ವಿಮಾನ ಹಾರಾಟ ನಿಲ್ಲಿಸುತ್ತೇವೆ: ಏರ್ ಇಂಡಿಯ ಪೈಲಟ್‌ಗಳ ಬೆದರಿಕೆ

Update: 2018-08-17 14:39 GMT

ಹೊಸದಿಲ್ಲಿ, ಆ.17: ನಮ್ಮ ಹಾರಾಟದ ಭತ್ಯೆಯನ್ನು ನೀಡದಿದ್ದರೆ ನಾವು ವಿಮಾನ ಹಾರಾಟ ನಿಲ್ಲಿಸಬೇಕಾಗುತ್ತದೆ ಎಂದು ಏರ್ ಇಂಡಿಯ ವೈಮಾನಿಕ ಸಂಸ್ಥೆಯ ಪೈಲಟ್‌ಗಳು ಬೆದರಿಕೆ ಹಾಕಿದ್ದಾರೆ.

 ಮಂಗಳವಾರದಂದು ಏರ್ ಇಂಡಿಯ ಜುಲೈ ತಿಂಗಳ ಮೂಲ ವೇತನವನ್ನು ಪಾವತಿಸಿತ್ತು. ಆದರೆ ಪೈಲಟ್‌ಗಳಿಗೆ ಮೂಲ ವೇತನವು ಒಟ್ಟಾರೆ ವೇತನದ ಕೇವಲ ಶೇ.30 ಆಗಿದ್ದು ಹಾರಾಟದ ಭತ್ಯೆಯೇ ಪ್ರಮುಖವಾಗಿದೆ. ಏರ್ ಇಂಡಿಯದ ಎಲ್ಲ ಉದ್ಯೋಗಿಗಳಿಗೆ ಆಗಸ್ಟ್ 14ರಂದು ವೇತನ ನೀಡಲಾಗಿದೆ. ಆದರೆ ಏರ್ ಇಂಡಿಯದಲ್ಲಿ ಪೈಲಟ್‌ಗಳ ಮೂಲವೇತನ ಒಟ್ಟಾರೆ ವೇತನದ ಶೇ.30 ಮಾತ್ರ ಆಗಿದೆ. ಸಂಸ್ಥೆಯ ಇತರ ಉದ್ಯೋಗಿಗಳಿಗೆ ಪೂರ್ಣ ವೇತನ ನೀಡಲಾಗುತ್ತಿದೆ. ಆದರೆ ಪ್ರತಿ ತಿಂಗಳು ಪೈಲಟ್‌ಗಳು ಮತ್ತು ವಿಮಾನ ಸಿಬ್ಬಂದಿಗಳ ವೇತನದ ಪ್ರಮುಖ ಭಾಗವಾಗಿರುವ ಹಾರಾಟದ ಭತ್ಯೆಯನ್ನು ಅವರಿಗೆ ನೀಡದೆ ನಿರ್ಲಕ್ಷಿಸಲಾಗುತ್ತಿದೆ ಎಂದು ಭಾರತೀಯ ವಾಣಿಜ್ಯ ಪೈಲಟ್‌ಗಳ ಸಂಘಟನೆ(ಐಸಿಪಿಎ) ಏರ್ ಇಂಡಿಯದ ಆಡಳಿತ ಮಂಡಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿಗೆ ಈ ಹಿಂದೆ ಬರೆದಿರುವ ಪತ್ರದಲ್ಲಿ ಹಾರಾಟದ ಭತ್ಯೆಯನ್ನು ವೇತನದಿಂದ ಪ್ರತ್ಯೇಕಗೊಳಿಸದಂತೆ ಮತ್ತು ಸದ್ಯ ಬಾಕಿಯಿರುವ ವೇತನವನ್ನು ಪಾವತಿಸುವಂತೆ ಮನವಿ ಮಾಡಲಾಗಿತ್ತು.

ಬಾಕಿಯಿರುವ ಹಾರಾಟ ಭತ್ಯೆಯನ್ನು ಶೀಘ್ರ ಪಾವಾತಿಸದೆ ಇದ್ದರೆ ಸಂಸ್ಥೆಗೆ ನಮ್ಮ ಸೇವೆಯು ಲಭ್ಯವಾಗುವುದು ಅನುಮಾನ. ಆದರೆ ಸಂಸ್ಥೆಯು ನಮಗೆ ಮೂಲವೇತನವನ್ನು ನೀಡಿರುವುದರಿಂದ ವಿಮಾನ ಹಾರಾಟ ಹೊರತುಪಡಿಸಿ ಸಂಸ್ಥೆಯಲ್ಲಿ ನಮಗೆ ತಿಳಿದಿರುವ ಇತರ ಕಚೇರಿ ಕೆಲಸವನ್ನು ಮಾಡಲು ನಾವು ಸಿದ್ಧರಿದ್ದೇವೆ ಎಂದು ಸಂಘಟನೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News