ಕೈಗಾರಿಕಾ ಕ್ರಾಂತಿ ಮತ್ತು ಪ್ರಜಾಪ್ರಭುತ್ವದ ಹುಟ್ಟು

Update: 2018-08-21 07:13 GMT

ಕೈಗಾರಿಕಾ ಕ್ರಾಂತಿ ಸಮಾಜದ ಆಗಿನ ಈ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ತಡೆಗಳನ್ನು ನಿವಾರಿಸಿ ಹಾದಿಗಳನ್ನು ತೆರೆದಿಟ್ಟಿತು. ಬಂಡವಾಳಶಾಹಿಯ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿತ್ತು. ಅಂದರೆ ಕೈಗಾರಿಕಾ ಕ್ರಾಂತಿ ಬಂಡವಾಳಶಾಹಿ ಕ್ರಾಂತಿಯಾಗಿತ್ತು. ಆಗ ಚಾಲ್ತಿಗೆ ಬಂದ ಪ್ರಜಾಪ್ರಭುತ್ವದ ಗುಣಧರ್ಮ ಬಂಡವಾಳಶಾಹಿಯಾಗಿತ್ತು. ಹಾಗಂತ ಅದು ಸಮಾಜದ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಆ ಕಾಲದಲ್ಲಿ ಪುರೋಗಾಮಿ ಪಾತ್ರ ವಹಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಆ ಘಟ್ಟವನ್ನು ದಾಟದೆ ಸಮಾಜ ಮುಂಚಲಿಸಲೂ ಸಾಧ್ಯವಿರುತ್ತಿರಲಿಲ್ಲ. ಸಮಾಜದ ಬೆಳವಣಿಗೆಯಲ್ಲಿ ದೊಡ್ಡ ನೆಗೆತಕ್ಕೆ ಅದು ಕಾರಣವಾಗಿತ್ತು.

ಅದು 1733ರ ಕಾಲ, ಮೊದಲ ಉಗಿಬಂಡಿ ನಂತರ ನೆಯ್ಗೆ ಯಂತ್ರ ಆವಿಷ್ಕಾರವಾಗಿದ್ದು ಈ ಕಾಲದಲ್ಲೇ. ಇದು ಮಾನವ ಸಮಾಜದ ಅತೀ ಮಹತ್ತರವಾದ ಸಾಧನೆಯಾಗಿತ್ತು. ಇದೇ ಮುಂದಿನ ಕೈಗಾರಿಕಾ ಕ್ರಾಂತಿಗೆ ಅಭೂತಪೂರ್ವ ಕೊಡುಗೆ ನೀಡಿತು. ಉಗಿಯಂತ್ರ ಬಳಸಿ ಹಡಗು, ದೋಣಿ, ನೆಯ್ಗೆ ಯಂತ್ರ ಇನ್ನಿತರ ಯಂತ್ರಗಳ ಆವಿಷ್ಕಾರಕ್ಕೆ ಪ್ರಮುಖ ಬುನಾದಿಯನ್ನು ಒದಗಿಸಿತು. ಇವೆಲ್ಲಾ ಸೇರಿ ಕೈಗಾರಿಕಾ ಕ್ರಾಂತಿಗೆ ದಾರಿ ಮಾಡಿ ಕೊಟ್ಟಿತು.

