ಗೋವಾಕ್ಕೂ ಕೇರಳದ ಸ್ಥಿತಿ ಬರಬಹುದು: ಪರಿಸರ ತಜ್ಞ ಮಾಧವ ಗಾಡ್ಗೀಳ್ ಎಚ್ಚರಿಕೆ

Update: 2018-08-19 14:54 GMT

ಪಣಜಿ,ಆ.19: ಗೋವಾ ಪರಿಸರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿದ್ದರೆ ಅದೂ ಕೂಡ ನೆರೆಪೀಡಿತ ಕೇರಳದ ಸ್ಥಿತಿಯನ್ನೇ ಎದುರಿಸಬೇಕಾಗಬಹುದು ಎಂದು ಖ್ಯಾತ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರು ಎಚ್ಚರಿಕೆ ನೀಡಿದ್ದಾರೆ. ಇತರ ರಾಜ್ಯಗಳಂತೆ ಗೋವಾದಲ್ಲಿಯೂ ಅಕ್ರಮ ಗಣಿಗಾರಿಕೆಯಂತಹ ಲಾಭಬಡುಕತನದ ಚಟುವಟಿಕೆಗಳು ಹೆಚ್ಚುತ್ತಿವೆ.

ವ್ಯಾಪಕ ಚರ್ಚೆಗೀಡಾಗಿರುವ ಪಶ್ಚಿಮ ಘಟ್ಟಗಳ ಕುರಿತು ಅಧ್ಯಯನ ವರದಿಯನ್ನು ಗಾಡ್ಗೀಳ್ ನೇತೃತ್ವದ ಸಮಿತಿಯು ಕೆಲವು ವರ್ಷಗಳ ಹಿಂದೆ ಪ್ರಕಟಿಸಿತ್ತು.

ಕೇರಳದಲ್ಲಿನ ಭೀಕರ ಪ್ರವಾಹ ಸ್ಥಿತಿಗೆ ಪ್ರತಿಕ್ರಿಯಿಸಿದ ಗಾಡ್ಗೀಳ್,ಪಶ್ಚಿಮ ಘಟ್ಟಗಳಲ್ಲಿ ಪರಿಸರಕ್ಕೆ ಸಂಬಂಧಿಸಿದ ಎಲ್ಲ ಬಗೆಯ ಸಮಸ್ಯೆಗಳು ಪ್ರಕಟಗೊಳ್ಳತೊಡಗಿವೆ. ಕೇರಳದಲ್ಲಿರುವಂತೆ ಪಶ್ಚಿಮ ಘಟ್ಟಗಳು ಗೋವಾದಲ್ಲಿಲ್ಲ,ನಿಜ. ಆದರೆ ಗೋವಾ ಕೂಡ ಎಲ್ಲ ಬಗೆಯ ಸಮಸ್ಯೆಗಳನ್ನು ಅನುಭವಿಸಲಿದೆ ಎನ್ನುವುದು ತನಗೆ ಖಚಿತವಿದೆ ಎಂದರು.

ಪರಿಸರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿರಲು ಅತಿಯಾದ ಲಾಭದ ಆಸೆಯೇ ಕಾರಣವಾಗಿದೆ ಎಂದ ಅವರು,ಇದು ಗೋವಾದಲ್ಲಿಯೂ ಕಂಡು ಬರುತ್ತಿದೆ. ಅಕ್ರಮ ಗಣಿಗಾರಿಕೆಯಿಂದ 35,000 ಕೋ.ರೂ.ಗಳ ಅಕ್ರಮ ಲಾಭವನ್ನು ಕೇಂದ್ರ ಸರಕಾರವು ರಚಿಸಿದ್ದ ನ್ಯಾ.ಎಂ.ಬಿ.ಶಾ ಆಯೋಗವು ಅಂದಾಜಿಸಿದೆ ಎಂದರು.

ಭಾರೀ ಲಾಭದ ದುರಾಸೆಗೆ ಕಡಿವಾಣ ಬಿದ್ದಿಲ್ಲ ಮತ್ತು ಇದು ಸಮಾಜದಲ್ಲಿಯ ಆರ್ಥಿಕ ಅಸಮಾನತೆಯನ್ನು ಇನ್ನಷ್ಟು ಹದಗೆಡಿಸಿದೆ ಎಂದ ಅವರು,ಇಂತಹ ಮಾರ್ಗಗಳ ಮೂಲಕ ದುಡ್ಡು ಮಾಡುತ್ತಿರುವವರು ಈಗ ಇಂತಹ ಅಕ್ರಮ ಚಟುವಟಿಕೆಗಳಿಗೆ ಸರಕಾರದ ಅನುಮತಿ ಪಡೆದುಕೊಳ್ಳುವಲ್ಲಿ ಇನ್ನಷ್ಟು ಪ್ರಭಾವಿಗಳಾಗಿದ್ದಾರೆ . ಪರಿಸರ ನಿಯಮಗಳನ್ನು ಜಾರಿಗೊಳಿಸುವಲ್ಲಿ ಸರಕಾರಗಳು ಉದಾಸೀನ ತಳೆದಿವೆ ಎಂದರು.ವಾಸ್ತವದಲ್ಲಿ ಕೇಂದ್ರ ಸರಕಾರವೇ ರಾಷ್ಟ್ರಿಯ ಹಸಿರು ನ್ಯಾಯಾಧಿಕರಣವು ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸದಂತೆ ಮಾಡುತ್ತಿದೆ ಎಂದು ಅವರು ಆರೋಪಿಸಿದರು.ಈ ಹಿಂದೆ ಕಬ್ಬಿಣ ಅದಿರು ಗಣಿಗಾರಿಕೆ ಕಂಪನಿಗಳು ಒದಗಿಸಿದ್ದ ಮಾಹಿತಿಗಳು ಮತ್ತು ಅವುಗಳ ಪರಿಸರ ಪರಿಣಾಮ ವೌಲ್ಯಮಾಪನ ವರದಿ(ಇಐಎ)ಗಳ ಆಧಾರದಲ್ಲಿ ಗೋವಾದ ಪರಿಸರದ ಕುರಿತು ವ್ಯಾಪಕ ಅಧ್ಯಯನ ನಡೆಸಿದ್ದ ಗಾಡ್ಗೀಳ್,ಗಣಿಗಾರಿಕೆ ಕಂಪನಿಗಳು ತಮ್ಮ ಇಐಎ ವರದಿಗಳಲ್ಲಿ ಸುಳ್ಳು ಮಾಹಿತಿಗಳನ್ನು ನೀಡಿವೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News