ಕೇರಳದಲ್ಲಿ ರೆಡ್ ಅಲರ್ಟ್ ಹಿಂದಕ್ಕೆ

Update: 2018-08-19 15:01 GMT

ತಿರುವನಂತಪುರ, ಆ. 19: ಕಳೆದ 10 ದಿನಗಳಲ್ಲಿ ಸುರಿದ ಮಹಾಮಳೆಗೆ ಕೇರಳ 100 ವರ್ಷಗಳಲ್ಲೇ ಅತೀ ಭೀಕರ ನೆರೆಗೆ ತುತ್ತಾಗಿದ್ದು, 300 ಜನರು ಸಾವನ್ನಪ್ಪಿದ್ದಾರೆ ಹಾಗೂ 3 ಲಕ್ಷ ಜನರು ಮನೆ ಮಾರು ಕಳೆದುಕೊಂಡಿದ್ದಾರೆ. ಹವಾಮಾನ ಇಲಾಖೆ ಎಲ್ಲ ಜಿಲ್ಲೆಗಳಲ್ಲಿ ಘೋಷಿಸಿದ್ದ ರೆಡ್ ಅಲರ್ಟ್ ಅನ್ನು ರವಿವಾರ ಹಿಂದೆ ತೆಗೆದುಕೊಂಡಿದೆ.

10 ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಹಾಗೂ 2 ಜಿಲ್ಲೆಗಳಲ್ಲಿ ‘ಯಲ್ಲೊ ಅಲರ್ಟ್’ ಘೋಷಿಸಿದೆ. ಮೂರು ಜಿಲ್ಲೆಗಳಾದ ಪತ್ತನಂತಿಟ್ಟ, ಇಡುಕ್ಕಿ ಹಾಗೂ ಎರ್ನಾಕುಳಂನಲ್ಲಿ ಭೀಕರ ನೆರೆ ಪರಿಸ್ಥಿತಿ ಈಗಲೂ ಮುಂದುವರಿದಿದೆ. ಈ ಜಿಲ್ಲೆಗಳಲ್ಲಿ ರವಿವಾರದಿಂದ ಆಗಸ್ಟ್ 20ರ ವರೆಗೆ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಇಡುಕ್ಕಿ ಜಿಲ್ಲೆಯ ಅತಿ ದೊಡ್ಡ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುವ ತೀವ್ರತೆ ಕಡಿಮೆ ಆಗಿದೆ. ಇದರಿಂದ ಅಣೆಕಟ್ಟಿನ ಎರಡು ಗೇಟುಗಳನ್ನು ಮುಚ್ಚಲಾಗಿದೆ. ಮುಲ್ಲಪೆರಿಯಾರ್ ಹಾಗೂ ಇಡುಕ್ಕಿ ಅಣೆಕಟ್ಟಿನಿಂದ ಹೊರ ಹರಿಯುತ್ತಿರುವ ನೀರಿನ ಪ್ರಮಾಣ ಕಡಿಮೆ ಆಗಿದೆ. ಎರ್ನಾಕುಳಂ ಹಾಗೂ ತ್ರಿಶೂರ್ ಮೂಲಕ ಹರಿಯುವ ಪೆರಿಯಾರ್ ಹಾಗೂ ಅದರ ಉಪ ನದಿಗಳ ಪ್ರವಾಹದ ತೀವ್ರತೆ ಕಡಿಮೆ ಆಗಿದೆ. ಭಾರತೀಯ ನೌಕಾ ಪಡೆಯ ರಕ್ಷಣಾ ಕಾರ್ಯಾಚರಣೆ 10ನೇ ದಿನಕ್ಕೆ ಕಾಲಿರಿಸಿದೆ. ಭಾರತೀಯ ವಾಯು ಪಡೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಲಕ್ಷಾಂತರ ಜನರು ಪರಿಹಾರ ಶಿಬಿರಗಳಲ್ಲಿದ್ದಾರೆ. ರವಿವಾರ ಇನ್ನಿಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

6 ಮಂದಿ ರಕ್ಷಣೆಗಾರರು ಇದ್ದ ರಕ್ಷಣಾ ದೋಣಿ ಚೆಂಗನೂರಿನ ಪಂಡನಾದ್ ಪ್ರದೇಶದಲ್ಲಿ ಶನಿವಾರ ರಾತ್ರಿ ನಾಪತ್ತೆಯಾಗಿದೆ.

ಚೆಂಗನ್ನೂರು, ಪಂಡಾಲಂ, ತಿರುವಲ್ಲಾ ಹಾಗೂ ಪತ್ತನಂತಿಟ್ಟ ಜಿಲ್ಲೆಯ ಇತರ ಹಲವು ಪ್ರದೇಶಗಳು, ಆಲುವಾ, ಅಂಗಮಾಲಿ ಹಾಗೂ ಎರ್ನಾಕುಳಂನ ಪರವೂರಿನ ಪ್ರದೇಶಗಳಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ ಹಲವು ಜನರು ಆಹಾರ, ನೀರು ಇಲ್ಲದೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಪಂಬಾ ನದಿಯ ದಂಡೆಯಲ್ಲಿರುವ ಚೆಂಗನ್ನೂರು ಪಟ್ಟಣದಲ್ಲಿ 5000 ಜನರು ಸಿಲುಕಿಕೊಂಡಿರುವ ಸಾಧ್ಯತೆ ಇರುವುದರಿಂದ ರಕ್ಷಣಾ ತಂಡ ಈ ಪಟ್ಟಣವನ್ನು ಕೇಂದ್ರೀಕರಿಸಿ ಕಾರ್ಯಾಚರಣೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News