18ನೇ ಶತಮಾನದ ಕೈಗಾರಿಕಾ ಕ್ರಾಂತಿ ಮತ್ತು ಅದರ ಪರಿಣಾಮವಾದ ಫ್ರೆಂಚ್ ಕ್ರಾಂತಿಗಳ ನಂತರದಲ್ಲಿ ಸಾಮಾಜಿಕ ಬೆಳವಣಿಗೆಯಲ್ಲಿ ಮಹತ್ತರ ಘಟ್ಟಗಳನ್ನು ನಾವು ಕಾಣಬಹುದು. ಆಧುನಿಕ ಯಂತ್ರಗಳು ಚಾಲ್ತಿಗೆ ಬಂದವು. ಉದಾರವಾದಿ ವಿಚಾರಧಾರೆಗಳು ಬೆಳೆಯಲಾರಂಭಿಸುತ್ತವೆ. ಮಾನವ ಸಮಾಜ ಹತ್ತು ಹಲವು ಹೊಸ ಉನ್ನತ ಬೆಳವಣಿಗೆಗಳಿಗೆ ಹಲವು ರಂಗಗಳಿಗೆ ತೆರೆದುಕೊಳ್ಳಲಾರಂಭಿಸುತ್ತದೆ. ಉತ್ಪಾದನೆಗಳು ವೇಗವನ್ನು ಪಡೆದುಕೊಂಡು ಹೆಚ್ಚುವರಿಯಾಗತೊಡಗಿತು ಫ್ಯಾಕ್ಟರಿ ಮಾಲಕರ ಬಳಿ ಹೆಚ್ಚು ಹೆಚ್ಚು ಸಂಪತ್ತು ಸಂಗ್ರಹವಾಗತೊಡಗಿತು. ಕಾರಣ ಈ ಕ್ರಾಂತಿಯ ನಂತರದಲ್ಲಿ ಬಂಡವಾಳಶಾಹಿಗಳು ಸಾಮಾಜಿಕ ಹಿಡಿತ ಸಾಧಿಸತೊಡಗಿದರು. ಇದಕ್ಕೂ ಹಿಂದೆ ಇದ್ದ ಊಳಿಗಮಾನ್ಯ ರಾಜಶಾಹಿಗಳು, ದೊಡ್ಡ ದೊಡ್ಡ ಭೂಹಿಡುವಳಿ ಹೊಂದಿದ್ದವರು ಏನಿದ್ದರೋ ಅವರ ಹಿಡಿತವನ್ನು ತೊಲಗಿಸಲಾಗಿತ್ತು. ಕೈಗಾರಿಕಾ ಕ್ರಾಂತಿಯ ಗುರಿ ಇವರುಗಳೇ ಆಗಿದ್ದರು. ಆಗ ಸಾಮಾಜಿಕ ಬೆಳವಣಿಗೆಗೆ ಇವರೇ ಮುಖ್ಯ ಅಡ್ಡಿಯಾಗಿದ್ದರಿಂದ ಇವರ ಹಿಡಿತ ತೊಲಗಿಸದೆ ಸಾಮಾಜಿಕ ಬೆಳವಣಿಗೆ ಸಾಧ್ಯವಿರಲಿಲ್ಲ. ಕೈಗಾರಿಕಾ ಕ್ರಾಂತಿ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದಲೇ ಈ ಶಕ್ತಿಗಳನ್ನು ಸೋಲಿಸಿ ತೊಲಗಿಸುವ ಮೂಲಕ ಫ್ರಾನ್ಸ್ ನಲ್ಲಿ ಉದಾರವಾದಿ ಪ್ರಜಾಪ್ರಭುತ್ವ ಸಿದ್ಧಾಂತ ರೂಪುಗೊಂಡಿತು. ಜನರಿಂದ, ಜನರಿಗಾಗಿ, ಜನರೇ ಆಳುವ ವ್ಯವಸ್ಥೆ ಎಂದು ಇದನ್ನು ಬಣ್ಣಿಸಲಾಯಿತು. ಈ ಬದಲಾವಣೆ ಸುಲಭಸಾಧ್ಯವಾಗಿರಲಿಲ್ಲ. ಇದು ಅಪಾರ ತ್ಯಾಗ ಬಲಿದಾನಗಳಿಂದ ಕೂಡಿದ ರಕ್ತಪೂರಿತ ಹೋರಾಟವಾಗಿತ್ತು. ಅದುವರೆಗೂ ನಲುಗಿ ಹೋಗಿದ್ದ ಜನಸಮೂಹ ಈ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. ಇದಕ್ಕೆ ನಾಯಕತ್ವ ನೀಡಿದ್ದವರು ಆ ಕಾಲದಲ್ಲಿ ಮೊದಲ ಬಾರಿ ಪ್ರವಧರ್ವಾನಕ್ಕೆ ಬರುತ್ತಿದ್ದ ವ್ಯಾಪಾರಿ ಸಮೂಹವಾಗಿತ್ತು. ಅವರ ವ್ಯಾಪಾರ ಬೆಳವಣಿಗೆ ಕಾಣಲು ಇದ್ದ ಅಡ್ಡಿಗಳು ಅದೇ ಹಳೇ ರಾಜಶಾಹಿಗಳು ದೊಡ್ಡ ಭೂ ಹಿಡುವಳಿದಾರರು, ಜೀತಗಾರರ ಒಡೆಯರೇ ಆಗಿದ್ದರು. ಹಾಗಾಗಿ ಈ ಹಳೇ ಆಳುವ ವರ್ಗಗಳನ್ನು ಕಿತ್ತೊಗೆಯಬೇಕಾದ ಅಗತ್ಯ ಅವರಿಗೆ ಇತ್ತು. ವ್ಯಾಪಾರಿಗಳಾಗಿದ್ದರಿಂದ ಇದು ಮುಂಚೂಣಿ ಗುಣ ಹೊಂದಿತ್ತು. ಸಹಜವಾಗಿ ಅವರಿಗೆ ತಮ್ಮ ವ್ಯಾಪಾರದ ಅಭಿವೃದ್ಧ್ದಿಯ ಹಿತಾಸಕ್ತಿ ಪ್ರಧಾನವಾಗಿತ್ತು. ಆದರೆ ಜನಸಮೂಹವನ್ನು ತಮ್ಮಿಂದಿಗೆ ಕೊಂಡೊಯ್ಯದೆ ಅದು ಸಾಧ್ಯವಾಗುವುದಿಲ್ಲವೆಂಬುದು ಅವರಿಗೂ ಗೊತ್ತಿತ್ತು. ಹಾಗಾಗಿಯೇ ಜನಸಮೂಹವನ್ನು ತಮ್ಮಲ್ಲಿ ಒಳಗೊಳಿಸಲೇ ಬೇಕಿತ್ತು. ಅದಕ್ಕೆ ತಕ್ಕಂತಹ ಸಿದ್ಧಾಂತ ಹಾಗೆಯೇ ಆಡಳಿತಾತ್ಮಕ ರಚನೆಗಳನ್ನು ನಿರ್ಮಿಸಿಕೊಳ್ಳಬೇಕಿತ್ತು. ಗುಲಾಮರು, ಜೀತಗಾರರು ಆಗಿದ್ದ ಬಹುಸಂಖ್ಯಾತ ಜನರನ್ನು ಕಾರ್ಮಿಕರನ್ನಾಗಿ ತೊಡಗಿಸಬೇಕಿತ್ತು. ಸರಕುಗಳ ಉತ್ಪಾದನೆಗಳನ್ನು ಹೆಚ್ಚಿಸಬೇಕಿದ್ದರೆ ದೊಡ್ಡ ಮಟ್ಟದಲ್ಲಿ ಮಾನವ ಸಂಪನ್ಮೂಲಗಳನ್ನು ತೊಡಗಿಸದೆ ಸಾಧ್ಯವಾಗುತ್ತಿರಲಿಲ್ಲ. ಕೈಗಾರಿಕಾ ಕ್ರಾಂತಿ ಸಮಾಜದ ಆಗಿನ ಈ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ತಡೆಗಳನ್ನು ನಿವಾರಿಸಿ ಹಾದಿಗಳನ್ನು ತೆರೆದಿಟ್ಟಿತು. ಬಂಡವಾಳಶಾಹಿಯ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿತ್ತು. ಅಂದರೆ ಕೈಗಾರಿಕಾ ಕ್ರಾಂತಿ ಬಂಡವಾಳಶಾಹಿ ಕ್ರಾಂತಿಯಾಗಿತ್ತು. ಆಗ ಚಾಲ್ತಿಗೆ ಬಂದ ಪ್ರಜಾಪ್ರಭುತ್ವದ ಗುಣಧರ್ಮ ಬಂಡವಾಳಶಾಹಿಯಾಗಿತ್ತು. ಹಾಗಂತ ಅದು ಸಮಾಜದ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಆ ಕಾಲದಲ್ಲಿ ಪುರೋಗಾಮಿ ಪಾತ್ರ ವಹಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಆ ಘಟ್ಟವನ್ನು ದಾಟದೆ ಸಮಾಜ ಮುಂಚಲಿಸಲೂ ಸಾಧ್ಯವಿರುತ್ತಿರಲಿಲ್ಲ. ಸಮಾಜದ ಬೆಳವಣಿಗೆಯಲ್ಲಿ ದೊಡ್ಡ ನೆಗೆತಕ್ಕೆ ಅದು ಕಾರಣವಾಗಿತ್ತು. ಸಮಾಜವನ್ನು ಹಳೇ ಊಳಿಗಮಾನ್ಯ ನೊಗಗಳಿಂದ ಬಿಡಿಸಿ ಮುಂದಕ್ಕೆ ಚಲಿಸಲು ಅನುವು ಮಾಡಿತ್ತು. ಇದರ ನಂತರ ಸಾಮಾಜಿಕ ಮುಂಚಲನೆ ಭಾರೀ ವೇಗವನ್ನು ಪಡೆದುಕೊಂಡಿತು. ಈ ಎಲ್ಲಾ ಬೆಳವಣಿಗೆಗಳು ಸುಮಾರು 1750ರಿಂದ 1850ರ ವರೆಗೆ ನಡೆದಿರುವ ಸುದೀರ್ಘ ಪ್ರಕ್ರಿಯೆಗಳೆನ್ನಬಹುದು. ಯೂರೋಪು ಅಮೆರಿಕಗಳಲ್ಲಿ ಅದಕ್ಕೂ ಮೊದಲು ಗ್ರಾಮೀಣ ಪ್ರದೇಶಗಳನ್ನೊಳಗೊಂಡ ಅತೀ ಹಿಂದುಳಿದ ಊಳಿಗಮಾನ್ಯ ವ್ಯವಸ್ಥೆ ಅಸ್ತಿತ್ವದಲ್ಲಿತ್ತು.

