ಫೆಡರರ್‌ರನ್ನು ಸೋಲಿಸಿದ ಜೊಕೊವಿಕ್‌ಗೆ ಸಿನ್ಸಿನಾಟಿ ಟ್ರೋಫಿ

Update: 2018-08-20 05:10 GMT

ಮಾಸನ್, ಆ.20: ಪ್ರಶಸ್ತಿ ಫೇವರಿಟ್ ರೋಜರ್ ಫೆಡರರ್‌ರನ್ನು ನೇರ ಸೆಟ್‌ಗಳಿಂದ ಸದೆಬಡಿದ ಸರ್ಬಿಯ ಆಟಗಾರ ನೊವಾಕ್ ಜೊಕೊವಿಕ್ ಸಿನ್ಸಿನಾಟಿ ಟೆನಿಸ್ ಟ್ರೋಫಿಯನ್ನು ಗೆದ್ದುಕೊಂಡಿದ್ದಾರೆ.

 ಇಲ್ಲಿ ರವಿವಾರ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಫೆಡರರ್‌ರನ್ನು 6-4, 6-4 ಸೆಟ್‌ಗಳಿಂದ ಸೋಲಿಸಿದ್ದಾರೆ. ಈ ಮೂಲಕ ಎಲ್ಲ ಮಾಸ್ಟರ್ಸ್ ಟೆನಿಸ್ ಟೂರ್ನಿಯನ್ನು ಜಯಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಜೊಕೊವಿಕ್‌ಗೆ ಈ ತನಕ ಸಿನ್ಸಿನಾಟಿ ಟ್ರೋಫಿಯನ್ನು ಜಯಿಸಲು ಸಾಧ್ಯವಾಗಿರಲಿಲ್ಲ.

 ಈ ಹಿಂದೆ ಐದು ಬಾರಿ ಸಿನ್ಸಿನಾಟಿ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದ ಜೊಕೊವಿಕ್ ಅವರು ಮೂರು ಬಾರಿ ಫೆಡರರ್‌ಗೆ ಸೋತಿದ್ದರು. ಇದೀಗ ಏಳು ಬಾರಿ ಸಿನ್ಸಿನಾಟಿ ಟ್ರೋಫಿ ಜಯಿಸಿರುವ ಫೆಡರರ್‌ರನ್ನು ಸೋಲಿಸಿಯೇ ಕೊನೆಗೂ ಪ್ರಶಸ್ತಿ ಎತ್ತಿಹಿಡಿದರು.

ವಿಂಬಲ್ಡನ್ ಚಾಂಪಿಯನ್ ಜೊಕೊವಿಕ್ 1990ರಲ್ಲಿ ಆರಂಭವಾದ ಮಾಸ್ಟರ್ಸ್ ಟೂರ್ನಿಯ ಎಲ್ಲ 9 ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.

 ‘‘ಸಿನ್ಸಿನಾಟಿ ಟ್ರೋಫಿಯನ್ನು ಮೊದಲಬಾರಿ ಗೆದ್ದುಕೊಂಡಿರುವ ಕಾರಣ ಇದು ನನ್ನ ಪಾಲಿಗೆ ವಿಶೇಷ ಕ್ಷಣ’’ ಎಂದು ಫೆಡರರ್ ವಿರುದ್ಧ ಆಡಿರುವ ಕಳೆದ 3 ಪಂದ್ಯಗಳನ್ನು ಜಯಿಸಿರುವ ಜೊಕೊವಿಕ್ ಹೇಳಿದ್ದಾರೆ.

 ವಿಶ್ವದ ನಂ.10ನೇ ಆಟಗಾರನಾಗಿರುವ ಜೊಕೊವಿಕ್ ಈ ಪ್ರಶಸ್ತಿ ಗೆಲ್ಲುವ ಮೂಲಕ ರ್ಯಾಂಕಿಂಗ್‌ನಲ್ಲೂ ಆರನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಮುಂಬರುವ ಯುಎಸ್ ಓಪನ್‌ನಲ್ಲಿ ಮೂರನೇ ಬಾರಿ ಪ್ರಶಸ್ತಿ ಜಯಿಸುವ ವಿಶ್ವಾಸದೊಂದಿಗೆ ನ್ಯೂಯಾರ್ಕ್‌ಗೆ ಪ್ರಯಾಣಬೆಳೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News