ಸ್ಮಾರ್ಟ್ ಫೋನ್ ಆಯಾಸದಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ?

Update: 2018-08-18 11:14 GMT

ಸ್ಮಾರ್ಟ್ ಫೋನ್ ನಮ್ಮ ಬದುಕಿನಲ್ಲಿ ಪ್ರವೇಶಿಸಿದ ಬಳಿಕ ನಮ್ಮ ನಿದ್ರೆಯ ಸ್ವರೂಪವೇ ಬದಲಾಗಿಬಿಟ್ಟಿದೆ. ನಿದ್ರಿಸುವ ಸಮಯದಲ್ಲಿ ಸ್ಮಾರ್ಟ್ ಫೋನ್‌ನಲ್ಲಿ ನೋಟಿಫಿಕೇಷನ್‌ಗಳಿಗಾಗಿ ನೋಡುವುದು ಹೆಚ್ಚಿನವರ ಅಭ್ಯಾಸವಾಗಿದೆ ಮತ್ತು ಇದು ಕಣ್ಣಿನ ದೃಷ್ಟಿಗೆ ಹಾನಿಯನ್ನುಂಟು ಮಾಡುತ್ತದೆ.

ಸ್ಮಾರ್ಟ್ ಪೋನ್‌ನ ಪರದೆಯಿಂದ ಹೊರಹೊಮ್ಮುವ ನೀಲಿ ಬೆಳಕು ಅಂಧತ್ವವನ್ನು ಉಂಟು ಮಾಡಬಹುದು ಎನ್ನುತ್ತಾರೆ ಅಮೆರಿಕದ ಟೊಲೆಡೊ ವಿವಿಯ ಸಂಶೋಧಕರು. ಹೌದು,ನೀವು ಸರಿಯಾಗಿಯೇ ಓದಿದ್ದೀರಿ. ಈ ನೀಲಿ ಬೆಳಕು ಬೆಳಕನ್ನು ಗ್ರಹಿಸಿ ಮಿದುಳಿಗೆ ಸಂಕೇತಗಳನ್ನು ರವಾನಿಸುವ ಕಣ್ಣಿನಲ್ಲಿಯ ಅಕ್ಷಿಪಟಲ ಅಣುಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಇದರಿಂದಾಗಿ ಉಂಟಾಗುವ ವಿಷಕಾರಿ ರಾಸಾಯನಿಕ ಕ್ರಿಯೆಗಳು ಕಣ್ಣುಗಳಲ್ಲಿಯ ಫೋಟೊರಿಸೆಪ್ಟರ್‌ಗಳು ಅಥವಾ ಬೆಳಕಿಗೆ ಸಂವೇದಿಸುವ ಕೋಶಗಳನ್ನು ಕೊಲ್ಲುತ್ತವೆ ಮತ್ತು ಈ ಕೋಶಗಳು ಒಮ್ಮೆ ಸತ್ತರೆ ಮರುಸೃಷ್ಟಿಯಾಗುವುದಿಲ್ಲ ಎನ್ನುವುದನ್ನು ಸಂಶೋಧನೆಗಳು ಬೆಟ್ಟುಮಾಡಿವೆ.

ಇದು ಅಂಧತ್ವವನ್ನುಂಟು ಮಾಡುವ ಗುಣಪಡಿಸಲಾಗದ ಕಾಯಿಲೆಯಾದ ಮ್ಯಾಕ್ಯುಲರ್ ಡಿಜನರೇಷನ್ ಅಥವಾ ಅಕ್ಷಿಪಟಲದ ಅವನತಿಗೆ ಕಾರಣವಾಗುತ್ತದೆ ಎಂದು ಸೈಂಟಿಫಿಕ್ ರಿಪೋರ್ಟ್ಸ್‌ನಲ್ಲಿ ಪ್ರಕಟಗೊಂಡಿರುವ ಸಂಶೋಧನಾ ವರಿದಿಯು ತಿಳಿಸಿದೆ.

ಟಿವಿ,ಸ್ಮಾರ್ಟ್ ಪೋನ್ ಮತ್ತು ಟ್ಯಾಬ್ಲೆಟ್‌ಗಳು ಹೊರಸೂಸುವ ನೀಲಿಬಣ್ಣದ ಬೆಳಕು ನಮ್ಮ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆಯೂ ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ. ಸ್ಮಾರ್ಟ್ ಫೋನ್ ಬೆಳಕಿನ ತೀವ್ರತೆಯಿಂದ ನಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಕೆಲವು ಸರಳ ಉಪಾಯಗಳಿಲ್ಲಿವೆ.

►ಕಣ್ಣುಗಳಿಗೆ ಕೊಂಚ ವಿಶ್ರಾಂತಿ ನೀಡಿ

ಸ್ಮಾರ್ಟ್ ಫೋನ್ ನೋಡುತ್ತಿದ್ದರೆ ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡ್‌ಗಳ ಕಾಲ ಸ್ಕ್ರೀನ್ ನೋಡುವುದನ್ನು ನಿಲ್ಲಿಸಿ ಮತ್ತು ಸುಮಾರು 20 ಅಡಿಗಳಷ್ಟು ದೂರದ ಯಾವುದಾದರೂ ವಸ್ತುವಿನತ್ತ ದೃಷ್ಟಿಯನ್ನು ಹರಿಸಿ. ಇದರಿಂದ ನಿಮ್ಮ ಕಣ್ಣಿನ ಸ್ನಾಯುಗಳು ಕೆಲಕಾಲ ಸಡಿಲಗೊಳ್ಳುತ್ತವೆ ಮತ್ತು ಕಣ್ಣುಗಳಿಗೆ ಸ್ವಲ್ಪ ವಿಶ್ರಾಂತಿಯನ್ನು ನೀಡುತ್ತವೆ.

►ಕಣ್ಣುಗಳನ್ನು ಮಿಟುಕಿಸುತ್ತಿರಿ

ನೀವು ಸ್ಮಾರ್ಟ್ ಫೋನ್ ವೀಕ್ಷಣೆಯಲ್ಲಿ ಮುಳುಗಿದ್ದಾಗ ಕಣ್ಣುಗಳನ್ನು ಮಿಟುಕಿಸುವುದು ಕಡಿಮೆಯಾಗಿರುತ್ತದೆ. ಇದರಿಂದಾಗಿ ಕಣ್ಣಿನ ಮೇಲ್ಮೈಯಲ್ಲಿನ ನೀರೆಲ್ಲ ಒಣಗಿ ಕಣ್ಣು ತುರಿಕೆ,ಕೆಂಪಗಾಗುವಿಕೆ,ನೋವು ಮತ್ತು ದೃಷ್ಟಿ ಮಸುಕಾಗುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆಗಾಗ್ಗೆ ಕಣ್ಣುಗಳನ್ನು ಮಿಟುಕಿಸುತ್ತಿದ್ದರೆ ಅವು ತೇವವಾಗಿರುತ್ತವೆ ಮತ್ತು ಉರಿತ ಹಾಗೂ ಒಣಗುವಿಕೆ ಕಡಿಮೆಯಾಗುತ್ತದೆ. ಹೀಗಾಗಿ ಪ್ರತಿ 20 ನಿಮಿಷಗಳಲ್ಲಿ ಕನಿಷ್ಠ 10 ಸಲವಾದರೂ ಈ ಕೆಲಸವನ್ನು ಮಾಡಿ.

►ಸ್ಮಾರ್ಟ್ ಫೋನ್‌ನ ಬೆಳಕಿನ ಪ್ರಖರತೆಯನ್ನು ತಗ್ಗಿಸಿ

ಫೋನಿನ ತೀಕ್ಷ್ಣ ಬೆಳಕು ನಿಮ್ಮ ಕಣ್ಣುಗಳಿಗೆ ಬೇಗನೆ ದಣಿವನ್ನುಂಟು ಮಾಡುತ್ತದೆ. ಹೀಗಾಗಿ ನಿಮ್ಮ ಫೋನ್ ಆ್ಯಂಟಿಗ್ಲೇರ್ ಗಾಜನ್ನು ಹೊಂದಿರುವಂತೆ ನೋಡಿಕೊಳ್ಳಿ. ಈ ಗಾಜು ಬೆಳಕಿನ ಪ್ರಖರತೆಯಿಂದ ಕಣ್ಣುಗಳನ್ನು ರಕ್ಷಿಸುತ್ತದೆ. ನಿಮ್ಮ ಸಾಧನದಲ್ಲಿ ನೀಲಿ ಬೆಳಕನ್ನು ಕಡಿಮೆ ಮಾಡಲು ಬೆಳಕನ್ನು ತಗ್ಗಿಸುವ ಆ್ಯಪ್‌ನ್ನು ನೀವು ಡೌನ್ ಲೋಡ್ ಮಾಡಿಕೊಳ್ಳಬಹುದು.

