ಕೇರಳ: ಜಲಾವೃತ ಮನೆಗೆ ಹಿಂದಿರುಗಿದ ವ್ಯಕ್ತಿಗೆ ಮೊಸಳೆ ಸ್ವಾಗತ !
ಮಲಪ್ಪುರಂ, ಆ. 22: : ಕೇರಳದ ಪ್ರವಾಹದಿಂದಾಗಿ ತೀವ್ರ ಬಾಧಿತವಾಗಿರುವ ಮಲಪ್ಪುರಂನಲ್ಲಿ ಹಾವು ಹಿಡಿಯುವ ವೃತ್ತಿಯ ಮುಸ್ತಾಫ ಈಗ ಬಿಡುವಿರದ ಮನುಷ್ಯ. ಕಳೆದೆರಡು ದಿನಗಳಲ್ಲಿ ನೆರೆ ನೀರು ಇಳಿಮುಖವಾಗುತ್ತಿರುವ ಹಾಗೆಯೇ ಈತ ಹಲವಾರು ಮನೆಗಳಲ್ಲಿ ನೀರಿನೊಂದಿಗೆ ಸೇರಿಕೊಂಡಿದ್ದ 100ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದಾನೆ. ಹಾಗೆಯೇ ನೆರೆ ಇಳಿಯುತ್ತಿದ್ದಂತೆಯೇ ತಮ್ಮ ಮನೆಗಳು ಹೇಗಿವೆ ಎಂದು ತಿಳಿಯಲು ಆಶ್ರಯ ಶಿಬಿರಗಳಿಂದ ಹಿಂದಿರುಗುತ್ತಿರುವ ಜನರಿಗೆ ಹಾವುಗಳು ಹಾಗೂ ಜಂತುಗಳು ಸ್ವಾಗತ ನೀಡುತ್ತಿವೆ.
ತ್ರಿಶ್ಶೂರು ಜಿಲ್ಲೆಯ ಚಾಲಕುಡಿಯಲ್ಲಿ ಸೋಮವಾರ ರಾತ್ರಿ ತನ್ನ ಮನೆಗೆ ಹಿಂದಿರುಗಿದ ವ್ಯಕ್ತಿಗೆ ಮೊಸಳೆಯೊಂದು ಆಘಾತ ನೀಡಿತ್ತು, ಆತ ಮತ್ತು ನೆರೆಮನೆಯವರು ಕೂಡಲೇ ಕಾರ್ಯಪ್ರವೃತ್ತರಾಗಿ ಮೊಸಳೆಯನ್ನು ಹಗ್ಗಗಳಿಂದ ಕಟ್ಟಿ ಹಾಕಿದ್ದಾರೆ.
``ನೆರೆ ಸಮಸ್ಯೆ ಕಾಡಿದಾಗ ಹಾವುಗಳು ಸೇರಿದಂತೆ ಕೀಟಗಳು ಕೂಡ ಅದರಲ್ಲಿ ಕಾಣಸಿಗುತ್ತವೆ. ತಮ್ಮ ಮನೆಗಳಿಗೆ ಹಿಂದಿರುಗುವವರು ತಮ್ಮ ಬೂಟುಗಳ ಒಳಗೆ, ಒಡೆದ ಟೈಲ್ಸ್ ಅಥವಾ ಒದ್ದೆ ಕಟ್ಟಿಗೆಗಳೆಡೆ ಕೈ ಹಾಕುವಾಗ ಜಾಗರೂಕತೆ ವಹಿಸಬೇಕು,'' ಎಂದು ಮುಸ್ತಾಫ ಹೇಳುತ್ತಾರೆ.
ಎರ್ನಾಕುಳಂ ಜಿಲ್ಲೆಯ ಅಂಗಮಾಲಿಯಲ್ಲಿನ ಆಸ್ಪತ್ರೆಯೊಂದರಲ್ಲಿ ಹಾವು ಕಡಿತಕ್ಕೊಳಗಾಗಿರುವ 52 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಪಟ್ಟಣಂತಿಟ್ಟದಲ್ಲಿ ತಮ್ಮ ಮನೆಗಳನ್ನು ಶುಚಿಗೊಳಿಸಲು ಹಿಂದಿರುಗಿದ್ದ ಜನರು ಹಾವುಗಳನ್ನು ನೋಡಿ ಭಯಭೀತರಾಗಿ ಹಿಂದಿರುಗಿದ್ದರು. ಹಾವು ಮತ್ತಿತರ ವಿಷಪೂರಿತ ಜಂತುಗಳ ಕಡಿತಕ್ಕಾಗಿ ನೀಡಲಾಗುವ ಚುಚ್ಚುಮದ್ದುಗಳನ್ನು ನೆರೆಪೀಡಿತ ಪ್ರದೇಶಗಳ ಆಸ್ಪತ್ರೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಒದಗಿಸಲಾಗಿದೆ ಎಂದು ಸರಕಾರ ತಿಳಿಸಿದೆ.