ಕೇರಳ ಪ್ರವಾಹಕ್ಕೆ ಯುಎಇ 700 ಕೋ.ರೂ. ನೆರವು ಸ್ವೀಕಾರಕ್ಕೆ ವಿಪತ್ತು ನೆರವು ನೀತಿ ಅಡ್ಡಿ!
ಹೊಸದಿಲ್ಲಿ, ಅ.22: ಭಾರೀ ಪ್ರವಾಹದಿಂದ ತತ್ತರಿಸಿರುವ ಕೇರಳ ರಾಜ್ಯಕ್ಕೆ ಯುಎಇ 700 ಕೋ.ರೂ.ನೆರವು ನೀಡಲು ಮುಂದಾಗಿದೆ. ಆದರೆ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ 2004ರಲ್ಲಿ ಜಾರಿಗೆ ತಂದಿದ್ದ ವಿಪತ್ತು ನೆರವು ನೀತಿಯ ಪ್ರಕಾರ ಕೇಂದ್ರದ ಎನ್‌ಡಿಎ ಸರಕಾರ ಯುಎಇ ನೆರವನ್ನು ಸ್ವೀಕರಿಸುವ ಸಾಧ್ಯತೆಯಿಲ್ಲ.
‘‘ನಾವು 2004ರಿಂದ ಈ ನೀತಿಯನ್ನು ಪಾಲಿಸುತ್ತಿದ್ದೇವೆ. ನೀತಿ ರೂಪಿಸಿದ ಬಳಿಕ ವಿದೇಶಿ ಸರಕಾರದ ನೆರವನ್ನು ಸ್ವೀಕರಿಸಿಲ್ಲ. ಕೇರಳದ ಕುರಿತು ನಾವು ಇದೇ ನೀತಿಗೆ ಬದ್ಧವಾಗಿದ್ದೇವೆ’’ ಎಂದು ಕೇಂದ್ರ ಸರಕಾರಿ ಮೂಲಗಳು ತಿಳಿಸಿವೆ.
2004ರ ತನಕ ಭಾರತ ವಿದೇಶಿ ಸರಕಾರದ ನೆರವನ್ನು ಸ್ವೀಕರಿಸಿದೆ. ಉತ್ತರಕಾಶಿ ಭೂಕಂಪ(1991), ಲಾತೂರ್ ಭೂಕಂಪ(1993), ಗುಜರಾತ್ ಭೂಕಂಪ(2001), ಬಂಗಾಳ ಚಂಡಮಾರುತ(2002) ಹಾಗೂ ಬಿಹಾರ ಪ್ರವಾಹದ(ಜು.2004) ವೇಳೆ ವಿದೇಶಿ ಸರಕಾರದ ಆರ್ಥಿಕ ನೆರವನ್ನು ಸ್ವೀಕರಿಸಲಾಗಿತ್ತು.
2004ರಲ್ಲಿ ಆಗಿನ ಪ್ರಧಾನಿ ಸಿಂಗ್ ವಿಪತ್ತು ನೆರವು ನೀತಿಯನ್ನು ರೂಪಿಸಿದ್ದು, ‘‘ನಾವು ನಮ್ಮ ಪರಿಸ್ಥಿತಿಯನ್ನು ಸ್ವತಹ ನಿಭಾಯಿಸುತ್ತೇವೆ. ಅಗತ್ಯವಿದ್ದರೆ ನೆರವು ಪಡೆಯುತ್ತೇವೆ’’ ಎಂದು ಸಿಂಗ್ ಹೇಳಿದ್ದರು.
ಯುಪಿಎ ಸರಕಾರ ವಿಪತ್ತು ನೆರವು ನೀತಿ ರೂಪಿಸಿದ ಬಳಿಕ ಕಳೆದ 14 ವರ್ಷಗಳಿಂದ ರಶ್ಯ, ಅಮೆರಿಕ ಹಾಗೂ ಜಪಾನ್ ದೇಶಗಳ ಆರ್ಥಿಕ ನೆರವನ್ನು ಸ್ವೀಕರಿಸಲಾಗಿಲ್ಲ. 2013ರ ಉತ್ತರಖಂಡ ಪ್ರವಾಹ, 2005ರ ಕಾಶ್ಮೀರ ಭೂಕಂಪ ಹಾಗೂ 2014ರ ಕಾಶ್ಮೀರ ಪ್ರವಾಹ ದುರಂತಗಳ ವೇಳೆ ಯಾವುದೇ ನೆರವು ಪಡೆದಿಲ್ಲ.
ವಿಪತ್ತು ನೆರವು ನೀತಿಯು ವಿದೇಶಿ ಸರಕಾರಕ್ಕೆ ಸೀಮಿತವಾಗಿದೆ. ವಿದೇಶಗಳಲ್ಲಿರುವ ಎನ್‌ಆರ್‌ಐಗಳು ಹಾಗೂ ವಿಪತ್ತು ನಿರ್ವಹಣಾ ಸೆಕ್ಟರ್‌ನಲ್ಲಿ ಕಾರ್ಯನಿರ್ವಹಿಸುವವರು ನೀಡುವ ನೆರವಿಗೆ ಇದು ಅನ್ವಯವಾಗುವುದಿಲ್ಲ