ಕೊಡವ ಸಮಾಜದ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ವಂಚನೆ

Update: 2018-08-22 18:47 GMT

ಮಡಿಕೇರಿ, ಆ. 22: ಧಾರಾಕಾರ ಮಳೆ ಮತ್ತು ಭೂಕುಸಿತದಿಂದಾದ ಅನಾಹುತದಿಂದ ಕೊಡಗು ಕಂಗೆಟ್ಟಿದ್ದರೆ, ವ್ಯಕ್ತಿಯೊಬ್ಬ ನಕಲಿ ಪ್ರವಾಹ ಪರಿಹಾರ ಖಾತೆಯನ್ನು ತೆರೆದು ಜನರಿಂದ ಹಣ ಸಂಗ್ರಹಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಸೋಮವಾರ ಕೊಡವ ಸಮಾಜ ಕೇಂದ್ರೀಯ ಅಪರಾಧ ಶಾಖೆಗೆ ದೂರು ನೀಡಿ, ಕೆಲ ಕಿಡಿಗೇಡಿಗಳು ನಕಲಿ ಪ್ರವಾಹ ಪರಿಹಾರ ಖಾತೆಯನ್ನು ಸಮಾಜದ ಹೆಸರಿನಲ್ಲಿ ತೆರೆದು ಜನರಿಂದ ಹಣ ಸಂಗ್ರಹಿಸುತ್ತಿದೆ ಎಂದು ಆಪಾದಿಸಿತ್ತು.

ಕೊಡವ ಸಮಾಜದ್ದು ಎಂದು ಹೇಳಲಾದ ಪ್ರವಾಹ ಪರಿಹಾರ ನಿಧಿಯ ಬ್ಯಾಂಕ್ ಖಾತೆ ಸಂಖ್ಯೆ ಫೇಸ್‌ಬುಕ್, ಟ್ವಿಟ್ಟರ್ ಮತ್ತು ವಾಟ್ಸಪ್‌ನಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ತನಿಖೆ ನಡೆಸುವವರೆಗೆ ಖಾತೆಯನ್ನು ಅಮಾನತುಗೊಳಿಸುವಂತೆಯೂ ಕೊಡುವ ಸಮಾಜ ಮನವಿ ಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿಜಯ್ ಶರ್ಮಾ ಎಂಬಾತ ಈ ನಕಲಿ ಖಾತೆ ಪ್ರಕರಣದ ಹಿಂದಿರುವ ವ್ಯಕ್ತಿ ಎಂದು ಪೊಲೀಸರು ಹೇಳಿದ್ದಾರೆ. ವಿಜಯ್ ಶರ್ಮನನ್ನು ಮಂಡ್ಯದಲ್ಲಿ ಪತ್ತೆ ಮಾಡಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಗುರಿಪಡಿಸಿದ್ದಾರೆ.

"ಆತ ಎಸ್‌ಬಿಐ ಪದ್ಮನಾಭನಗರ ಶಾಳೆಯಲ್ಲಿ ಸಿ.ಪಿ.ವಿಜಯ್ ಬೇಬಿ ಹೆಸರಿನಲ್ಲಿ ಖಾತೆ ತೆರೆದು 60 ಸಾವಿರ ರೂಪಾಯಿಗಳನ್ನು ಕೊಡವ ಸಮಾಜ ಪ್ರವಾಹ ಪರಿಹಾರ ನಿಧಿ ಹೆಸರಿನಲ್ಲಿ ಸಂಗ್ರಹಿಸಿದ್ದ. ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ನೆರವು ನಿಡುವಂತೆ ಕೋರಿದ್ದ" ಎಂದು ಪೊಲೀಸರು ಹೇಳಿದ್ದಾರೆ.

ಕೊಡವ ಸಮಾಜ ಇದೀಗ ಈ ನಕಲಿ ಖಾತೆಗೆ ದೇಣಿಗೆ ಪಾವತಿಸದಂತೆ ಕೊಡವ ಸಮಾಜ ಮನವಿ ಮಾಡಿಕೊಂಡಿದೆ. ಕೊಡವ ಸಮಾಜದ ಅಧಿಕೃತ ಬ್ಯಾಂಕ್ ಖಾತೆ ಕೆನರಾ ಬ್ಯಾಂಕಿನ ವಸಂತ ನಗರ ಶಾಖೆಯಲ್ಲಿದೆ ಎಂದು ಹೇಳಿದೆ.

ಕೊಡವ ಸಮಾಜದ ಅಧಿಕೃತ ಖಾತೆಯಾದ ಕೊಡವ ಸಮಾಜ ನೆರೆ ಪರಿಹಾರ ನಿಧಿ ಬೆಂಗಳೂರು, ಖಾತೆ ಸಂಖ್ಯೆ 1370101084312, ಐಎಫ್‌ಎಸ್‌ಸಿ ಕೋಡ್: CNRB0001370. ಕೆನರಾ ಬ್ಯಾಂಕ್, ವಸಂತ ನಗರ ಶಾಖೆಗೆ ದೇಣಿಗೆ ನೀಡುವಂತೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News