭಾರತೀಯ ನೌಕಾಪಡೆಯು ಮುಳುಗುಗಾರರ ತಂಡಗಳೊಂದಿಗೆ 51 ಬೋಟುಗಳನ್ನು ರಕ್ಷಣಾ ಕಾರ್ಯಾಚರಣೆಗಳಿಗೆ ನಿಯೋಜಿಸಿದೆ. 1,000 ಲೈಫ್ ಜಾಕೆಟ್‌ಗಳು ಮತ್ತು 1,300 ಗಮ್‌ಬೂಟ್‌ಗಳನ್ನು ಶುಕ್ರವಾರ ಕೇರಳಕ್ಕೆ ರವಾನಿಸಲಾಗಿದೆ. ನೌಕಾಪಡೆಯ ಹೆಲಿಕಾಪ್ಟರ್‌ಗಳು ಎರಡು ದಿನಗಳಲ್ಲಿ ಜನರನ್ನು ತೆರವುಗೊಳಿಸಲು 16 ಹಾರಾಟಗಳನ್ನು ನಡೆಸಿದ್ದು,ನೆರೆಯಲ್ಲಿ ಸಿಕ್ಕಿಹಾಕಿಕೊಂಡವರಿಗೆ ಊಟದ ಪೊಟ್ಟಣಗಳನ್ನೂ ಒದಗಿಸುತ್ತಿದೆ. ತಟರಕ್ಷಣಾ ಪಡೆಯ 30 ಬೋಟುಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು,ಸೇನೆಯು ತನ್ನ 10 ಕಾಲಮ್‌ಗಳು,10 ಎಂಜಿನಿಯರಿಂಗ್ ಕಾರ್ಯ ಪಡೆಗಳು,100 ಲೈಫ್ ಜಾಕೆಟ್‌ಗಳೊಂದಿಗೆ 60 ಬೋಟುಗಳನ್ನು ಕಾರ್ಯಾಚರಣೆಗೆ ಇಳಿಸಿದೆ. ಪ್ರಾದೇಶಿಕ ಸೇನೆಯ ಘಟಕವೊಂದನ್ನೂ ಕೇರಳದಲ್ಲಿ ನಿಯೋಜಿಸಲಾಗಿದೆ. ಅಸ್ಸಾಮಿನಲ್ಲಿ 11.45 ಲಕ್ಷ,ಪ.ಬಂಗಾಳದಲ್ಲಿ 2.27 ಲಕ್ಷ,ಉ.ಪ್ರದೇಶದಲ್ಲಿ 1.74ಲಕ್ಷ ಜನರು ಮಳೆಯಿಂದ ಸಂಕಷ್ಟಕ್ಕೊಳಗಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News