ವಜಾಗೊಂಡ ಬಿಎಸ್‌ಎಫ್ ಯೋಧನ ವೀಡಿಯೋ ದಂಗೆಗೆ ಕಾರಣವಾಗುತ್ತಿತ್ತು: ಕೇಂದ್ರ

Update: 2018-08-21 15:14 GMT

ಹೊಸದಿಲ್ಲಿ, ಆ.21: ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ ಯೋಧ ತೇಜ್ ಬಹದ್ದೂರ್ ಯಾದವ್‌ರನ್ನು ಕಳೆದ ವರ್ಷ ಸೇನೆಯಿಂದ ವಜಾಗೊಳಿಸಿರುವ ಕ್ರಮವನ್ನು ಸಮರ್ಥಿಸಿರುವ ಕೇಂದ್ರ ಸರಕಾರ ಮತ್ತು ಬಿಎಸ್‌ಎಫ್, ಸೇನಾ ಸಿಬ್ಬಂದಿಗೆ ನೀಡಲಾಗುವ ಆಹಾರದ ಗುಣಮಟ್ಟದ ಕುರಿತು ಬಹದ್ದೂರ್ ಪ್ರಸಾರ ಮಾಡಿರುವ ವಿಡಿಯೊ ಶಸ್ತ್ರಾಸ್ತ್ರ ಪಡೆಗಳ ಮಧ್ಯೆ ದಂಗೆಗೆ ಕಾರಣವಾಗುತ್ತಿತ್ತು ಎಂದು ತಿಳಿಸಿರುವುದಾಗಿ ಆಂಗ್ಲ ಪತ್ರಿಕೆ ವರದಿ ಮಾಡಿದೆ.

ತಮ್ಮ ಉಚ್ಛಾಟನೆಯನ್ನು ರದ್ದುಗೊಳಿಸುವಂತೆ ಕೋರಿ ಬಹದೂರ್ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು ಮತ್ತು ಈ ವಿಡಿಯೊವನ್ನು ನನ್ನ ಸಹೋದ್ಯೋಗಿಗಳು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು ಎಂದು ತಿಳಿಸಿದ್ದರು. ಈ ವಿಡಿಯೊ ಭದ್ರತಾ ಪಡೆಯ ಗೌರವಕ್ಕೆ ಕುಂದುಂಟು ಮಾಡುತ್ತದೆ. ವಿಡಿಯೊದಲ್ಲಿ ತೋರಿಸಲಾಗಿರುವ ಬೇಳೆಸಾರನ್ನು ಕುಕರ್‌ನಲ್ಲಿ ತಯಾರಿಸಲಾಗಿತ್ತು ಮತ್ತು ಅದನ್ನು ಸರಿಯಾಗಿ ಅಲುಗಾಡಿಸದೆ ಇದ್ದರೆ ಅದರಲ್ಲಿರುವ ಬೇಳೆಗಳು ಪಾತ್ರೆಯ ಅಡಿಯಲ್ಲಿ ಉಳಿದು ಸಾರು ನೀರಾಗಿರುವಂತೆ ಕಾಣುತ್ತದೆ ಎಂದು ಕೇಂದ್ರ ತಿಳಿಸಿದೆ. ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಸೇನಾ ಪಡೆಗಳಲ್ಲಿ ಹೃದಯಾಘಾತದ ಸಮಸ್ಯೆ ಹೆಚ್ಚುತ್ತಿರುವ ಕಾರಣ ಯೋಧರ ಆರೋಗ್ಯದ ಬಗ್ಗೆ ಅತೀಹೆಚ್ಚು ಕಾಳಜಿ ವಹಿಸಲಾಗುತ್ತದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

2017ರ ಜನವರಿಯಲ್ಲಿ ತೀವ್ರ ಹಿಮಮಳೆಯಾಗುತ್ತಿದ್ದ ಕಾರಣ ಆಹಾರ ಪೂರೈಕೆ ಮಾಡಲು ಸಾಧ್ಯವಾಗದ ಪರಿಣಾಮ ಪೂಂಚ್ ಜಿಲ್ಲೆಯಲ್ಲಿರುವ ಗಡಿನಿಯಂತ್ರಣ ರೇಖೆಯ ಸಮೀಪವಿರುವ ಆಡಳಿತ ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಹಳೆಯ ಆಹಾರ ಪದಾರ್ಥಗಳನ್ನೇ ಬಳಸಲಾಗಿತ್ತು ಎಂದು ಕೇಂದ್ರ ನ್ಯಾಯಾಲಯಕ್ಕೆ ತಿಳಿಸಿದೆ. ನ್ಯಾಯಾಲಯದಲ್ಲಿ ಹೇಳಿಕೆ ನೀಡಿರುವ ಬಿಎಸ್‌ಎಫ್ ಪ್ರತಿನಿಧಿ, ಫೇಸ್‌ಬುಕ್‌ನಲ್ಲಿ ಯಾದವ್ ಗೆಳೆತನ ಹೊಂದಿರುವ ಹದಿನೆಂಟು ಮಂದಿ ಪಾಕಿಸ್ತಾನಿಗಳಾಗಿದ್ದಾರೆ ಅಥವಾ ಪಾಕಿಸ್ತಾನ ಮೂಲದವರಾಗಿದ್ದಾರೆ. ಮೇಲ್ಮನವಿದಾರರ ಸಾಮಾಜಿಕ ಮಾಧ್ಯಮ ಖಾತೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಪರಿಶೀಲನೆ ನಡೆಸಿದ್ದು ಈ ವೇಳೆ ಯಾದವ್ ಅವರ ಬಹುತೇಕ ಗೆಳೆಯರು ಪಾಕಿಸ್ತಾನ, ಜಪಾನ್, ಕೆನಡ, ರಶ್ಯಾ, ಯುಎಇ, ಅಮೆರಿಕ ಹಾಗೂ ಸೌದಿ ಅರೇಬಿಯ ಮೂಲದವರಾಗಿದ್ದಾರೆ ಎಂದು ತಿಳಿಸಿದ್ದಾರೆ.

2017ರ ಜನವರಿ 9ರಂದು ತೇಜ್ ಬಹದ್ದೂರ್ ಯಾದವ್ ಫೇಸ್‌ಬುಕ್‌ನಲ್ಲಿ ಹಾಕಿದ ವಿಡಿಯೊಗಳ ಸರಣಿಯಲ್ಲಿ ಗಡಿಯಲ್ಲಿ ಸೇನಾ ಜವಾನರಿಗೆ ನೀಡಲಾಗುವ ಕಳಪೆ ಗುಣಮಟ್ಟದ ಆಹಾರದ ಬಗ್ಗೆ ವಿವರಿಸಿದ್ದರು. ಸರಕಾರ ಸೇನೆಗೆ ಪೂರೈಸುವ ಆಹಾರ ಪದಾರ್ಥಗಳನ್ನು ಹಿರಿಯ ಅಧಿಕಾರಿಗಳು ಮಾರಾಟ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News