ಅಯೋಗ್ಯ: ಚಿತ್ರಕತೆಯೇ ಇದರ ಪ್ರಮುಖ ಯೋಗ್ಯತೆ

Update: 2018-08-18 18:53 GMT

ನೀನಾಸಂ ಸತೀಶ್ ಎಂದ ಕೂಡಲೇ ನಾಯಕನಾಗಿದ್ದುಕೊಂಡೇ ಒಂಥರಾ ಯಡವಟ್ಟು ಮಾಡಿಕೊಳ್ಳುವ ಪಾತ್ರ ಎಂದು ಫಿಕ್ಸಾಗುತ್ತೇವೆ. ಆದರೆ ಯಡವಟ್ಟು ಮನುಷ್ಯ ಎಂದುಕೊಳ್ಳುವಾಗಲೇ ಪ್ರಸ್ತುತವೆನಿಸುವ ಸಾಧನೆ ಮಾಡುತ್ತಾರೆ ಸತೀಶ್. ಅದೇ ಅಯೋಗ್ಯನ ಯೋಗ್ಯತೆ.

ಮಂಡ್ಯದ ಹಳ್ಳಿ. ರೇಡಿಯೋದಲ್ಲಿ ಮೊಳಗುವ ಹಿಂದೂಸ್ಥಾನವು ಎಂದೂ ಮರೆಯದ ಹಾಡು. ಮೂರು ದಶಕ ಹಿಂದಿನ ಹಳ್ಳಿಯ ವಾತಾವರಣವನ್ನು ಸೊಗಸಾಗಿ ಕಟ್ಟಿಕೊಡುತ್ತಾ ಶುರುವಾಗುವ ಚಿತ್ರ.

ಚಿತ್ರದಲ್ಲಿ ಸತೀಶ್ ಪಾತ್ರದ ಹೆಸರು ಸಿದ್ದ. ರಾಜಕಾರಣಿಯಾಗ ಬಯಸುವ ಸಿದ್ದ ಎಂದೊಡನೆ ಬೇರೇನೋ ಲಿಂಕ್ ಹುಡುಕಬೇಡಿ. ಆತ ಬಯಸುವುದು ಪಂಚಾಯತ್ ಸದಸ್ಯನಾಗಲು. ಅದರ ಫ್ಲ್ಯಾಶ್ ಬ್ಯಾಕೇ ಚಿತ್ರದ ಆರಂಭ. ಹಳ್ಳಿಯಲ್ಲಿ ದಶಕಗಳಿಂದ ಪಂಚಾಯತ್ ಸದಸ್ಯನಾಗಿ ಮುಂದುವರಿಯುತ್ತಲೇ ಇರುವವನು ಬಚ್ಚೇಗೌಡ. ಅಷ್ಟು ವರ್ಷಗಳಲ್ಲಿ ಭ್ರಷ್ಟಾಚಾರವಷ್ಟೇ ಮಾಡಿರುತ್ತಾನೆ. ಕನಿಷ್ಠ ಮೂಲಭೂತ ಸೌಕರ್ಯಗಳ ಬಗ್ಗೆಯೂ ಗಮನಿಸದ ವ್ಯಕ್ತಿ.ಆದರೂ ಅಲ್ಲಿನ ಜನ ಭಯದಿಂದ ಮತ್ತು ಹಣ, ಹೆಂಡ, ಸೀರೆ ಪಡೆದು ಆತನಿಗೇ ಓಟ್ ಹಾಕುತ್ತಿರುತ್ತಾರೆ. ಆದರೆ ಅಯೋಗ್ಯ ಎಂಬ ಪಟ್ಟ ಇಟ್ಟುಕೊಂಡ ಸಿದ್ದ ಹೇಗೆ ಆತನಿಗೆ ಚುನಾವಣೆಯಲ್ಲಿ ಸಡ್ಡು ಹೊಡೆಯುತ್ತಾನೆ ಅನ್ನೋದೇ ಚಿತ್ರದ ಪ್ರಮುಖ ಅಂಶ. ಆದರೆ ಅದಕ್ಕೆ ಪೂರಕವಾಗಿ ಸಾಗುವ ಪ್ರೇಮಕತೆ ಚಿತ್ರದ ಚೆಲುವು.

ನಾಯಕನಾಗಿ ಸತೀಶ್ ನಿರೀಕ್ಷೆಯಂತೆ ಪಾತ್ರಕ್ಕೆ ನ್ಯಾಯಸಲ್ಲಿಸಿದ್ದಾರೆ. ಆದರೆ ಅದಕ್ಕಿಂತಲೂ ಮುಖ್ಯವಾಗಿ ಎಲ್ಲಿಯೂ ಮೂಲ ಎಳೆ ಬಿಟ್ಟುಹೋಗದಂತೆ ಚಿತ್ರಕತೆ ಹೆಣೆದಿರುವ ನಿರ್ದೇಶಕರನ್ನು ಅಭಿನಂದಿಸ ಲೇಬೇಕು. ಹೊಸ ನಿರ್ದೇಶಕರ ಚಿತ್ರ ಎಂದಕೂಡಲೇ ಪ್ರೇಕ್ಷಕರಲ್ಲಿ ಒಂದು ಆತಂಕ ಸಹಜ. ಯಾಕೆಂದರೆ ಅವರು ತಮ್ಮ ಅದುವರೆಗಿನ ಕನಸುಗಳೆಲ್ಲವನ್ನೂ ಒಂದೇ ಚಿತ್ರದಲ್ಲಿ ತುಂಬಿಸಿ ನೋಡುಗರಿಗೆ ಅಜೀರ್ಣಗೊಳಿಸುತ್ತಾರೆ ಎಂಬ ಸಹಜ ಭಯ. ಆದರೆ ಅವೆಲ್ಲವನ್ನು ಸುಳ್ಳು ಮಾಡಿದ ಕೀರ್ತಿ ನಿರ್ದೇಶಕ ಮಹೇಶ್ ಗೆ ಸಲ್ಲುತ್ತದೆ. ಮಾತ್ರವಲ್ಲ ಯೋಗರಾಜ ಭಟ್ಟರ ಶಿಷ್ಯ ಎಂಬ ಕಾರಣಕ್ಕೆ ಅತಿಯಾದ ಸಂಭಾಷಣೆಗಳು, ಕತೆಯಿರದ ಘಟನೆಗಳನ್ನು ಚಿತ್ರಕ್ಕೆ ತುರುಕಿಲ್ಲ ಎನ್ನುವುದು ಅಭಿನಂದನೀಯ.

