ವಾಟ್ಸ್‌ಆ್ಯಪ್ ಶೀಘ್ರವೇ ನಿಮ್ಮ ಹಳೆಯ ವೀಡಿಯೊಗಳು,ಸಂದೇಶಗಳನ್ನು ಅಳಿಸಲಿದೆ,ಅವುಗಳನ್ನು ಹೀಗೆ ಉಳಿಸಿಕೊಳ್ಳಿ.....

Update: 2018-08-19 11:37 GMT

ಬಳಕೆದಾರರ ಅನುಭವವನ್ನು ಹೆಚ್ಚಿಸಲು ವಾಟ್ಸ್‌ಆ್ಯಪ್ ನಿರಂತರವಾಗಿ ಹಲವಾರು ಅಪ್ಡೇಟ್‌ಗಳನ್ನು ತರುತ್ತಲೇ ಇದೆ. ಆದರೆ ಇತ್ತೀಚಿನ ಒಂದು ಅಪ್ಡೇಟ್ ಈ ಆ್ಯಪ್‌ನ್ನು ಕಾಯಂ ಆಗಿ ಬದಲಿಸಲಿದೆ. ವಾಟ್ಸ್‌ಆ್ಯಪ್ ಸಂದೇಶಗಳು,ವೀಡಿಯೊಗಳು ಮತ್ತು ಫೋಟೊಗಳು ಸೇರಿದಂತೆ ನಿಮ್ಮೆಲ್ಲ ಹಳೆಯ ಡಾಟಾವನ್ನು ಸುದೀರ್ಘ ಅವಧಿಗೆ ಸುರಕ್ಷಿತವಾಗಿಡುತ್ತಿತ್ತು. ಆದರೆ,ನಿಮ್ಮ ಡಾಟಾವನ್ನು ಸಂಗ್ರಹಿಸಿಡಲು ಹೊಸದೊಂದು ಮಾರ್ಗವನ್ನು ಕಂಡುಕೊಂಡಿರುವುದಾಗಿ ಅದು ತನ್ನ ಇತ್ತೀಚಿನ ಪೋಸ್ಟ್‌ನಲ್ಲಿ ತಿಳಿಸಿದೆ. ಇನ್ನು ಮುಂದೆ ಅದು ಈ ಡಾಟಾವನ್ನು ಗೂಗಲ್ ಡ್ರೈವ್‌ನಲ್ಲಿ ಸಂಗ್ರಹಿಸಲಿದೆ.

ಬ್ಯಾಕ್-ಅಪ್ ಗೂಗಲ್ ಡ್ರೈವ್‌ನ ಸ್ಟೋರೇಜ್ ಸ್ಪೇಸ್ ಅನ್ನು ಬಳಸಿಕೊಳ್ಳುವುದಿಲ್ಲ ಎಂದೂ ವಾಟ್ಸ್‌ಆ್ಯಪ್ ತಿಳಿಸಿದೆ. ಈ ಎಲ್ಲ ಬ್ಯಾಕ್ಡ್-ಅಪ್ ಸಂದೇಶಗಳು, ಫೋಟೊಗಳು ಮತ್ತು ವೀಡಿಯೊಗಳು ಗೂಗಲ್ ಡ್ರೈವ್‌ನಲ್ಲಿ ಉಳಿಯಲಿವೆ ಮತ್ತು ಬಳಕೆದಾರನ ಸಂಗ್ರಹ ಮಿತಿಯಲ್ಲಿ ಇವುಗಳನ್ನು ಪರಿಗಣಿಸಲಾಗುವುದಿಲ್ಲ.

 ಇದರಿಂದ ನಿಮ್ಮ ಪೋನ್‌ಗಳಲ್ಲಿ ಮಾತ್ರವಲ್ಲ,ಗೂಗಲ್ ಡ್ರೈವ್‌ನಲ್ಲಿಯೂ ಸ್ಟೋರೇಜ್ ಸ್ಪೇಸ್ ಉಳಿಸಲು ಸಾಧ್ಯವಾಗುತ್ತದೆ. 2018,ನವೆಂಬರ್ 12ರಿಂದ ವಾಟ್ಸ್‌ಆ್ಯಪ್ ಬ್ಯಾಕ್-ಅಪ್‌ಗಳು ಗೂಗಲ್ ಡ್ರೈವ್ ಸ್ಟೋರೇಜ್ ಕೋಟಾದಲ್ಲಿ ಬರುವುದಿಲ್ಲ ಎಂದು ವಾಟ್ಸ್‌ಆ್ಯಪ್ ತಿಳಿಸಿದೆ.