►ಸ್ಮಾರ್ಟ್ ಫೋನ್ ದೂರ ಹಿಡಿದುಕೊಳ್ಳಿ

 ನಮ್ಮಲ್ಲಿ ಹೆಚ್ಚಿನವರು ಉತ್ತಮ ವೀಕ್ಷಣೆಗಾಗಿ ಸ್ಮಾರ್ಟ್ ಫೋನ್‌ನ್ನು ಕಣ್ಣುಗಳಿಂದ ಹೆಚ್ಚೆಂದರೆ ಕೇವಲ ಎಂಟು ಇಂಚು ದೂರದಲ್ಲಿ ಹಿಡಿದುಕೊಳ್ಳುತ್ತೇವೆ. ಆದರೆ ಇದು ಒಳ್ಳೆಯದಲ್ಲ,ಅದರ ನೀಲಿ ಬೆಳಕು ಕಣ್ಣುಗಳಿಗೆ ಹಾನಿ ಮಾಡುತ್ತದೆ. ಫೋನ್‌ನ್ನು ಕಣ್ಣುಗಳಿಂದ ಕನಿಷ್ಠ 16-18 ಇಂಚು ದೂರದಲ್ಲಿ ಹಿಡಿದುಕೊಳ್ಳಲು ಪ್ರಯತ್ನಿಸಿ. ಆರಂಭದಲ್ಲಿ ಇದು ವಿಲಕ್ಷಣವೆನ್ನಿಸಿದರೂ ಕ್ರಮೇಣ ಕಣ್ಣುಗಳು ಅದಕ್ಕೆ ಹೊಂದಿಕೊಳ್ಳುತ್ತವೆ.

►ಮಲಗುವ ಮುನ್ನ ಫೋನ್ ಬಂದ್ ಮಾಡಿ

 ನೀಲಿ ಬೆಳಕು ಮೆಲಾಟೋನಿನ್ ಹಾರ್ಮೋನ್‌ನ ಉತ್ಪಾದನೆಗೆ ಅಡ್ಡಿಯನ್ನುಂಟು ಮಾಡಿ ನಿದ್ರೆಯ ಮೇಲೂ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ನಿದ್ರೆಯ ಆವರ್ತಗಳನ್ನು ಕ್ರಮಬದ್ಧಗೊಳಿಸುವಲ್ಲಿ ಈ ಹಾರ್ಮೋನ್ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಸ್ಮಾರ್ಟ್ ಫೋನ್‌ಗಳಲ್ಲಿಯ ನೀಲಿ ಬೆಳಕನ್ನು ಗುರುತಿಸುವುದರಿಂದ ಅದರ ಉತ್ಪಾದನೆಯು ಕುಂಠಿತಗೊಳ್ಳುತ್ತದೆ. ಹೀಗಾಗಿ ನೀವು ನಿದ್ರೆಗೆ ತೊಡಗುವ ಕನಿಷ್ಠ 30 ನಿಮಿಷಗಳ ಮೊದಲು ನಿಮ್ಮ ಫೋನ್‌ನ್ನು ಸ್ವಿಚ್ ಆಫ್ ಮಾಡಿ.

►ಬೈಟ್‌ನೆಸ್ ಮತ್ತು ಕಾಂಟ್ರಾಸ್ಟ್‌ನ್ನು ಸರಿಹೊಂದಿಸಿ

ಸ್ಕ್ರೀನ್‌ನ ಬೈಟ್‌ನೆಸ್ ಮತ್ತು ಕಾಂಟ್ರಾಸ್ಟ್‌ನ್ನು ಸೂಕ್ತ ಮಟ್ಟಕ್ಕೆ ಹೊಂದಿಸುವ ಮೂಲಕ ಕಣ್ಣುಗಳನ್ನು ರಕ್ಷಿಸಿಕೊಳ್ಳಬಹುದು. ಸ್ಕ್ರೀನ್‌ನ ಬೆಳಕು ಅತಿಯಾಗಿದ್ದರೆ ಅಥವಾ ತುಂಬ ಕಡಿಮೆಯಾಗಿದ್ದರೂ ಕಣ್ಣುಗಳಿಗೆ ದಣಿವನ್ನುಂಟು ಮಾಡುತ್ತದೆ.

►ಕಣ್ಣುಗಳಿಗೆ ನೀರು ಚಿಮುಕಿಸಿತ್ತಿರಿ

ಸ್ಮಾರ್ಟ್ ಫೋನ್‌ನ್ನು ನಿರಂತರವಾಗಿ ನೋಡುತ್ತಿದ್ದರೆ ಆಗಾಗ್ಗೆ ನೀರನ್ನು ಕಣ್ಣುಗಳಿಗೆ ಚಿಮುಕಿಸಿಕೊಳ್ಳಿ. ಇದರಿಂದ ಕಣ್ಣಿನ ಒಣಗುವಿಕೆ ಕಡಿಮೆಯಾಗುತ್ತದೆ. ಮಸುಕು ದೃಷ್ಟಿಯಂತಹ ತೊಂದರೆ ಕಡಿಮೆಯಾಗಿ ದೃಷ್ಟಿಯನ್ನು ಚೆನ್ನಾಗಿ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News