ಕೇರಳ ಪ್ರವಾಹ: ಗಮನ ಸೆಳೆದ ಇಬ್ಬರು ಮಹಿಳಾ ಜಿಲ್ಲಾಧಿಕಾರಿಗಳ ಕಾರ್ಯನಿರ್ವಹಣೆ

Update: 2018-08-22 16:48 GMT

ಕೊಚ್ಚಿ, ಆ. 22: ಕಳೆದ ಎರಡು ವಾರಗಳಿಂದ ಕೇರಳಕ್ಕೆ ಪರಿಹಾರ ಸಾಮಗ್ರಿಗಳು ಹರಿದುಬರುತ್ತಿವೆ ಮತ್ತು ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ರಾಜ್ಯ ಹಿಂದೆಂದೂ ಕಂಡರಿಯದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪ್ರವಾಹ ಹಾಗೂ ಭೂಕುಸಿತ ಸಾವಿರಾರು ಮನೆಗಳನ್ನು ಧ್ವಂಸಗೊಳಿಸಿದ್ದು, 200ಕ್ಕೂ ಹೆಚ್ಚು ಮಂದಿ ಆಗಸ್ಟ್ 9ರಿಂದೀಚೆಗೆ ಮೃತಪಟ್ಟಿದ್ದು, ರಾಜ್ಯದ ಇತಿಹಾಸದಲ್ಲೇ ಇದು ಭೀಕರ ದುರಂತ.

ಖಾಸಗಿವರು, ಸಂಘ ಸಂಸ್ಥೆಗಳು, ವ್ಯಾಪಾರಿ ಸಂಘ ಸಂಸ್ಥೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು, ಪರಿಹಾರ ಸಾಮಗ್ರಿಗಳು ಸಮರ್ಪಕವಾಗಿ ಸಂತ್ರಸ್ತರಿಗೆ ಸೇರುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ನಿಯಂತ್ರಣ ಕೊಠಡಿಯನ್ನು ವ್ಯವಸ್ಥೆಗೊಳಿಸುವ ಮತ್ತು ಕೇಂದ್ರೀಯ ಪಡೆಗಳಿಗೆ ನೆರವಾಗುವ ಜಿಲ್ಲಾಡಳಿತದ ಕಾರ್ಯ ಕೂಡಾ ಶ್ಲಾಘನೀಯ. ಇಬ್ಬರು ಮಹಿಳಾ ಜಿಲ್ಲಾಧಿಕಾರಿಗಳು, ನಿರ್ದಿಷ್ಟವಾಗಿ ಮನ್ನಾರ್‌ನಲ್ಲಿ ಆಡಳಿತ ಯಂತ್ರದ ಪ್ರಯತ್ನಗಳಿಗೆ ನಾಯಕತ್ವ ನೀಡಿದ ಇವರ ಬಗ್ಗೆ ಸರ್ವತ್ರ ಮೆಚ್ಚುಗೆ ವ್ಯಕ್ತವಾಗಿದೆ. ತ್ರಿಶ್ಶೂರ್ ಜಿಲ್ಲೆಯ ಹಂಗಾಮಿ ಜಿಲ್ಲಾಧಿಕಾರಿ ಟಿ.ವಿ.ಅನುಪಮ ಹಾಗೂ ತಿರುವನಂತಪುರದ ಕೆ.ವಾಸುಕಿ, ಸಂಕಷ್ಟದ ಸಂದರ್ಭದಲ್ಲಿ ಜನರನ್ನು ಪರಸ್ಪರ ಸಂಪರ್ಕಿಸಲು ಮಾಡಿದ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಹಿಂದೆ ಅಲಪ್ಪುಳ ಜಿಲ್ಲಾಧಿಕಾರಿಯಾಗಿದ್ದ ಅನುಪಮ, ಪ್ರಬಲ ರಾಜಕಾರಣಿಗಳು ಮತ್ತು ಲಾಬಿ ಗುಂಪುಗಳ ವಿರುದ್ಧ ದಿಟ್ಟ ನಿರ್ಧಾರ ಕೈಗೊಂಡು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಮಾಜಿ ಸಾರಿಗೆ ಸಚಿವ ಥಾಮಸ್ ಚಾಂಡಿಯವರು ಭತ್ತದ ಗದ್ದೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪದ ಬಗೆಗೆ ಸತ್ಯಶೋಧನಾ ವರದಿ ಸಲ್ಲಿಸಿದ್ದರು. ಇದರ ಆಧಾರದಲ್ಲಿ ಚಾಂಡಿ ವಿರುದ್ಧ ಪ್ರಕರಣ ದಾಖಲಿಸುವಂತೆ ಹೈಕೋರ್ಟ್ ಸೂಚನೆ ನೀಡಿತ್ತು.

2010ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್ ಗಳಿಸಿದ್ದ ಅನುಪಮ, ಈ ವರ್ಷದ ಜೂನ್ ತಿಂಗಳಲ್ಲಿ ತ್ರಿಶ್ಶೂರ್ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರಿಗೆ ಎದುರಾದ ಮೊದಲ ಅತ್ಯಂತ ಕಠಿಣ ಪರೀಕ್ಷೆ ಎಂದರೆ, ಮಾಳ, ಚಲಕುಡಿಮ ಕೊಡುಂಗಲ್ಲೂರು ಮತ್ತು ಅನ್ನಮನಡ ಮತ್ತಿತರ ಪ್ರದೇಶಗಳಲ್ಲಿ ಆವರಿಸಿದ ಭೀಕರ ಪ್ರವಾಹ. ಅಧಿಕೃತ ಫೇಸ್‌ಬುಕ್‌ಖಾತೆಯಲ್ಲಿ ನಿಯತವಾಗಿ ಅಪ್‌ಡೇಟ್ ಪೋಸ್ಟ್ ಮಾಡುವ ಜತೆಗೆ, ಪರಿಹಾರ ಶಿಬಿರಗಳಿಗೆ ಅಗತ್ಯ ವಸ್ತುಗಳು ಸರಬರಾಜು ಆಗುವಂತೆ ಸಂಯೋಜಿಸುವುದು, ಪರಿಹಾರ ಸಾಮಗ್ರಿಗಳನ್ನು ದಾಸ್ತಾನು ಮಾಡುವ ಸಂಬಂಧ ವಕೀಲರ ಸಂಘದ ಜತೆ ಮುನಿಸಿಕೊಂಡದ್ದು ದೊಡ್ಡ ಸುದ್ದಿಯಾಗಿತ್ತು. ಜಿಲ್ಲಾಡಳಿತದ ಆದೇಶದ ಹೊರತಾಗಿಯೂ, ಸಿವಿಲ್ ಸ್ಟೇಷನ್ ಆವರಣದಲ್ಲಿ ಪರಿಹಾರ ವಸ್ತುಗಳನ್ನು ದಾಸ್ತಾನು ಮಾಡಲು ಅವಕಾಶ ನೀಡಲಿಲ್ಲ ಎಂದು ವರದಿಯಾಗಿತ್ತು. ದಿಟ್ಟ ನಿರ್ಧಾರಕ್ಕೆ ಹೆಸರಾದ ಅನುಪಮ, ಜಿಲ್ಲಾಡಳಿತದ ಆದೇಶಕ್ಕೆ ಅನುಗುಣವಾಗಿ ಮುಂದಡಿ ಇಟ್ಟು ಎರಡು ಕೊಠಡಿಗಳ ಬೀಗ ಒಡೆದು ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಿದರು. ಜಿಲ್ಲಾಧಿಕಾರಿಗಳ ಈ ದಿಟ್ಟ ಕ್ರಮವನ್ನು ಅನೇಕ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶ್ಲಾಘಿಸಿದರು. ದಕ್ಷಿಣದ ತುತ್ತತುದಿಯ ಜಿಲ್ಲೆಯಾದ ತಿರುವನಂತಪುರಂ ಜಿಲ್ಲೆ ಎರ್ನಾಕುಲಂ, ಅಲಪ್ಪುಳ, ಇಡುಕ್ಕಿ ಮತ್ತು ವಯನಾಡ್‌ನಷ್ಟು ಹಾನಿಗೀಡಾಗದಿದ್ದರೂ, ಪರಿಹಾರ ಸಾಮಗ್ರಿಗಳ ಸಂಗ್ರಹ ಮತ್ತು ವಿತರಣೆಯಲ್ಲಿ ಕೆ.ವಾಸುಕಿ ವಹಿಸಿದ ಪಾತ್ರ ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಉಸ್ತುವಾರಿಯಲ್ಲಿ ಜಿಲ್ಲಾಡಳಿತ 54 ಟ್ರಕ್ ಲೋಡ್ ವಸ್ತುಗಳನ್ನು ಎರಡು ದಿನಗಳಲ್ಲಿ ಸಂಗ್ರಹಿಸಿ, ಜಿಲ್ಲೆಯ ಹಾನಿಗೀಡಾದ ಪ್ರದೇಶಗಳಿಗೆ ಮತ್ತು ಹೊರ ಜಿಲ್ಲೆಗಳಿಗೆ ಕಳುಹಿಸುವುದು ಸಾಧ್ಯವಾಗಿತ್ತು.