ಈ ಬೆಳವಣಿಗೆಗಳು ಸರಳ ಪ್ರಕ್ರಿಯೆಗಳೇನೂ ಆಗಿರಲಿಲ್ಲ. ಹಲವು ಸಂಕ್ಲಿಷ್ಟತೆಗಳು ಹಾಗೇನೆ ಸಂಕೀರ್ಣತೆಗಳಿಂದ ಕೂಡಿದ್ದವು. ಹತ್ತೊಂಬತ್ತನೇ ಶತಮಾನದ ಆರಂಭದ ವೇಳೆಗೆ ಬಂಡವಾಳಶಾಹಿ ಬೆಳವಣಿಗೆಗೆ ತಡೆಗಳು ಕಾಣಿಸಲಾರಂಭಿಸಿತು. ಕ್ರೋಡೀಕರಣಗೊಂಡ ಬಂಡವಾಳವು ಮತ್ತೆ ಹೂಡಿಕೆಯಾಗಿ ಲಾಭ ಗಳಿಸಲು ಒಂದು ದೇಶದ ಗಡಿಯೊಳಗೆ ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಯಿತು. ಕೈಗಾರಿಕಾ ಕ್ರಾಂತಿ ಮೊದಲಿಗೆ ಆರಂಭವಾಗಿದ್ದ ಗ್ರೇಟ್ ಬ್ರಿಟನ್‌ನಲ್ಲಿ ಕ್ರೋಡೀಕೃತಗೊಂಡ ಬಂಡವಾಳಗಳ ಪುನರ್ ಹೂಡಿಕೆಗೆ ಅವಕಾಶಗಳು ಕಡಿಮೆಯಾದಾಗ ಹೊಸ ಮಾರುಕಟ್ಟೆಗಳಿಗಾಗಿ ಹುಡುಕಾಟ ಆರಂಭಿಸಿತು. ಅದರ ಪರಿಣಾಮವೇ ಗ್ರೇಟ್ ಬ್ರಿಟನ್ ಜಾಗತಿಕ ವ್ಯಾಪಾರಿ ಸಾಮ್ರಾಜ್ಯವಾಗಿ ಉದಯಿಸಿದ್ದು. ಅತೀ ಹೆಚ್ಚು ವಸಾಹತುಗಳನ್ನು ಅದು ಹೊಂದಲು ಸಾಧ್ಯವಾಗಿದ್ದು. ಅದರಲ್ಲಿ ಭಾರತವೂ ಕೂಡ ಒಂದಾಗಿ, ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಹೆಸರು ಪಡೆದಿತ್ತು. 18ನೇ ಶತಮಾನದ ಮಧ್ಯಭಾಗದ ವೇಳೆಗೆ ಇದು ಘಟಿಸಿತು. ಬಂಡವಾಳದ ಈ ಘಟ್ಟವನ್ನು ರಶ್ಯಾದ ಕ್ರಾಂತಿಕಾರಿ ನಾಯಕ ಲೆನಿನ್ ‘ಇಂಪೀರಿಯಲಿಸಮ್’ ಎಂದು ವಿಶ್ಲೇಷಣೆ ಮಾಡಿದರು. ಕನ್ನಡದಲ್ಲಿ ಇದನ್ನು ಸಾಮ್ರಾಜ್ಯವಾದ ಎಂದು ಹೇಳುತ್ತಾರೆ. ಅದನ್ನು ಬಂಡವಾಳಶಾಹಿಯ ಅಂತಿಮ ಘಟ್ಟವೆಂದು ಲೆನಿನ್ ವಿವರಿಸುತ್ತಾರೆ. ಯಾಕೆಂದರೆ ಬಂಡವಾಳ ಜಾಗತಿಕವಾಗಿ ಕ್ರೋಡೀಕರಣಗೊಂಡು ಜಾಗತಿಕ ವ್ಯಾಪ್ತಿ ತಲುಪಿದ ಮೇಲೆ ಹೊಸ ಮಾರುಕಟ್ಟೆ ಹುಡುಕಲು, ಹೊಸ ಹೂಡಿಕೆ ಮಾಡಿ ಅದರಿಂದ ಲಾಭ ಗಳಿಸಿ ಬೆಳವಣಿಗೆಯಾಗಲು ಹೊಸ ಭೂಪ್ರದೇಶಗಳು ಯಾವುದೂ ಇಲ್ಲ. ಆಗ ಇರುವ ಪ್ರದೇಶಗಳಿಗಾಗಿ ವಿವಿಧ ವಿಶ್ವಬಂಡವಾಳಶಾಹಿ ಹಿತಾಸಕ್ತಿಗಳ ನಡುವೆ ಸ್ಪರ್ಧೆ ಏರ್ಪಡುತ್ತದೆ. ಅದು ಅದಕ್ಕೆ ಅನಿವಾರ್ಯ. ಈ ಸ್ಪರ್ಧೆ ಯುದ್ಧಗಳಿಗೆ, ಅಂತರ್ಯುದ್ಧಗಳಿಗೆ ಹಾಗೆಯೇ ಕ್ರಾಂತಿಗಳಿಗೂ ಕಾರಣವಾಗುತ್ತದೆಂದು ಲೆನಿನ್ ವಿವರಿಸುತ್ತಾರೆ.

 ಹೇಗೆ ಗ್ರೇಟ್ ಬ್ರಿಟನ್ ವಿಶ್ವದ ಒಂದೊಂದೇ ಭೂ ಪ್ರದೇಶಗಳನ್ನು ತನ್ನ ನೇರ ಆಳ್ವಿಕೆಯ ವಸಾಹತುಗಳನ್ನಾಗಿ ಮಾಡುತ್ತಾ ಸಾಗಿತ್ತೋ ಅದೇ ರೀತಿಯಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದ ಇತರ ಸಾಮ್ರಾಜ್ಯಶಾಹಿ ಹಿತಾಸಕ್ತಿಗಳೂ ವಿಶ್ವ ಮಾರುಕಟ್ಟೆಯ ಹಿಡಿತಕ್ಕಾಗಿ ಭೂಪ್ರದೇಶಗಳನ್ನು ತಮ್ಮ ತಮ್ಮ ವಸಾಹತುಗಳನ್ನಾಗಿ ಮಾಡಿಕೊಳ್ಳಲು ತೊಡಗಿದ್ದವು. ಈ ಪೈಪೋಟಿಯೇ ಮೊದಲ ವಿಶ್ವಯುದ್ಧಕ್ಕೆ ಕಾರಣವಾಯಿತು. ಜರ್ಮನಿ, ಆಸ್ಟ್ರೀಯ, ಹಂಗೇರಿ, ಬಲ್ಗೇರಿಯಾ ಮತ್ತು ಒಟ್ಟೋಮನ್ ಸಾಮ್ರಾಜ್ಯ ಸೇರಿ ಸೆಂಟ್ರಲ್ ಪವರ್ಸ್‌ ಎಂದು ಗುರುತಿಸಿಕೊಂಡವು. ಇದು ಒಂದಾಗಿ ಗ್ರೇಟ್ ಬ್ರಿಟನ್, ಫ್ರಾನ್ಸ್, ರಶ್ಯಾ, ಇಟಲಿ, ರೊಮೇನಿಯಾ, ಜಪಾನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ (ಮಿತ್ರ ಕೂಟವೆಂದು ಇದನ್ನು ಕರೆಯಲಾಯಿತು) ಮೇಲೆ ಯುದ್ಧ ಸಾರಿದವು. ಯುದ್ಧದಲ್ಲಿ ಗ್ರೇಟ್ ಬ್ರಿಟನ್ ಮಿತ್ರ ಕೂಟಕ್ಕೆ ಜಯ ಲಭಿಸಿತು ಎಂದು ಹೇಳಲಾಯಿತು. ಈ ಯುದ್ಧ 1914ರಲ್ಲಿ ಶುರುವಾಗಿ 1918ರ ವರೆಗೆ ನಡೆಯುತ್ತದೆ. ಅಪಾರ ಪ್ರಮಾಣದ ಪ್ರಾಣಹಾನಿಗಳಿಗೆ ಹಾಗೂ ಆಸ್ತಿಪಾಸ್ತಿ ನಾಶಗಳಿಗೆ ಇದು ಕಾರಣವಾಗುತ್ತದೆ. ಒಂದು ಅಂದಾಜಿನ ಪ್ರಕಾರ ಒಂಬತ್ತು ಕೋಟಿಗೂ ಹೆಚ್ಚು ಸೈನಿಕರು ಮತ್ತು ಏಳು ಕೋಟಿಗೂ ಹೆಚ್ಚು ಜನಸಾಮಾನ್ಯರು ಈ ಯುದ್ಧದಿಂದಾಗಿ ಪ್ರಾಣಗಳನ್ನು ಕಳೆದುಕೊಳ್ಳುತ್ತಾರೆ. ಗ್ರೇಟ್ ಬ್ರಿಟನ್ ಮಿತ್ರ ಕೂಟ ಜಯ ಸಾಧಿಸಿತೆಂದು ಹೇಳಿಕೊಂಡರೂ ಅದನ್ನು ಹಾಗೆ ಜಯವೆಂದು ಪರಿಗಣಿಸುವುದು ಸ್ವಲ್ಪ ತೊಡಕಿನ ವಿಚಾರ. ಯಾಕೆಂದರೆ ಕೇವಲ ತಾಂತ್ರಿಕವಾಗಿ ಮಾತ್ರ ನೋಡಿದರೆ ಸೆಂಟ್ರಲ್ ಪವರ್ಸ್‌ ಎಂದು ಕರೆಸಿ ಕೊಂಡಿದ್ದ ದೇಶಗಳು ಯುದ್ಧದಲ್ಲಿ ಸೋತವು ಎಂದು ಹೇಳಿಕೊಂಡರೂ ಅಮೆರಿಕ ಹೊರತು ಪಡಿಸಿ ಉಳಿದ ದೇಶಗಳ ಆಳುವ ವರ್ಗಗಳು ಸೋತವು ಎಂದು ಹೇಳಬಹುದು. ಅಮೆರಿಕ ಮಿತ್ರಕೂಟದಲ್ಲಿದ್ದರೂ ನೇರವಾಗಿ ಯುದ್ಧದಲ್ಲಿ ಪಾಲ್ಗೊಂಡಿದ್ದು ಕೊನೆ ಹಂತದಲ್ಲಿ ಮಾತ್ರ, ಅದೂ ಕೂಡ ಅತ್ಯಲ್ಪಮಟ್ಟದಲ್ಲಿ. ಅದರ ಪಾತ್ರ ಹೆಚ್ಚಾಗಿ ಇದ್ದಿದ್ದು ಜರ್ಮನಿ ಜೊತೆಗೆ ಗ್ರೇಟ್ ಬ್ರಿಟನ್ ಒಪ್ಪಂದಕ್ಕೆ ಬರುವಂತೆ ಮಾಡುವುದೇ ಆಗಿತ್ತು. ಅದಕ್ಕೆ ಯುದ್ಧದಿಂದಾಗಿ ಜರ್ಮನಿಯೊಂದಿಗಿನ ತನ್ನ ವ್ಯಾಪಾರಕ್ಕೆ ಧಕ್ಕೆ ಬಂದಿದ್ದು ಕೂಡ ಒಂದು ಮುಖ್ಯ ಕಾರಣವಾಗಿತ್ತು. ತಾನು ಉತ್ಪಾದಿಸಿ ಸಂಗ್ರಹಿಸಿಟ್ಟುಕೊಂಡಿದ್ದ ಆಧುನಿಕ ಶಸ್ತ್ರಾಸ್ತ್ರಗಳನ್ನು ಹಿಂದೆಂದೂ ಇಲ್ಲದಂತೆ ಯದ್ಧದಲ್ಲಿ ತೊಡಗಿದ್ದ ರಾಷ್ಟ್ರಗಳಿಗೆ ಮಾರಾಟ ಮಾಡಿ ಅಗಾಧ ಲಾಭವನ್ನು ಗಳಿಸಿತು. ಗ್ರೇಟ್ ಬ್ರಿಟನ್‌ಗೆ ದೊಡ್ಡ ಮೊತ್ತದಲ್ಲಿ ಸಾಲ ನೀಡಿತು. ಯುದ್ಧ ಸಾಮಗ್ರಿಗಳಷ್ಟೇ ಅಲ್ಲದೆ ಆಹಾರ ಸೇರಿದಂತೆ ಇನ್ನಿತರ ಸಾಮಗ್ರಿಗಳ ದೊಡ್ಡ ರಫ್ತುದಾರ ರಾಷ್ಟ್ರವಾಗಿ ಬೆಳೆಯಲು ಅದಕ್ಕೆ ಇದರಿಂದ ಸಾಧ್ಯವಾಯಿತು. ಕಾರಣ ಯುದ್ಧದಲ್ಲಿ ನೇರವಾಗಿ ತೊಡಗಿಸಿಕೊಂಡ ರಾಷ್ಟ್ರಗಳು ಆರ್ಥಿಕವಾಗಿ ನಷ್ಟ ಅನುಭವಿಸಿ ಕೂತಿದ್ದವು. ಬೇರೆ ಎಲ್ಲಾ ರಾಷ್ಟ್ರಗಳು ಕಾದಾಡಿ ಹೈರಾಣಾಗಿದ್ದಾಗ ಯುದ್ಧರಂಗಕ್ಕೆ ಇಳಿದ ಅಮೆರಿಕ ತನ್ನನ್ನು ಬಲಿಷ್ಠ ರಾಷ್ಟ್ರವೆಂದು ಬಿಂಬಿಸಿ ತಾನೆ ಯುದ್ಧಕ್ಕೆ ನಿರ್ಣಾಯಕ ಅಂತ್ಯ ಹಾಡಿ ಜಯ ತಂದು ಕೊಟ್ಟಿದ್ದು ಎಂದು ಬಿಂಬಿಸಿಕೊಂಡಿತು. ಯುದ್ಧವನ್ನು ತನ್ನ ಆರ್ಥಿಕ, ರಾಜಕೀಯ ಹಾಗೂ ಸೈನಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಮರ್ಥವಾಗಿ ಬಳಸಿಕೊಂಡಿದ್ದು ಅಮೆರಿಕವೆಂದೇ ಹೇಳಬಹುದು. ಅಮೆರಿಕ ಯುದ್ಧರಂಗಕ್ಕೆ 6 ಎಪ್ರಿಲ್ 1917ರಲ್ಲಿ ಇಳಿಯಿತಾದರೂ ನವೆಂಬರ್ 1918ರ ವೇಳೆಗೆ ಜರ್ಮನಿ ವಾರ್ಸೈಲ್ಸ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಮೊದಲ ವಿಶ್ವ ಯುದ್ಧ ಕೊನೆಯಾಯಿತು. ಅಮೆರಿಕಕ್ಕೆ ಯುದ್ಧದಿಂದ ಆದ ನಷ್ಟ ಅತ್ಯಲ್ಪ ಮಾತ್ರ. ಆದರೆ ಆದ ಲಾಭ ಮಾತ್ರ ಅಗಾಧ. ಅಮೆರಿಕ ವಿಶ್ವದಲ್ಲಿ ದೊಡ್ಡ ಶಕ್ತಿವಂತ ದೇಶವಾಗಿ ನೆಲೆ ಕಾಣುವಂತಾಯಿತು. ಈ ವಿಶ್ವಯುದ್ಧವನ್ನು ಆರಂಭಿಸುವಾಗ ಎಲ್ಲಾ ಯುದ್ಧಗಳಿಗೆ ಇದು ಅಂತ್ಯ ಹಾಡುತ್ತದೆ ಎಂದೇ ಬಿಂಬಿಸಲಾಗಿತ್ತು ಎನ್ನುವುದನ್ನು ಇಲ್ಲಿ ಗಮನಿಸಬೇಕು.

Writer - ನಂದಕುಮಾರ. ಕೆ. ಎನ್.

contributor

Editor - ನಂದಕುಮಾರ. ಕೆ. ಎನ್.

contributor

Similar News