ಇರಾನ್‌ನಿಂದ ನೂತನ ಯುದ್ಧ ವಿಮಾನಗಳು, ಕ್ಷಿಪಣಿಗಳ ಅನಾವರಣ

Update: 2018-08-19 16:46 GMT

ಟೆಹ್ರಾನ್, ಆ.19: ಇರಾನ್ ಮುಂದಿನ ವಾರ ಹೊಸ ಯುದ್ಧ ವಿಮಾನಗಳನ್ನು ಮತ್ತು ಕ್ಷಿಪಣಿಗಳನ್ನು ಅನಾವರಣ ಮಾಡುತ್ತಿದೆ ಮತ್ತು ಮುಂದೆಯೂ ಶಸ್ತ್ರಾಸ್ತ್ರಗಳ ಅಭಿವೃದ್ಧಿ ದೇಶದ ಪ್ರಥಮ ಆದ್ಯತೆಯಾಗಿರಲಿದೆ ಎಂದು ಇರಾನ್ ಭದ್ರತಾ ಸಚಿವರು ತಿಳಿಸಿದ್ದಾರೆ.

ಆಮೂಲಕ ಇರಾನ್‌ನ ಕ್ಷಿಪಣಿ ಯೋಜನೆಯನ್ನು ಮತ್ತು ಸುತ್ತಮುತ್ತಲ ಪ್ರದೇಶದ ಮೇಲೆ ಅದು ಬೀರುವ ಪರಿಣಾಮವನ್ನು ತಡೆಯುವ ಉದ್ದೇಶದಿಂದ ಅಮೆರಿಕ ಇರಾನ್ ಮೇಲೆ ವಿಧಿಸಿರುವ ನಿರ್ಬಂಧಕ್ಕೆ ಸವಾಲೆಸೆದಿದೆ. ಈ ಹೇಳಿಕೆಯ ಬೆನ್ನಿಗೇ ಮತ್ತೊಂದು ಹೇಳಿಕೆ ನೀಡಿರುವ ಇರಾನ್ ನೌಕಾಪಡೆ, ಇದೇ ಮೊದಲ ಬಾರಿಗೆ ತನ್ನ ಯುದ್ಧನೌಕೆಗೆ ಅತ್ಯಾಧುನಿಕ ರಕ್ಷಣಾ ಆಯುಧ ವ್ಯವಸ್ಥೆಯನ್ನು ಅಳವಡಿಸಿರುವುದಾಗಿ ತಿಳಿಸಿದೆ. ಇರಾನ್ ಹಾಗೂ ಜಗತ್ತಿನ ಇತರ ದೇಶಗಳ ಮಧ್ಯೆ ನಡೆದಿದ್ದ 2015ರ ಒಪ್ಪಂದದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ಮೇ ತಿಂಗಳಲ್ಲಿ ಹಿಂದೆ ಸರಿದಿದ್ದರು. ಆಮೂಲಕ ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ಹೊರಿಸಿದ್ದರು. ಈ ಒಪ್ಪಂದ ಇರಾನ್‌ನ ಕ್ಷಿಪಣಿ ಯೋಜನೆಯನ್ನು ತಡೆಯುವಲ್ಲಿ ವಿಫಲವಾಗಿದೆ ಹಾಗೂ ಸಿರಿಯ, ಇರಾಕ್ ಮತ್ತು ಯೆಮನ್ ಸಂಘರ್ಷಗಳಲ್ಲಿ ಇರಾನ್ ವಿರೋಧ ಬಣಕ್ಕೆ ಬೆಂಬಲಕ್ಕೆ ನೀಡುವುದು ಮುಂದುವರಿದಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದ ಇರಾನ್, ನಮ್ಮ ಮುಖ್ಯ ಆದ್ಯತೆ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವುದಾಗಿದೆ. ಈ ಕ್ಷೇತ್ರದಲ್ಲಿ ನಾವು ಉತ್ತಮರಾಗಿದ್ದೇವೆ. ಆದರೆ ಅದನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಇರಾನ್ ಬ್ರಿಗೇಡಿಯರ್ ಜನರಲ್ ಆಮಿರ್ ಹತಮಿ ತಿಳಿಸಿದ್ದಾರೆ. ಆಗಸ್ಟ್ 22ರಂದು ಆಚರಿಸಲಾಗುವ ರಾಷ್ಟ್ರೀಯ ಭದ್ರತಾ ಕೈಗಾರಿಕೆ ದಿನದಂದು ನಾವು ತಯಾರಿಸಿರುವ ಹೊಸ ಯುದ್ಧ ವಿಮಾನವನ್ನು ಅನಾವರಣಗೊಳಿಸಲಾಗುವುದು ಎಂದು ಹತಮಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News