ಅಲ್ವಾರ್ ಗುಂಪು ಹಲ್ಲೆ ಪ್ರಕರಣ: ನ್ಯಾಯಾಂಗ ನಿಂದನೆ ಅರ್ಜಿಗೆ ಪ್ರತಿಕ್ರಿಯಿಸಲು ರಾಜಸ್ತಾನ ಸರಕಾರಕ್ಕೆ ಸೂಚನೆ

Update: 2018-08-20 16:48 GMT

ಹೊಸದಿಲ್ಲಿ, ಆ.20: ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ ಜುಲೈ 20ರಂದು ನಡೆದ ಗುಂಪು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಸಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಗೆ ಪ್ರತಿಕ್ರಿಯಿಸುವಂತೆ ಸುಪ್ರೀಂಕೋರ್ಟ್ ರಾಜಸ್ತಾನ ಸರಕಾರಕ್ಕೆ ಸೂಚಿಸಿದೆ. ಗುಂಪು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕೈಗೊಳ್ಳಲಾಗಿರುವ ಕ್ರಮಗಳ ವಿವರವಾದ ಮಾಹಿತಿಯನ್ನು ಸಲ್ಲಿಸುವಂತೆ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠವು ಸರಕಾರದ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದೆ.

ಜುಲೈ 20ರಂದು ಹರ್ಯಾನದಲ್ಲಿರುವ ತನ್ನ ಗ್ರಾಮಕ್ಕೆ ಎರಡು ಹಸುಗಳನ್ನು ಸಾಗಿಸುತ್ತಿದ್ದ ಅಕ್ಬರ್ ಖಾನ್ ಎಂಬವರ ಮೇಲೆ ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಸರಕಾರ ನಿಷ್ಕ್ರಿಯವಾಗಿದ್ದು ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ತುಷಾರ್ ಗಾಂಧಿ ಹಾಗೂ ಕಾಂಗ್ರೆಸ್ ಮುಖಂಡ ತೆಹ್ಸೀನ್ ಪೂನಾವಾಲಾ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

 ಗುಂಪು ಹಿಂಸೆ ಹಾಗೂ ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುವ ಹಿಂಸಾಚಾರವನ್ನು ತಡೆಯಲು ಮುನ್ನೆಚ್ಚರಿಕೆಯ, ಶಿಕ್ಷಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿ ನ್ಯಾಯಾಲಯವು ಸರಕಾರಗಳಿಗೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಾಲನಾ ವರದಿಯನ್ನು ಸೆ.7ರ ಒಳಗೆ ಸಲ್ಲಿಸುವಂತೆ ಇತರ ರಾಜ್ಯ ಸರಕಾರಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News