ಒಂದು ಪರಿಹಾರ ಶಿಬಿರದಲ್ಲಿ, ಮೈಕ್ರೋಫೋನ್ ಬಳಸಿಕೊಂಡು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಲು ಮುಂದಾದವರನ್ನು ಉದ್ದೇಶಿಸಿ ಮಾತನಾಡಿ, ನೀವು ಮಾಡುತ್ತಿರುವುದು ಸರ್ವಶ್ರೇಷ್ಠ ಕಾರ್ಯ ಎಂದು ಹುರಿದುಂಬಿಸಿದ್ದರು.

"ನೀವೇನು ಮಾಡುತ್ತಿದ್ದೀರಿ ಎನ್ನುವುದು ನಿಮಗೆ ಗೊತ್ತೇ? ನೀವು ಇತಿಹಾಸ ಸೃಷ್ಟಿಸುತ್ತಿದ್ದೀರಿ. ಮಲೆಯಾಳಿಗಳು ಎಷ್ಟು ಸಮರ್ಥರು ಎನ್ನುವುದನ್ನು ನೀವು ಇಡೀ ವಿಶ್ವಕ್ಕೆ ತೋರಿಸಿಕೊಡುತ್ತಿದ್ದೀರಿ. ಲಾಜಿಸ್ಟಿಕ್ಸ್ ಮತ್ತು ಸಂಗ್ರಹಿಸಿದಪರಿಹಾರ ಸಾಮಗ್ರಿಗಳ ಪ್ರಮಾಣ ಕೇವಲ ರಾಷ್ಟ್ರಮಟ್ಟದ ಸುದ್ದಿಯಾಗಿಲ್ಲ. ಬದಲಾಗಿ ಅಂತರರಾಷ್ಟ್ರೀಯ ಸುದ್ದಿಯಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳಂತೆ, ನೀವು ಒಂದು ಸೇನೆಯಾಗಿ ಹೋರಾಟ ನಡೆಸಿದ್ದೀರಿ. ನೀವು ಮಾಡಿದ ಕಾರ್ಯ ಅದ್ಭುತ. ವಿಮಾನ ನಿಲ್ದಾಣದಲ್ಲಿ ಲೋಡಿಂಗ್ ಮತ್ತು ಅನ್‌ಲೋಡಿಂಗ್‌ಗೆ 400 ಸ್ವಯಂಸೇವಕರು ಹೆಸರು ನೊಂದಾಯಿಸಿಕೊಂಡಿದ್ದೀರಿ. ಸರ್ಕಾರಕ್ಕೆ ಆಗುವ ಕೂಲಿ ವೆಚ್ಚವೇ, ನಾವು ಲೆಕ್ಕಹಾಕಿದರೆ ಕೋಟಿಗಳಷ್ಟಾಗುತ್ತದೆ" ಎಂದು ಅವರು ಹೇಳಿದ್ದೂ, ಶ್ಲಾಘನೆಗೆ ಪಾತ್ರವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News