ಪ್ರಮುಖ ಶೂಟರ್ ಮಹಾರಾಷ್ಟ್ರ, ಕರ್ನಾಟಕದಲ್ಲಿ ತರಬೇತಿ ಪಡೆದಿದ್ದ: ನ್ಯಾಯಾಲಯದಲ್ಲಿ ಸಿಬಿಐ ಹೇಳಿಕೆ

Update: 2018-08-19 13:28 GMT

ಪುಣೆ,ಆ.19: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಪ್ರಮುಖ ಶೂಟರ್ ಸಚಿನ್ ಪ್ರಕಾಶರಾವ್ ಅಂದುರೆ ಮಹಾರಾಷ್ಟ್ರ ಮತ್ತು ಕರ್ನಾಟಕದ ವಿವಿಧ ಕಡೆಗಳಲ್ಲಿ ಗುಂಡು ಹಾರಿಸುವ ತರಬೇತಿಯನ್ನು ಪಡೆದುಕೊಂಡಿದ್ದ ಎಂದು ಸಿಬಿಐ ರವಿವಾರ ಇಲ್ಲಿಯ ಜೆಂಎಂಎಫ್‌ಸಿ ನ್ಯಾಯಾಲಯಕ್ಕೆ ತಿಳಿಸಿದೆ.

ಔರಂಗಾಬಾದ್‌ನ ನಿರಾಲಾ ಬಝಾರ್‌ನ ಗಾರ್ಮೆಂಟ್ಸ್ ಅಂಗಡಿಯೊಂದರಲ್ಲಿ ಸೇಲ್ಸ್‌ಮನ್ ಆಗಿರುವ ಅಂದುರೆಯನ್ನು ಶನಿವಾರ ಸಂಜೆ ಪುಣೆಯಿಂದ ಬಂಧಿಸಲಾಗಿತ್ತು. ಆತನನ್ನು ಬಿಗಿಭದ್ರತೆಯ ನಡುವೆ ನ್ಯಾ.ಎ.ಎಸ್.ಮುಜುಮದಾರ್ ಅವರೆದುರು ಹಾಜರು ಪಡಿಸಲಾಗಿದ್ದು, ಆ.26ರವರೆಗೆ ಸಿಬಿಐ ಕಸ್ಟಡಿಯನ್ನು ವಿಧಿಸಲಾಗಿದೆ.

 2013,ಆ.20ರಂದು ಬೆಳಿಗ್ಗೆ ವಾಯುವಿಹಾರದಲ್ಲಿ ತೊಡಗಿದ್ದ ದಾಬೋಲ್ಕರ್(67) ಅವರಿಗೆ ಪುಣೆಯ ಓಂಕಾರೇಶ್ವರ ಸೇತುವೆಯಲ್ಲಿ ಗುಂಡಿಕ್ಕಿದ್ದ ಇಬ್ಬರು ಬೈಕ್ ಸವಾರರಲ್ಲಿ ಅಂದುರೆ ಓರ್ವನಾಗಿದ್ದಾನೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತು.

ಡಾ.ತಾವ್ಡೆ ಮತ್ತು ಅಂದುರೆ ಇಡೀ ಪ್ರಕರಣದ ಸಂಚನ್ನು ರೂಪಿಸಿದ್ದರು ಎಂದೂ ಅದು ಹೇಳಿತು. ಹಿಂದು ಜನಜಾಗ್ರತಿ ಸಮಿತಿ ಸದಸ್ಯ ಡಾ.ವೀರೇಂದ್ರ ತಾವ್ಡೆಯನ್ನು ಸಿಬಿಐ 2016,ಜೂನ್‌ನಲ್ಲಿ ನವಿಮುಂಬೈ ಬಳಿಯ ಪನ್ವೇಲ್‌ನ ಆತನ ನಿವಾಸದಿಂದ ಬಂಧಿಸಿತ್ತು. ದೋಷಾರೋಪಣೆ ಪಟ್ಟಿಯಲ್ಲಿ ಆತನನ್ನು ಮುಖ್ಯ ಸಂಚುಕೋರನೆಂದು ಹೆಸರಿಸಲಾಗಿದೆ.

ತರಬೇತಿ ಪಡೆದಿದ್ದ ಸ್ಥಳಗಳು,ಹಂತಕರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿದ್ದ ವ್ಯಕ್ತಿಗಳು ಮತ್ತು ಸಂಚಿನ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳಲು ಅಂದುರೆಯನ್ನು 14 ದಿನಗಳ ಅವಧಿಗೆ ತನ್ನ ವಶಕ್ಕೆ ನೀಡುವಂತೆ ಸಿಬಿಐ ನ್ಯಾಯಾಲಯವನ್ನು ಕೋರಿತ್ತು.

ರಾಜ್ಯದಲ್ಲಿ ಸ್ಫೋಟಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಆರೋಪದಲ್ಲಿ ಕಳೆದ ವಾರ ಮೂವರನ್ನು ಬಂಧಿಸಿದ್ದ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್)ವು ನೀಡಿದ್ದ ಮಾಹಿತಿಯ ಮೇರೆಗೆ ಅಂದುರೆಯನ್ನು ಬಂಧಿಸಲಾಗಿದೆ. ಅಂದುರೆ ದಾಭೋಲ್ಕರ್ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ಬಂಧಿತರ ಪೈಕಿ ಓರ್ವ ಎಟಿಎಸ್ ವಿಚಾರಣೆ ಸಂದರ್ಭ ಬಾಯಿಬಿಟ್ಟಿದ್ದ ಎಂದು ಸಿಬಿಐ ವಕ್ತಾರರು ತಿಳಿಸಿದರು.

ಮಾಜಿ ಶಿವಸೇನೆ ಕಾರ್ಪೊರೇಟರ್ ಸೆರೆ

ದಾಭೋಲ್ಕರ್ ಹತ್ಯೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಜಾಲ್ನಾ ಮಹಾನಗರ ಪಾಲಿಕೆಯ ಮಾಜಿ ಶಿವಸೇನೆ ಕಾರ್ಪೊರೇಟರ್ ಶ್ರೀಕಾಂತ ಪಂಗರಕರ್ ಎಂಬಾತನನ್ನು ಸಿಬಿಐ ಶನಿವಾರ ರಾತ್ರಿ ಬಂಧಿಸಿದೆ.

ದಾಭೋಲ್ಕರ್ ಹತ್ಯೆ ಸಂದರ್ಭ ಪಂಗರಕರ್ ತನ್ನೊಂದಿಗಿದ್ದ ಎಂದು ಅಂದುರೆ ವಿಚಾರಣೆ ವೇಳೆ ಮಾಹಿತಿ ನೀಡಿದ್ದ. ಹತ್ಯೆ ಸಂದರ್ಭ ಅಂದುರೆ ಚಲಾಯಿಸುತ್ತಿದ್ದ ಬೈಕ್‌ನಲ್ಲಿ ಪಂಗರಕರ್ ಸಹಸವಾರನಾಗಿದ್ದ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News