ಎನ್‌ಪಿಎ ಬಿಕ್ಕಟ್ಟು: ರಘುರಾಮ ರಾಜನ್ ಸಲಹೆ ಕೋರಿದ ಸಂಸದೀಯ ಸಮಿತಿ

Update: 2018-08-19 13:21 GMT

ಹೊಸದಿಲ್ಲಿ,ಆ.19: ಹೆಚ್ಚುತ್ತಿರುವ ಬ್ಯಾಂಕುಗಳ ಅನುತ್ಪಾದಕ ಸಾಲ(ಎನ್‌ಪಿಎ)ಗಳ ಸಮಸ್ಯೆಯನ್ನು ಪರಿಶೀಲಿಸುತ್ತಿರುವ ಅಂದಾಜುಗಳ ಕುರಿತ ಸಂಸದೀಯ ಸಮಿತಿಯು ತನ್ನ ಮುಂದೆ ಹಾಜರಾಗಿ ಈ ಬಗ್ಗೆ ವಿವರಿಸುವಂತೆ ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರನ್ನು ಕೇಳಿಕೊಂಡಿದೆ.

ಮಾಜಿ ಮುಖ್ಯ ಆರ್ಥಿಕ ಸಲಹೆಗಾರ(ಸಿಇಎ) ಅರವಿಂದ ಸುಬ್ರಮಣಿಯನ್ ಅವರು ಸಮಿತಿಯ ಮುಂದೆ ರಾಜನ್‌ರನ್ನು ಪ್ರಶಂಸಿಸಿ,ಎನ್‌ಪಿಎ ಸಮಸ್ಯೆಯನ್ನು ಗುರುತಿಸಿದ್ದ ಹೆಗ್ಗಳಿಕೆಯನ್ನು ಅವರಿಗೆ ನೀಡಿದ ಬಳಿಕ ಎನ್‌ಪಿಎ ಬಿಕ್ಕಟ್ಟಿನ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಮತ್ತು ಅದನ್ನು ಬಗೆಹರಿಸಲು ಸಲಹೆ ಪಡೆದುಕೊಳ್ಳಲು ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ ಜೋಶಿ ನೇತೃತ್ವದ ಸಂಸದೀಯ ಸಮಿತಿಯು ಅವರನ್ನು ಆಹ್ವಾನಿಸಿದೆ.

ಸಮಿತಿಯ ಮುಂದೆ ಹಾಜರಾಗಿ ಹೆಚ್ಚುತ್ತಿರುವ ಎನ್‌ಪಿಎಗಳ ಬಗ್ಗೆ ಸದಸ್ಯರಿಗೆ ವಿವರಿಸುವಂತೆ ಜೋಶಿ ಅವರು ರಾಜನ್‌ಗೆ ಪತ್ರವೊಂದನ್ನು ಬರೆದಿದ್ದಾರೆ.

ಸೆಪ್ಟೆಂಬರ್,2016ರವರೆಗೆ ಆರ್‌ಬಿಐ ಗವರ್ನರ್ ಆಗಿ ಕರ್ತವ್ಯ ನಿರ್ವಹಿಸಿದ್ದ ರಾಜನ್ ಹಾಲಿ ಅಮೆರಿಕದ ಚಿಕಾಗೋ ಬೂತ್ ಸ್ಕೂಲ್‌ನಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಳೆದ ತಿಂಗಳು ಸಿಇಎ ಆಗಿದ್ದಾಗ ಸಮಿತಿಯ ಮುಂದೆ ಹಾಜರಾಗಿದ್ದ ಸುಬ್ರಮಣಿಯನ್ ಅವರು ಕೆಟ್ಟ ಸಾಲಗಳ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು. ಎನ್‌ಪಿಎಗಳ ನಿರ್ವಹಣೆ ಕುರಿತು ತನ್ನ ಹೇಳಿಕೆಯಲ್ಲಿ ಶಂಕೆಯನ್ನು ವ್ಯಕ್ತಪಡಿಸಿದ್ದ ಅವರು,ಸಾರ್ವಜನಿಕ ಕ್ಷೇತ್ರಗಳಿಂದ ದೊಡ್ಡ ಪ್ರಮಾಣದ ಸಾಲಗಳು ಪ್ರಭಾವಿತವಾಗಿದ್ದವು ಎಂಬ ಸುಳಿವು ನೀಡಿದ್ದರು. ಆದರೆ ಈ ಸಾಲಗಳನ್ನು ಮಂಜೂರು ಮಾಡುವಂತೆ ಯಾರು ಹೇಗೆ ಪ್ರಭಾವ ಬೀರಿದ್ದರು ಎನ್ನುವುದನ್ನು ವಿವರಿಸಿರಲಿಲ್ಲ. ಬ್ಯಾಂಕುಗಳಲ್ಲಿ ಭೀತಿಯ ವಾತಾವರಣವಿದ್ದು,ಅವೀಗ ಸಾಲಗಳನ್ನು ನೀಡಲು ಹಿಂಜರಿಯುತ್ತಿವೆ ಎಂದು ಹೇಳಿದ್ದರು.

ಸಮಿತಿಯು ಈಗಾಗಲೇ ವಿತ್ತ ಸಚಿವಾಲಯದ ಹಿರಿಯ ಅಧಿಕಾರಿಗಳನ್ನು ಈ ಬಗ್ಗೆ ಪ್ರಶ್ನಿಸಿದೆ.

ಬ್ಯಾಂಕುಗಳ ಎನ್‌ಪಿಎ ಮೊತ್ತ 8.99 ಲಕ್ಷ ಕೋಟಿ ರೂ.ಗಳನ್ನು ತಲುಪಿದ್ದು,ಇದು 2017,ಡಿಸೆಂಬರ್ ಅಂತ್ಯದಲ್ಲಿದ್ದ ಒಟ್ಟು ಸಾಲಗಳ ಶೇ.10.11ರಷ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News