×
Ad

ಆಮ್ ಆದ್ಮಿ ಪಕ್ಷ ತ್ಯಜಿಸಿದ ಆಶೀಶ್ ಖೇತಾನ್

Update: 2018-08-22 15:44 IST

ಹೊಸದಿಲ್ಲಿ, ಆ.22: ಆಮ್ ಆದ್ಮಿ ಪಕ್ಷದ ಅಶುತೋಷ್ ರಾಜೀನಾಮೆ ನೀಡಿ ವಾರ ಕಳೆಯುವಷ್ಟರಲ್ಲಿ ಇನ್ನೋರ್ವ ನಾಯಕ ಆಶೀಶ್ ಖೇತಾನ್ ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ಮೂಲಗಳು ತಿಳಿಸಿವೆ.

ರಾಜೀನಾಮೆ ಸುದ್ದಿಯನ್ನು ನಿರಾಕರಿಸದ ಖೇತಾನ್, ‘‘ಈ ಕ್ಷಣದಲ್ಲಿ ನಾನು ಯಾವುದೇ ಸಕ್ರಿಯ ರಾಜಕೀಯದಲ್ಲಿ ಭಾಗಿಯಾಗಲಾರೆ. ಊಹಾಪೋಹದ ಬಗ್ಗೆ ನನಗೆ ಆಸಕ್ತಿಯಿಲ್ಲ’’ ಎಂದು ಹೇಳಿದ್ದಾರೆ.

‘‘ನಾನು ಕಾನೂನು ವೃತ್ತಿಯಲ್ಲಿ ಸೇರ್ಪಡೆಯಾಗುವ ಉದ್ದೇಶದಿಂದ ಎಪ್ರಿಲ್‌ನಲ್ಲೇ ಡಿಡಿಸಿಗೆ ರಾಜೀನಾಮೆ ನೀಡಿದ್ದೆ'' ಎಂದು ದಿಲ್ಲಿ ಸರಕಾರದ ಸಲಹಾ ಮಂಡಳಿ ಡೆಲ್ಲಿ ಡೈಲಾಗ್ ಹಾಗೂ ಡೆವಲಪ್‌ಮೆಂಟ್ ಕಮಿಶನ್‌ನ್ನು ಉಲ್ಲೇಖಿಸಿ ಖೇತಾನ್ ಟ್ವೀಟ್ ಮಾಡಿದ್ದಾರೆ.

"ನಾನು ಸಂಪೂರ್ಣವಾಗಿ ಕಾನೂನು ಚಟುವಟಿಕೆಯತ್ತ ಗಮನ ನೀಡುವೆ. ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ’’ ಎಂದು ಟ್ವೀಟ್ ಮಾಡಿದ್ದಾರೆ.

ಪಕ್ಷದ ಮೂಲಗಳ ಪ್ರಕಾರ ಆಶೀಶ್ ಖೇತಾನ್ ಆ.15 ರಂದು ಎಎಪಿ ಅಧ್ಯಕ್ಷ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ರಾಜೀನಾಮೆ ಪತ್ರವನ್ನು ಕಳುಹಿಸಿಕೊಟ್ಟಿದ್ದರು. ಅದೇ ದಿನ ಪಕ್ಷದ ಇನ್ನೋರ್ವ ಮುಖಂಡ ಅಶುತೋಷ್ ಅತ್ಯಂತ ವೈಯಕ್ತಿಕ ಕಾರಣ ನೀಡಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

ಖೇತಾನ್ 2019ರ ಲೋಕಸಭಾ ಚುನಾವಣೆಯ ಹೊಸದಿಲ್ಲಿ ಸಂಸತ್ ಕ್ಷೇತ್ರಕ್ಕೆ ಎಎಪಿ ಪಕ್ಷದಿಂದ ಸ್ಪರ್ಧಿಸಲು ಬಯಸಿದ್ದರು. 2014ರ ಚುನಾವಣೆಯಲ್ಲಿ ಬಿಜೆಪಿಯ ಮೀನಾಕ್ಷಿ ಲೇಖಿ ವಿರುದ್ಧ ಸೋತಿದ್ದ ಖೇತಾನ್ ಬೇಡಿಕೆಯನ್ನು ಪಕ್ಷ ಒಪ್ಪಿಕೊಳ್ಳದ ಕಾರಣ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಎಎಪಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News