ಮ್ಯಾನ್ಮಾರ್‌ನ 4 ಸೇನಾಧಿಕಾರಿಗಳ ವಿರುದ್ಧ ಅಮೆರಿಕ ದಿಗ್ಬಂಧನ: ರೊಹಿಂಗ್ಯಾ ಮುಸ್ಲಿಮರ ವಿರುದ್ಧದ ಹಿಂಸಾಚಾರಕ್ಕೆ ಶಿಕ್ಷೆ

Update: 2018-08-18 17:17 GMT

ವಾಶಿಂಗ್ಟನ್, ಆ. 18: ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮರಿಗೆ ಹಿಂಸೆ ನೀಡಿ ಮ್ಯಾನ್ಮಾರ್‌ನಿಂದ ಹೊರದಬ್ಬಿರುವುದಕ್ಕಾಗಿ ದೇಶದ ನಾಲ್ವರು ಸೇನಾಧಿಕಾರಿಗಳು ಮತ್ತು 2 ಸೇನಾ ಘಟಕಗಳ ವಿರುದ್ಧ ಅಮೆರಿಕ ಸರಕಾರ ಶುಕ್ರವಾರ ದಿಗ್ಬಂಧನಗಳನ್ನು ವಿಧಿಸಿದೆ.

ಈ ಸೇನಾಧಿಕಾರಿಗಳು ‘ಗಂಭೀರ ಮಾನವಹಕ್ಕುಗಳ ಉಲ್ಲಂಘನೆ’ ಮತ್ತು ‘ಜನಾಂಗೀಯ ನಿರ್ಮೂಲನೆ’ ಮುಂತಾದ ಗಂಭೀರ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಅಮೆರಿಕ ಆರೋಪಿಸಿದೆ.

 ಸೇನಾ ಹಾಗೂ ಗಡಿ ಪಡೆ ಕಮಾಂಡರ್‌ಗಳಾದ ಆಂಗ್ ಕ್ಯಾವ್ ಝಾವ್, ಖಿನ್ ಮಾಂಗ್ ಸೋ, ಖಿನ್ ಹಲೈಂಗ್ ಮತ್ತು ತುರ ಸಾನ್ ಲ್ವಿನ್ ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿರುವ ಮುಸ್ಲಿಮ್ ರೊಹಿಂಗ್ಯಾ ಅಲ್ಪಸಂಖ್ಯಾತರು ಹಾಗೂ ಕಚಿನ್ ಮತ್ತು ಶಾನ್ ರಾಜ್ಯಗಳಲ್ಲಿರುವ ಅಲ್ಪಸಂಖ್ಯಾತರ ವಿರುದ್ಧ ಹಿಂಸಾತ್ಮಕ ಸೇನಾ ಕಾರ್ಯಾಚರಣೆ ನಡೆಸಿದ್ದಾರೆ ಎಂಬುದಾಗಿ ಅಮೆರಿಕ ಆರೋಪಿಸಿದೆ.

ಖಜಾನೆ ಇಲಾಖೆಯು ಈ ಸೇನಾಧಿಕಾರಿಗಳು ಮತ್ತು ಸೇನಾ ತುಕಡಿಗಳ ವಿರುದ್ಧ ದಿಗ್ಬಂಧನಗಳನ್ನು ವಿಧಿಸಿದೆ.

