ಪ್ರವಾಹಪೀಡಿತ ಕೇರಳಕ್ಕೆ ನೆರವಾಗಲು ಸಿದ್ಧಾರ್ಥ್ ‘ಚಾಲೆಂಜ್’

Update: 2018-08-17 17:14 GMT

ತಿರುವನಂತಪುರ, ಆ.17: ಕೇರಳ ಇತಿಹಾಸದಲ್ಲೇ ಭೀಕರ ಎನಿಸಿರುವ ಪ್ರವಾಹದಿಂದ ಕಂಗೆಟ್ಟ ಜನತೆಗೆ ನಟ ಸಿದ್ಧಾರ್ಥ್ ಸಹಾಯಹಸ್ತ ಚಾಚಿದ್ದಾರೆ. ಜನ ತಮಗೆ ಸಾಧ್ಯವಾದಷ್ಟು ನೆರವು ನೀಡಿ ಎಂದು ಅವರು ಜನತೆಯನ್ನು ಕೋರಿದ್ದಾರೆ.

ತಮ್ಮ ಈ ಸೇವಾ ಕೈಂಕರ್ಯವನ್ನು "ಕೇರಳ ಡೊನೇಷನ್ ಚಾಲೆಂಜ್" ಎಂದು ಕರೆದುಕೊಂಡಿರುವ ಅವರು, ಟ್ವಿಟರ್ ಹ್ಯಾಂಡಲ್‍ನಿಂದ, ಮುಖ್ಯಮಂತ್ರಿ ವಿಕೋಪ ಪರಿಹಾರ ನಿಧಿಗೆ ನೀಡಿದ ದೇಣಿಗೆಯ ರಸೀದಿಯನ್ನು ಪೋಸ್ಟ್ ಮಾಡಿದ್ದಾರೆ. ಜತೆಗೆ ಜನರನ್ನು ದೇಣಿಗೆ ನೀಡುವಂತೆ ಉತ್ತೇಜಿಸುವ ಪತ್ರವನ್ನೂ ಪೋಸ್ಟ್ ಮಾಡಿದ್ದಾರೆ.

"ನಾನು ಧೈರ್ಯದಿಂದ ನಿಮ್ಮಲ್ಲಿ ಭಿಕ್ಷೆ ಬೇಡುತ್ತಿದ್ದೇನೆ!, ನೀವು ಇದನ್ನು ಓದಲು ಮತ್ತು ಶೇರ್ ಮಾಡುವಂತೆ ಮಾಡಲು ನಾನು ಏನು ಮಾಡಬೇಕು?, ನಾನು ಕೇರಳ ಡೊನೇಷನ್ ಚಾಲೆಂಜ್ ಮಾಡಿದ್ದೇನೆ. ಇದು ಆಕರ್ಷಕ!. ನೀವು ಕೂಡಾ? ಪ್ಲೀಸ್?” ಎಂದು ಟ್ವೀಟ್ ಮಾಡಿದ್ದಾರೆ.

"ಈ ಪರಿಸ್ಥಿತಿಗೆ ನೀಡಬೇಕಾದಷ್ಟು ಕಾಳಜಿ ನೀಡಿಲ್ಲ ಎಂಬ ಬಗ್ಗೆ ನನಗೆ ನೋವಿದೆ. 2015ರಲ್ಲಿ ತಮಿಳುನಾಡಿನಲ್ಲಿ ಇಂಥದ್ದೇ ಪ್ರವಾಹ ಬಂದಾಗ ರಾಷ್ಟ್ರೀಯ ಮಾಧ್ಯಮ ನಿರ್ಲಕ್ಷ್ಯ ತೋರಿದ್ದನ್ನು ನನಗೆ ನೆನಪಿಸಿದೆ... ಪ್ರವಾಹ ಪರಿಹಾರಕ್ಕೆ ನೀಡಿದ ಪ್ರತಿಯೊಂದು ರೂಪಾಯಿ ದೇಣಿಗೆ ಕೂಡಾ ದೊಡ್ಡ ವ್ಯತ್ಯಾಸ ತರಬಲ್ಲದು. ರಾತ್ರೋರಾತ್ರಿ ಪವಾಡಸದೃಶ ವಾತಾವರಣ ಸೃಷ್ಟಿಸುವ ವಿಶೇಷ ಶಕ್ತಿ ಸಮಾಜ ಮಾಧ್ಯಮಕ್ಕೆ ಇದೆ ಎನ್ನುವುದು ನನ್ನ ನಂಬಿಕೆ" ಎಂದು ಟ್ವೀಟ್ ಜತೆಗೆ ಬರೆದಿರುವ ಪತ್ರದಲ್ಲಿ ಅವರು ಹೇಳಿದ್ದಾರೆ.

"ಈ ತುರ್ತು ಕಾರಣಕ್ಕೆ ನಿಮಗೆ ಎಷ್ಟು ಸಾಧ್ಯವೋ ಅಷ್ಟು ದೇಣಿಗೆ ನೀಡಿ ಎಂದು ನಾನು ಆಗ್ರಹಿಸುತ್ತೇನೆ. ಇತರರೂ ನಿಮ್ಮ ದೇಣಿಗೆಯಿಂದ ಸ್ಫೂರ್ತಿ ಪಡೆಯಬೇಕಾದರೆ, ನಿಮ್ಮ ದೇಣಿಗೆಯ ಪುರಾವೆಯನ್ನು ಆನ್‍ಲೈನ್‍ನಲ್ಲಿ ಪೋಸ್ಟ್ ಮಾಡಿ. ಇದನ್ನು ಕೇರಳ ಡೊನೇಶನ್ ಚಾಲೆಂಜ್ ಎಂದು ಕರೆಯೋಣ. ಇಂಟರ್‍ನೆಟ್ ಒಂದು ಸವಾಲನ್ನು ಎಷ್ಟು ಪ್ರೀತಿಸುತ್ತದೆ ಎನ್ನುವುದು ನಮಗೆಲ್ಲ ಗೊತ್ತು" ಎಂದು ಬಣ್ಣಿಸಿದ್ದಾರೆ.

ಪರಿಸ್ಥಿತಿಯ ತೀವ್ರತೆ ಬಗ್ಗೆ ಜಾಗೃತಿ ಮೂಡಿಸಲು ಪ್ರವಾಹದ ಬಗ್ಗೆ ಸುದ್ದಿ ಪ್ರಕಟಿಸುವಂತೆ, ಸಮಾಜ ಮಾಧ್ಯಮ ಕೊಡುಗೆ ಮತ್ತು ಪ್ರತಿಕ್ರಿಯೆ ನೀಡುವಂತೆಯೂ ಅವರು ಮನವಿ ಮಾಡಿದ್ದಾರೆ. ಇದು ಕೇರಳದಲ್ಲಿ ಬದಲಾವಣೆ ತರಬಲ್ಲದು ಎಂದು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News