ಹಳ್ಳಿಯ ಕತೆ ಅಂದರೆ ಅದೇ ಸೊಗಡನ್ನು ಹೈಲೈಟ್ ಮಾಡಲಾಗಿದೆ. ಹಾಡುಗಳ ಮೂಲಕವೂ ಕತೆ ಹಳ್ಳಿ ದಾಟುವುದಿಲ್ಲ. ಮಧ್ಯಂತರದ ಬಳಿಕದ ಹಾಡು ’ಬೆಳದಿಂಗಳು ನೀನೇನಮ್ಮೀ’ ಯಲ್ಲಿನ ಮಾಧುರ್ಯತೆ ಮೂಲಕ ಅರ್ಜುನ್ ಜನ್ಯ ಮನಗೆಲ್ಲುತ್ತಾರೆ. ಅದೇ ರೀತಿ ನಾಯಕಿ ರಚಿತಾರಾಮ್ ಅವರನ್ನು ಮಂಡ್ಯ ಹುಡುಗಿಯಾಗಿ ತೋರಿಸಿರುವ ರೀತಿ ಆಕರ್ಷಕ. ಕಲಾವಿದ ಕಾಸ್ಟ್ಯೂಮ್‌ಗಳಿಗೆ ನೀಡಿರುವ ಕಾಳಜಿಯೂ ಉಲ್ಲೇಖಾರ್ಹ. ಆದರೆ ತೋಳಿಲ್ಲದ ಅಂಗಿಯನ್ನೇ ಹಾಕುವುದಾಗಿ ಹೇಳುವ ಶಿವರಾಜ್ ಕೆಆರ್ ಪೇಟೆ ಮುಂದಿನ ದೃಶ್ಯಗಳಲ್ಲಿ ಅದನ್ನು ಮರೆತೇ ಬಿಡುತ್ತಾರೆ. ಅವರೊಂದಿಗೆ ಸೇರಿದ ಗಿರಿಯ ಹಾಸ್ಯದೃಶ್ಯಗಳು ಮನರಂಜನಾತ್ಮಕ. ರವಿಶಂಕರ್ ಅವರ ಮಲ ಪರೀಕ್ಷಿಸುವ ದೃಶ್ಯ ಸಭ್ಯತೆ ಮೀರಿದಂತೆ ಅನಿಸಿದರೂ ಅದನ್ನೂ ಕತೆಗೆ ಪೂರಕವಾಗಿ ಬಳಸಿರುವ ನಿರ್ದೇಶಕರ ಜಾಣ್ಮೆ ಮೆಚ್ಚುವಂಥದ್ದು. ಬ್ರೋಕರ್ ಪಾತ್ರದಲ್ಲಿ ನಟಿಸಿರುವ ಸುಂದರರಾಜ್‌ಗೆ ಅಪರೂಪದಲ್ಲಿ ಒಂದು ಉತ್ತಮ ಪಾತ್ರ ದೊರಕಿದೆ ಎನ್ನಬಹುದು.

ಸಂಭಾಷಣೆ ಮತ್ತು ಹೊಡೆದಾಟಗಳಲ್ಲಿ ಕೆಲವೆಡೆ ನಾಯಕನಿಗೆ ನೀಡಿರುವ ಬಿಲ್ಡಪ್ ಅತಿಯೆನಿಸುತ್ತದೆ. ಜೊತೆಗೆ ಮದುವೆ ದೃಶ್ಯದ ಗೊಂದಲವನ್ನು ಇನ್ನಷ್ಟು ಚೆನ್ನಾಗಿ ತೋರಿಸಬಹುದಿತ್ತು ಎನ್ನುವುದನ್ನು ಬಿಟ್ಟರೆ ಎಲ್ಲವೂ ಹಿತಮಿತವಾದಂಥ ಚಿತ್ರ ಅಯೋಗ್ಯ. ಒಂದು ಮನರಂಜನಾತ್ಮಕ ಕಮರ್ಷಿಯಲ್ ಚಿತ್ರದ ವೀಕ್ಷಿಸುವ ಆಸಕ್ತಿಯಿದ್ದರೆ ಖಂಡಿತವಾಗಿ ಈ ಚಿತ್ರವನ್ನು ನೀವು ನೋಡಬಹುದು.

ಚಿತ್ರ : ಅಯೋಗ್ಯ
ತಾರಾಗಣ: ನೀನಾಸಂ ಸತೀಶ್, ರಚಿತಾ ರಾಮ್
ನಿರ್ದೇಶನ: ಮಹೇಶ್ ಕುಮಾರ್
ನಿರ್ಮಾಪಕ: ಟಿ.ಆರ್. ಚಂದ್ರಶೇಖರ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News