ಜಯಲಲಿತಾ ಆಗಲಿರುವ ವಿದ್ಯಾ ಬಾಲನ್?

Update: 2018-08-19 11:55 GMT

ಬಾಲಿವುಡ್‌ನಲ್ಲಿ ಸದ್ಯ ಜೀವನಚರಿತ್ರೆಗಳ ಪರ್ವಕಾಲ. ಐತಿಹಾಸಿಕ, ಪ್ರಸ್ತುತ ಪ್ರಸಿದ್ಧ ವ್ಯಕ್ತಿಗಳ ಜೀವನಚರಿತ್ರೆಯನ್ನು ಸಿನೆಮಾ ಆಗಿ ಬೆಳ್ಳಿ ಪರದೆಯ ಮೇಲೆ ತೋರಿಸುವ ಸ್ಪರ್ಧೆಗೆ ಬಾಲಿವುಡ್ ನಿರ್ದೇಶಕರು ಇಳಿದಂತಿದೆ. ಇದೀಗ ಈ ಬಯೋಪಿಕ್ ಅಮಲು ದಕ್ಷಿಣಕ್ಕೂ ಇಳಿದಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನ ಕುರಿತ ಸಿನೆಮಾವನ್ನು ನಿರ್ಮಿಸಲು ಬೃಂದಾ ಪ್ರಸಾದ್ ಅವರ ವಿಬ್ರಿ ಮೀಡಿಯ ಚಿಂತಿಸಿದೆ. ಸಿನೆಮಾದ ಚಿತ್ರೀಕರಣ ಮತ್ತು ಮೊದಲ ನೋಟವನ್ನು ಜಯಲಲಿತಾ ಅವರ ಹುಟ್ಟಿದ ದಿನವಾದ ಫೆಬ್ರವರಿ 24ರಂದು ಆರಂಭಿಸಲು ಬೃಂದಾ ಪ್ರಸಾದ್ ಯೋಚಿಸುತ್ತಿದ್ದಾರೆ. ಅಷ್ಟಕ್ಕೂ ಜಯಲಲಿತಾ ಅವರ ಪಾತ್ರವನ್ನು ನಿಭಾಯಿಸುವುದಾದರೂ ಯಾರು ಎಂಬುದೇ ಎಲ್ಲರ ಕುತೂಹಲದ ಪ್ರಶ್ನೆಯಾಗಿತ್ತು. ನಿರ್ಮಾಣ ಸಂಸ್ಥೆಯ ಪ್ರಕಾರ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರನ್ನು ಈ ಪಾತ್ರಕ್ಕಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ. ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಏಕ ಕಾಲದಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ವಿಜಯ್ ನಿರ್ದೇಶಿಸಲಿದ್ದಾರೆ. ವಿಜಯ್ ಈ ಹಿಂದೆ ಮದರಾಸ್‌ಪಟ್ಟಿಣಂ, ಸೈವಂ ಮತ್ತು ತಲೈವದಂಥ ಯಶಸ್ವಿ ಸಿನೆಮಾಗಳನ್ನು ನಿರ್ದೇಶಿಸಿದ್ದಾರೆ. ಸದ್ಯ ಅವರು ಲಕ್ಷ್ಮಿ ಸಿನೆಮಾದ ಚಿತ್ರೀಕರಣದಲ್ಲಿ ವ್ಯಸ್ತವಾಗಿದ್ದಾರೆ. ವಿದ್ಯಾ ಬಾಲನ್ ಈ ಹಿಂದೆ ದಕ್ಷಿಣದ ಮೋಹಕ ನಟಿ ಸಿಲ್ಕ್ ಸ್ಮಿತಾ ಅವರ ಜೀವನ ಚರಿತ್ರೆ ಡರ್ಟಿ ಪಿಕ್ಚರ್ಸ್‌ನಲ್ಲಿ ಅಭಿನಯಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗುವ ಮೂಲಕ ವಿದ್ಯಾಗೆ ಬಾಲಿವುಡ್‌ನಲ್ಲಿ ಹೊಸ ದರ್ಜೆಯನ್ನು ನೀಡಿತ್ತು. ಇದೀಗ ಜಯಲಲಿತಾ ಜೀವನ ಚರಿತ್ರೆಯಲ್ಲಿ ಆಕೆ ನಟಿಸಿದರೆ ಈ ಸಿನೆಮಾ ಆಕೆಯ ವೃತ್ತಿ ಜೀವನದ ಅತ್ಯಂತ ಪ್ರಮುಖ ಸಿನೆಮಾವಾಗಲಿದೆ. ವಿಬ್ರಿ ಮೀಡಿಯ ಸದ್ಯ ಬಾಲಕೃಷ್ಣ ಅಭಿನಯದ ಎನ್‌ಟಿಆರ್ ಜೀವನ ಚರಿತ್ರೆ ಮತ್ತು 1983ರಲ್ಲಿ ವಿಶ್ವಕಪ್ ಜಯಿಸಿದ ಭಾರತ ಕ್ರಿಕೆಟ್ ತಂಡದ ಕುರಿತ ಸಿನೆಮಾಗಳನ್ನು ನಿರ್ಮಿಸುತ್ತಿದೆ. 83 ಹೆಸರಿನ ಈ ಸಿನೆಮಾದಲ್ಲಿ ರಣವೀರ್ ಸಿಂಗ್ ನಟಿಸುತ್ತಿದ್ದರೆ ಕಬೀರ್ ಖಾನ್ ನಿರ್ದೇಶಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News