ಈ ಸೇನಾಧಿಕಾರಿಗಳ ವಿರುದ್ಧದ ದಿಗ್ಬಂಧನಗಳು, ಜನಾಂಗೀಯ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ದಾಳಿಗಳನ್ನು ನಿಲ್ಲಿಸುವಂತೆ ಹಾಗೂ ಅವರ ಹಕ್ಕುಗಳನ್ನು ಗೌರವಿಸುವಂತೆ ಬರ್ಮಾದ ಭದ್ರತಾ ಪಡೆಗಳಿಗೆ ನೀಡಿದ ಎಚ್ಚರಿಕೆಯಾಗಿದೆ ಎಂದು ಖಜಾನೆ ಇಲಾಖೆ ಹೇಳಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ವಿರೋಧಿ ಹಿಂಸಾಚಾರ ಭುಗಿಲೆದ್ದ ಬಳಿಕ, ಸುಮಾರು 7 ಲಕ್ಷ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ಅಲ್ಪಸಂಖ್ಯಾತರ ವಿರುದ್ಧ ಹಿಂಸಾತ್ಮಕ ಸೇನಾ ಕಾರ್ಯಾಚರಣೆ

‘‘ಬರ್ಮಾದ ಭದ್ರತಾ ಪಡೆಗಳು ದೇಶಾದ್ಯಂತ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಹಿಂಸಾತ್ಮಕ ಸೇನಾ ಅಭಿಯಾನಗಳಲ್ಲಿ ನಿರತವಾಗಿವೆ. ಅವುಗಳು ಜನಾಂಗೀಯ ನಿರ್ಮೂಲನೆ, ಹತ್ಯಾಕಾಂಡ, ಲೈಂಗಿಕ ಆಕ್ರಮಣ, ನ್ಯಾಯಾಂಗೇತರ ಕೊಲೆಗಳು ಹಾಗೂ ಇತರ ಗಂಭೀರ ಮಾನವಹಕ್ಕು ಉಲ್ಲಂಘನೆಗಳಲ್ಲಿ ತೊಡಗಿವೆ’’ ಎಂದು ಅಮೆರಿಕದ ಖಜಾನೆ ಇಲಾಖೆಯಲ್ಲಿ ಭಯೋತ್ಪಾದನೆ ಮತ್ತು ಆರ್ಥಿಕ ಗುಪ್ತಚರ ವಿಭಾಗದ ಅಧೀನ ಕಾರ್ಯದರ್ಶಿ ಸಿಗಲ್ ಮಂಡೇಲ್ಕರ್ ಹೇಳಿದ್ದಾರೆ.

ಆಕ್ರಮಣಕಾರರ ವಿದೇಶಿ ಆಸ್ತಿಗಳ ಮುಟ್ಟುಗೋಲು

 ಗ್ಲೋಬಲ್ ಮ್ಯಾಗ್ನಿಟ್‌ಸ್ಕಿ ಹ್ಯೂಮನ್ ರೈಟ್ಸ್ ಅಕೌಂಟಬಿಲಿಟಿ ಕಾಯ್ಕೆಯಡಿಯಲ್ಲಿ ಮ್ಯಾನ್ಮಾರ್ ಸೇನಾಧಿಕಾರಿಗಳ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಲಾಗಿದೆ.

 ರಶ್ಯವನ್ನು ಗುರಿಯಾಗಿಸಿ ಮೂಲತಃ ಈ ಕಾಯ್ದೆಯನ್ನು ರೂಪಿಸಲಾಗಿತ್ತು. ಈಗ ಅದನ್ನು ಜಗತ್ತಿನಾದ್ಯಂತದ ಮಾನವಹಕ್ಕು ಉಲ್ಲಂಘನೆಗೆ ಶಿಕ್ಷೆ ವಿಧಿಸಲು ಬಳಸಲಾಗುತ್ತಿದೆ.

ಇದರ ಪ್ರಕಾರ, ದಿಗ್ಬಂಧನಗಳಿಗೆ ಒಳಗಾದವರ ಹೆಸರುಗಳನ್ನು ಜಾಗತಿಕ ಆರ್ಥಿಕ ಮತ್ತು ವಾಣಿಜ್ಯ ಜಾಲಗಳಿಂದ ತೆಗೆದುಹಾಕಲಾಗುವುದು ಹಾಗೂ ಅವರು ವಿದೇಶಗಳಲ್ಲಿ ಹೊಂದಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News