ಸೇನಾ ವಿಶೇಷಾಧಿಕಾರ ಪ್ರಕರಣ: ಕಾನೂನುಕ್ರಮ ಪ್ರಶ್ನಿಸಿ ಸೇನಾಧಿಕಾರಿಗಳ ಮೇಲ್ಮನವಿ

Update: 2018-08-20 16:24 GMT

ಹೊಸದಿಲ್ಲಿ, ಆ.20: ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆ(ಎಎಫ್‌ಎಸ್‌ಪಿಎ) ಜಾರಿಯಲ್ಲಿರುವ ಮಣಿಪುರ ಹಾಗೂ ಜಮ್ಮು-ಕಾಶ್ಮೀರದಲ್ಲಿ ಕಾರ್ಯನಿರ್ವಹಿಸಿದ್ದಕ್ಕಾಗಿ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಪ್ರಶ್ನಿಸಿ 300ಕ್ಕೂ ಹೆಚ್ಚು ಸೇನಾಸಿಬ್ಬಂದಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 4ರಂದು ನಡೆಸುವುದಾಗಿ ಸುಪ್ರೀಂಕೋರ್ಟ್ ಸೋಮವಾರ ತಿಳಿಸಿದೆ.

 ನ್ಯಾಯಾಧೀಶರಾದ ಮದನ್ ಬಿ.ಲೋಕೂರ್, ಎಸ್.ಅಬ್ದುಲ್ ನಸೀರ್ ಮತ್ತು ದೀಪಕ್ ಗುಪ್ತಾ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ್ದು, 2017ರಲ್ಲಿ ಈ ಕುರಿತ ಆದೇಶ ಜಾರಿಗೊಳಿಸಿದ ಪೀಠವು ಈ ಅರ್ಜಿಯ ವಿಚಾರಣೆಯನ್ನೂ ನಡೆಸಲಿದೆ ಎಂದು ತಿಳಿಸಿದೆ. 2017ರಲ್ಲಿ ನ್ಯಾಯಾಧೀಶರಾದ ಮದನ್ ಲೋಕೂರ್ ಹಾಗೂ ಯು.ಯು.ಲಲಿತ್ ಅವರಿದ್ದ ನ್ಯಾಯಪೀಠ ಆದೇಶ ಜಾರಿಗೊಳಿಸಿದ್ದು ಇದೀಗ ಈ ಮೇಲ್ಮನವಿಯ ವಿಚಾರಣೆಯನ್ನೂ ಇದೇ ನ್ಯಾಯಪೀಠ ನಡೆಸಲಿದೆ ಎಂದು ತಿಳಿಸಲಾಗಿದೆ. ಈ ಮಧ್ಯೆ, ಮಣಿಪುರ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಸೆ.4ರಂದು ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ. ಗಲಭೆಗ್ರಸ್ತ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಸೇನಾ ಸಿಬ್ಬಂದಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಕರ್ತವ್ಯ ನಿರತ ಸೇನಾಧಿಕಾರಿಗಳು ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ. ಮಣಿಪುರದಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಎನ್‌ಕೌಂಟರ್ ಪ್ರಕರಣಗಳ ಹಿನ್ನೆಲೆಯಲ್ಲಿ ಸಿಬಿಐಯ ವಿಶೇಷ ತನಿಖಾ ತಂಡ ಇತ್ತೀಚೆಗೆ ಸಶಸ್ತ್ರ ಪಡೆಗಳ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿಕೊಂಡಿದ್ದು ಇದರಲ್ಲಿ ಕೊಲೆ ಆರೋಪ ಹೊರಿಸಲಾಗಿದೆ.

ಮಣಿಪುರದಲ್ಲಿ ನ್ಯಾಯಾತಿರಿಕ್ತ ಹತ್ಯೆಯ ಸುಮಾರು 1,528 ಪ್ರಕರಣ ನಡೆದಿರುವ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಿ, ಎಫ್‌ಐಆರ್ ದಾಖಲಿಸಬೇಕೆಂದು 2017ರ ಜುಲೈ 14ರಂದು ಸುಪ್ರೀಂಕೋರ್ಟ್‌ನ ಪೀಠವೊಂದು ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News