ಮಣಿಪುರ ನಕಲಿ ಎನ್‌ಕೌಂಟರ್ ಪ್ರಕರಣಗಳು: ಸಿಬಿಐನಿಂದ ಮತ್ತೊಂದು ದೋಷಾರೋಪಣೆ ಪಟ್ಟಿ ಸಲ್ಲಿಕೆ

Update: 2018-08-20 14:59 GMT

ಹೊಸದಿಲ್ಲಿ,ಆ.20: ಮಣಿಪುರದಲ್ಲಿ ಸೇನೆ,ಅಸ್ಸಾಂ ರೈಫಲ್ಸ್ ಮತ್ತು ಪೊಲೀಸರು ನಡೆಸಿದ್ದಾರೆನ್ನಲಾಗಿರುವ ನಕಲಿ ಎನ್‌ಕೌಂಟರ್‌ಗಳಿಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದಲ್ಲಿ ಇನ್ನೊಂದು ದೋಷಾರೋಪಣೆ ಪಟ್ಟಿಯನ್ನು ತಾನು ಸಲ್ಲಿಸಿರುವುದಾಗಿ ಸಿಬಿಐನ ವಿಶೇಷ ತನಿಖಾ ತಂಡ(ಸಿಟ್)ವು ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತು.

 ಪ್ರಕರಣಗಳಿಗೆ ಸಂಬಂಧಿಸಿದಂತೆ ಎರಡು ದೋಷಾರೋಪಣೆ ಪಟ್ಟಿಗಳನ್ನು ಸಂಬಂಧಿತ ನ್ಯಾಯಾಲಯದಲ್ಲಿ ಸಲ್ಲಿಸಿರುವುದಾಗಿ ಸಿಬಿಐ ಜು.30ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.

ಸೋಮವಾರ ನಡೆದ ಸಂಕ್ಷಿಪ್ತ ವಿಚಾರಣೆಯ ಸಂದರ್ಭ ನ್ಯಾಯಮೂರ್ತಿಗಳಾದ ಎಂ.ಬಿ.ಲೋಕೂರ್ ಮತ್ತು ಯು.ಯು.ಲಲಿತ್ ಅವನ್ನೊಳಗೊಂಡ ಪೀಠವು ನಕಲಿ ಎನ್‌ಕೌಂಟರ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಂದಿನ ಸ್ಥಿತಿಗತಿ ವರದಿಯನ್ನು ಸೆ.1ರೊಳಗೆ ತನಗೆ ಸಲ್ಲಿಸುವಂತೆ ಸಿಟ್‌ಗೆ ಸೂಚಿಸಿತು.

ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ(ಅಫ್‌ಸ್ಪಾ) ಜಾರಿಯಲ್ಲಿರುವ ಮಣಿಪುರ ಮತ್ತು ಜಮ್ಮು-ಕಾಶ್ಮೀರದಲ್ಲಿ ಕಾರ್ಯಾಚರಣೆಗಳನ್ನು ನಡೆಸಿದ್ದಕ್ಕಾಗಿ ಸಶಸ್ತ್ರ ಪಡೆಗಳ ಸಿಬ್ಬಂದಿಗಳ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿರುವದನ್ನು ಪ್ರಶ್ನಿಸಿ 300ಕ್ಕೂ ಅಧಿಕ ಸೇನಾ ಸಿಬ್ಬಂದಿಗಳು ಸಲ್ಲಿಸಿರುವ ಪ್ರತ್ಯೇಕ ಅರ್ಜಿಯೊಂದಿಗೆ ಈ ವಿಷಯದಲ್ಲಿ ವಿಚಾರಣೆಯನ್ನು ಸೆ.24ರಂದು ಕೈಗೆತ್ತಿಕೊಳ್ಳುವುದಾಗಿ ಪೀಠವು ತಿಳಿಸಿತು.

ಮುಂದಿನ ವಿಚಾರಣೆಯ ದಿನಾಂಕದಂದು ಹಾಜರಾಗಬೇಕಿಲ್ಲ ಎಂದು ಪೀಠವು ನ್ಯಾಯಾಲಯದಲ್ಲಿ ಉಪಸ್ಥಿತರಿದ್ದ ಸಿಬಿಐ ನಿರ್ದೇಶಕ ಅಲೋಕ ಕುಮಾರ ವರ್ಮಾ ಅವರಿಗೆ ತಿಳಿಸಿತು.

ಮಣಿಪುರಲ್ಲಿ ಕಾನೂನುಬಾಹಿರ ಹತ್ಯೆಗಳು ಮತ್ತು ನಕಲಿ ಎನ್‌ಕೌಂಟರ್ ಪ್ರಕರಣಗಳಲ್ಲಿ ತನಿಖೆ ನಡೆಸಲು ಸಿಟ್ ಅನಗತ್ಯವಾಗಿ ಸುದೀರ್ಘ ಸಮಯವನ್ನು ತೆಗೆದುಕೊಂಡಿದ್ದಕ್ಕಾಗಿ ಈ ಹಿಂದೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದ ಸರ್ವೋಚ್ಚ ನ್ಯಾಯಾಲಯವು ವರ್ಮಾ ಅವರಿಗೆ ಸೋಮವಾರ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿತ್ತು.

 ವಿಷಯವು ಜನರ ಜೀವನ್ಮರಣದ ಪ್ರಶ್ನೆಯನ್ನೊಳಗೊಂಡಿದೆ ಎಂದು ಜು.30ರಂದು ಹೇಳಿದ್ದ ನ್ಯಾಯಾಲಯವು,ಪ್ರಕರಣಗಳಲ್ಲಿ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಿಟ್‌ಗೆ ನಿರ್ದೇಶ ನೀಡಿತ್ತು.

ಮಣಿಪುರದಲ್ಲಿ ಕಾನೂನುಬಾಹಿರ ಹತ್ಯೆಗಳ 1,528 ಪ್ರಕರಣಗಳಲ್ಲಿ ತನಿಖೆಯನ್ನು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷದ ಜು.14ರಂದು ಸಿಟ್ ಅನ್ನು ರಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News