ಐತಿಹಾಸಿಕ ಸಾಧನೆ ಮಾಡಿದ ಈಜುಪಟುವಿಗೆ ಕುಟುಂಬದ ಸುರಕ್ಷತೆಯದ್ದೇ ಚಿಂತೆ

Update: 2018-08-20 03:48 GMT

ಜಕಾರ್ತ, ಆ. 20: ಭಾರತದ ಕಝನ್ ಸಿಂಗ್ 1986ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿಪದಕ ಗೆದ್ದಿದ್ದು ಹೊರತುಪಡಿಸಿದರೆ, 200 ಮೀಟರ್ ಬಟರ್‌ಫ್ಲೈ ಈಜು ಸ್ಪರ್ಧೆಯಲ್ಲಿ ಫೈನಲ್ ತಲುಪಿದ ಮೊಟ್ಟಮೊದಲ ಭಾರತೀಯ ಎಂಬ ಹೆಗ್ಗಳಿಗೆ ಕೇರಳದ ಸಜನ್ ಪ್ರಕಾಶ್ ಪಾತ್ರರಾಗಿದ್ದಾರೆ. ಆದರೆ ಅವರು ಅದನ್ನು ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. 24 ವರ್ಷದ ಇಡುಕ್ಕಿ ಜಿಲ್ಲೆಯ ಈ ಈಜುಪಟು ಕೊಳದಲ್ಲಿ ದೇಶಕ್ಕಾಗಿ ಈಜುತ್ತಿದ್ದರೆ, ಪ್ರವಾಹಪೀಡಿತ ಜಿಲ್ಲೆಯ ತನ್ನ ಸಂಬಂಧಿಕರ ಇರುವಿಕೆ ಬಗ್ಗೆ ಯಾವ ಮಾಹಿತಿಯೂ ಸಿಗದೇ ಚಿಂತಿತರಾಗಿದ್ದಾರೆ.

ಅಜ್ಜಿ ಹಾಗೂ ಮಾವನ ಕುಟುಂಬ ಪ್ರವಾಹದಲ್ಲಿ ಸಿಲುಕಿಕೊಂಡಿದ್ದು, ಅವರ ಚಲನ ವಲನಗಳ ಬಗ್ಗೆ ಇನ್ನೂ ಯಾವ ಮಾಹಿತಿಯೂ ಇಲ್ಲ. "ಅವರು ಹೇಗಿದ್ದಾರೆ ಎನ್ನುವುದು ನನಗಿನ್ನೂ ತಿಳಿದಿಲ್ಲ" ಎಂದು ಸ್ಪರ್ಧೆ ಬಳಿಕ ಪ್ರಕಾಶ್ ಹೇಳಿದರು.

"ಸುರಕ್ಷಿತ ಸ್ಥಳಕ್ಕೆ ಅವರನ್ನು ಕರೆದೊಯ್ಯಲಾಗುತ್ತಿದೆ ಎಂದಷ್ಟೇ ನನಗೆ ಗೊತ್ತು. ಅವರ ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ. ಇಂಥ ಕಠಿಣ ಪರಿಸ್ಥಿತಿಯಲ್ಲೂ ತಮಿಳುನಾಡಿನಲ್ಲಿರುವ ನನ್ನ ತಾಯಿ ನನ್ನ ಸ್ಪರ್ಧಾ ಪೂರ್ವ ಅಭ್ಯಾಸಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮಾಹಿತಿ ನೀಡಿಲ್ಲ. ಅಜ್ಜಿ ಮತ್ತು ಮಾವನನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದ ಬಳಿಕವಷ್ಟೇ ಸುದ್ದಿ ತಲುಪಿಸಿದ್ದಾರೆ. ಆದರೆ ಅವರೊಂದಿಗೆ ಇನ್ನೂ ಮಾತನಾಡುವುದು ಸಾಧ್ಯವಾಗಿಲ್ಲ" ಎಂದು ವಿವರಿಸಿದರು.

ಅರ್ಹತಾ ಸುತ್ತಿನ ಸ್ಪರ್ಧೆಯ ಹಿಂದಿನ ರಾತ್ರಿ ಕುಟುಂಬದ ಸ್ಥಿತಿ ಹಾಗೂ ಸ್ಪರ್ಧೆಯ ಬಗೆಗಿನ ಆತಂಕದಿಂದಾಗಿ ನಿದ್ದೆಯಿಲ್ಲದೆ ರಾತ್ರಿಯನ್ನು ಕಳೆದಿದ್ದಾಗಿ ಅವರು ಹೇಳಿದರು. ಆದರೆ ಒತ್ತಡದಲ್ಲೂ ಕ್ಷಮತೆಯನ್ನು ಸಾಧಿಸಲು ಅನುಭವ ನೆರವಾಯಿತು ಎಂದು ಅವರು ಬಣ್ಣಿಸಿದರು.

ಪ್ರಕಾಶ್‌ಗೆ ಕೇರಳದ ಭೀಕರ ಪ್ರವಾಹದ ಸುದ್ದಿ ಶನಿವಾರವಷ್ಟೇ ತಿಳಿದಿದೆ. ಅವರ ಅಜ್ಜಿಯ ಕುಟುಂಬ ಪೆರಿಯಾರ್ ನದಿಗೆ ಅಡ್ಡಲಾಗಿ ಕಟ್ಟಲಾದ ಅಣೆಕಟ್ಟಿನ ಪಕ್ಕದಲ್ಲೇ ಇದೆ. ಫೈನಲ್‌ನಲ್ಲಿ ಪ್ರಕಾಶ್ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದು, 1 ನಿಮಿಷ 57.75 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿ ಐದನೆಯವರಾಗಿ ಸ್ಪರ್ಧೆ ಮುಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News