ಗೋವಾದಲ್ಲಿ ಅಕೌಂಟಂಟ್ ಹುದ್ದೆಗೆ ಪರೀಕ್ಷೆ ಬರೆದಿದ್ದ ಎಲ್ಲ 8,000 ಅಭ್ಯರ್ಥಿಗಳೂ ಫೇಲ್!

Update: 2018-08-22 08:31 GMT

ಪಣಜಿ,ಆ.22: ಗೋವಾ ಸರಕಾರವು 80 ಅಕೌಂಟಂಟ್ ಹುದ್ದೆಗಳಿಗೆ ನೇಮಕಾತಿಗಾಗಿ ಈ ವರ್ಷದ ಜನವರಿ 7ರಂದು ನಡೆಸಿದ್ದ ಪರೀಕ್ಷೆಗೆ ಭರ್ತಿ 8,000 ಅಭ್ಯರ್ಥಿಗಳು ಹಾಜರಾಗಿದ್ದರಾದರೂ ಒಬ್ಬನೇ ಒಬ್ಬ ಅಭ್ಯರ್ಥಿ ತೇರ್ಗಡೆಯಾಗಿಲ್ಲ!

ಎಲ್ಲರೂ ಪದವೀಧರರೇ ಆಗಿದ್ದ ಅಭ್ಯರ್ಥಿಗಳು ಹುದ್ದೆಗೆ ಅರ್ಹತೆಗಾಗಿ 100 ಅಂಕಗಳಲ್ಲಿ ಕನಿಷ್ಠ 50 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿತ್ತು.

 ಐದು ಗಂಟೆ ಅವಧಿಯ ಲಿಖಿತ ಪರೀಕ್ಷೆಯಲ್ಲಿ ಇಂಗ್ಲೀಷ್,ಸಾಮಾನ್ಯ ಜ್ಞಾನ ಮತ್ತು ಲೆಕ್ಕಪತ್ರಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಒಟ್ಟು 100 ಅಂಕಗಳನ್ನು ನಿಗದಿಗೊಳಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದವರು ಅಂತಿಮ ಆಯ್ಕೆಗೆ ಮುನ್ನ ವೌಖಿಕ ಸಂದರ್ಶನಕ್ಕೆ ಹಾಜರಾಗಬೇಕಿತ್ತು. ಗೋವಾ ಸರಕಾರದ ಅಕೌಂಟ್ಸ್ ನಿರ್ದೇಶನಾಲಯವು ಮಂಗಳವಾರ ಫಲಿತಾಂಶವನ್ನು ಪ್ರಕಟಿಸಿದ್ದು,ಒಬ್ಬನೇ ಒಬ್ಬ ಅಭ್ಯರ್ಥಿಯೂ ಈ ಭಾಗ್ಯವನ್ನು ಪಡೆದಿಲ್ಲ.

ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವನ್ನು ಟೀಕಿಸಿರುವ ಆಮ್ ಆದ್ಮಿ ಪಾರ್ಟಿಯ ಗೋವಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರದೀಪ ಪಡಗಾಂವಕರ್ ಅವರು,ಎಲ್ಲ 8,000 ಅಭ್ಯರ್ಥಿಗಳು ಅನುತ್ತೀರ್ಣಗೊಂಡಿರುವುದು ರಾಜ್ಯದ ಶಿಕ್ಷಣ ವ್ಯವಸ್ಥೆಯು ಕುಸಿದಿದೆ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಇದು ಈ ಪದವೀಧರರನ್ನು ತಯಾರಿಸಿರುವ ಗೋವಾ ವಿವಿ ಮತ್ತು ಕಾಮರ್ಸ್ ಕಾಲೇಜುಗಳಿಗೆ ನಾಚಿಕೆಗೇಡಿನ ವಿಷಯವಾಗಿದೆ ಎಂದು ಕುಟುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News