ಆದರೆ ಇನ್ನೊಂದೆಡೆ ನಿಮ್ಮ ಕೆಲವು ಹಳೆಯ ಡಾಟಾಗಳನ್ನು ಅಳಿಸುವುದಾಗಿ ಅದು ತಿಳಿಸಿದೆ. ಒಂದು ವರ್ಷಕ್ಕೂ ಹೆಚ್ಚಿನ ಅವಧಿಗೆ ಬ್ಯಾಕ್-ಅಪ್ ಆಗಿರದ ಯಾವುದೇ ಡಾಟಾ ಗೂಗಲ್ ಡ್ರೈವ್‌ನಿಂದ ಆಟೋಮ್ಯಾಟಿಕ್ ಆಗಿ ಮಾಯವಾಗಲಿದೆ.

ವಾಟ್ಸ್‌ಆ್ಯಪ್ ಡಾಟಾ ಏಕೆ ಉಳಿಸಿಕೊಳ್ಳಬೇಕು?

 ನೀವು ನಿಮ್ಮ ಸಾಮಾಜಿಕ ಮಾಧ್ಯಮ ಆರ್ಕೈವ್ಸ್‌ಗೆ ಹೋಗಿ ಯಾವುದೋ ಪೋಟೊ ಅಥವಾ ಸಂದೇಶವನ್ನು ಹುಡುಕಲು ಪ್ರಯತ್ನಿಸಿದಾಗ ಅದು ಶಂಕಾಸ್ಪದವಾಗಿ ನಿಮ್ಮ ಸಾಧನದಿಂದ ಅಳಿಸಲ್ಪಟ್ಟಿರುವುದು ಗೊತ್ತಾದಾಗ ಅದು ತುಂಬ ಬೇಸರವನ್ನುಂಟು ಮಾಡುತ್ತದೆ. ಇಂತಹ ಸ್ಥಿತಿ ಎದುರಾಗಬಾರದು ಎಂದಿದ್ದರೆ ನೀವು 2018,ನ.12ಕ್ಕೆ ಮೊದಲು ನಿಮ್ಮ ವಾಟ್ಸ್ ಆ್ಯಪ್ ಡಾಟಾವನ್ನು ಬ್ಯಾಕ್-ಅಪ್ ಮಾಡಿಕೊಳ್ಳುವುದು ಅಗತ್ಯವಾಗಿದೆ.

ಚಾಟ್‌ಗಳು ಮತ್ತು ಮೀಡಿಯಾವನ್ನು ಗೂಗಲ್ ಡ್ರೈವ್‌ನಲ್ಲಿ ಬ್ಯಾಕ್-ಅಪ್ ಮಾಡಬಹುದು. ಬ್ಯಾಕ್-ಅಪ್ ಫೈಲ್‌ಗಳು ವಿಭಿನ್ನ ಗಾತ್ರಗಳನ್ನು ಹೊಂದಿರಬಹುದು ಮತ್ತು ಮೊಬೈಲ್ ಡಾಟಾವನ್ನು ಬಳಸಿಕೊಂಡು ಹೆಚ್ಚುವರಿ ಶುಲ್ಕಗಳಿಗೆ ಕಾರಣವಾಗಬಹುದಾದ್ದರಿಂದ ಗೂಗಲ್ ಡ್ರೈವ್ ಮೂಲಕ ಚಾಟ್‌ಗಳನ್ನು ಬ್ಯಾಕ್-ಅಪ್ ಮಾಡುವ ಮುನ್ನ ತಮ್ಮ ಪೋನ್‌ಗಳನ್ನು ವೈ-ಫೈಗೆ ಸಂಪರ್ಕಿಸುವಂತೆ ವಾಟ್ಸ್ ಆ್ಯಪ್ ಬಳಕೆದಾರರಿಗೆ ಸಲಹೆ ನೀಡಿದೆ.

ಡಾಟಾ ಬ್ಯಾಕ್-ಅಪ್ ಮಾಡುವುದು ಹೇಗೆ?

ಇದಕ್ಕಾಗಿ ಮೊದಲು ನಿಮ್ಮ ವೈ-ಫೈಯನ್ನು ಸ್ವಿಚ್ ಆನ್ ಮಾಡಬೇಕು. ನಂತರ ವಾಟ್ಸ್‌ಆ್ಯಪ್‌ನ್ನು ತೆರೆದು ಮೆನುಗೆ ಹೋಗಬೇಕು. ಸೆಟಿಂಗ್ಸ್‌ನ್ನು ಮತ್ತು ನಂತರ ಚಾಟ್ಸ್‌ನ್ನು ತೆರೆದು ಚಾಟ್ ಬ್ಯಾಕ್-ಅಪ್‌ನ್ನು ಕ್ಲಿಕ್ಕಿಸಿ. ನೀವು ಬ್ಯಾಕ್ ಅಪ್ ಆಯ್ಕೆ ಮಾಡಿಕೊಂಡರೆ ನಿಮ್ಮ ಪೋನ್‌ನಲ್ಲಿರುವ ಎಲ್ಲವೂ ಆಟೊಮ್ಯಾಟಿಕ್ ಆಗಿ ಗೂಗಲ್ ಡ್ರೈವ್‌ಗೆ ಬ್ಯಾಕ್ ಅಪ್ ಆಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News