‘ಭಾರತ್ ಮಾತಾ ಕಿ ಜೈ’ ಘೋಷಣೆ ವಿಚಾರ: ಈದ್ ಪ್ರಾರ್ಥನೆ ವೇಳೆ ಫಾರೂಕ್ ಅಬ್ದುಲ್ಲಾಗೆ ಮುತ್ತಿಗೆ

Update: 2018-08-23 08:23 GMT

ಶ್ರೀನಗರ, ಆ.23: ಆಗಸ್ಟ್ 20ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಸ್ಮರಣಾರ್ಥ ನಡೆದ ಪ್ರಾರ್ಥನಾ ಸಭೆಯಲ್ಲಿ `ಭಾರತ್ ಮಾತಾ ಕಿ ಜೈ' ಘೋಷಣೆ ಕೂಗಿದ್ದ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಬುಧವಾರ  ಇಲ್ಲಿನ 17ನೇ ಶತಮಾನದ ಹಜ್ರತ್‍ಬಲ್ ಮಸೀದಿಯಲ್ಲಿ ಈದ್ ನಮಾಝ್ ವೇಳೆ ಯುವಕರ ಆಕ್ರೋಶಕ್ಕೆ ತುತ್ತಾಗಬೇಕಾಯಿತು.

ಅಲ್ಲಿ ನೆರೆದಿದ್ದ ಒಂದು ಗುಂಪು `ಫಾರೂಕ್ ಅಬ್ದುಲ್ಲಾ ಗೋ ಬ್ಯಾಕ್,' `ಹಮ್ ಕ್ಯಾ ಚಾಹತೇ, ಆಝಾದಿ' ಎಂಬ ಘೋಷವಾಕ್ಯಗಳನ್ನು ಕೂಗಿದರು. ಇದರಿಂದ ಧೃತಿಗೆಡದ ಅಬ್ದುಲ್ಲಾ ನಮಾಝ್ ಮುಂದುವರಿಸಿದರು.

ಅನಾರೋಗ್ಯದ ಕಾರಣ ಮೊದಲ ಸಾಲಿನಲ್ಲಿ ಕುರ್ಚಿಯಲ್ಲಿ ಅಬ್ದುಲ್ಲಾ ಕುಳಿತಿದ್ದಾಗ ಕೆಲ ಯುವಕರು ಘೋಷಣೆ ಕೂಗುತ್ತಾ ಅವರ ಬಳಿ ಬಂದಾಗ ಇನ್ನು ಕೆಲವರು ಕೈ ಕೈ ಹಿಡಿದು ಅವರ ಸುತ್ತ ಮಾನವ ಸರಪಳಿ ಸೃಷ್ಟಿಸಿದರು. ಭದ್ರತಾ ಸಿಬ್ಬಂದಿ ಕೂಡ ಶ್ರೀನಗರದ ಲೋಕಸಭಾ ಸಂಸದರಾಗಿರುವ ಫಾರೂಕ್ ಅವರನ್ನು ಸುತ್ತುವರಿದು ನಿಂತರು.

``ನಾನೇನು ಅರ್ಧದಲ್ಲಿ ಹೊರಬಂದಿಲ್ಲ, ಪ್ರಾರ್ಥನೆ ಮುಗಿಸಿದ ನಂತರವೇ ಅಲ್ಲಿಂದ ಹೊರಬಂದಿದ್ದೇನೆ. ಅವರು ನಮ್ಮದೇ ಜನರು. ಅವರ ದಾರಿ ತಪ್ಪಿಸಲಾಗಿದೆ. ಅವರ ನಾಯಕನಾಗಿರುವ ನನ್ನ ಜವಾಬ್ದಾರಿಯನ್ನು ನಾನು ತಪ್ಪಿಸಿಕೊಳ್ಳುವುದಿಲ್ಲ,'' ಎಂದು ನಂತರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಾ ಅವರು ಹೇಳಿದರು.

ತಾನು ‘ಭಾರತ್ ಮಾತಾ ಕಿ ಜೈ’ ಎಂದು ಹೇಳಿರುವುದನ್ನು ಮಾಧ್ಯಮಗಳು ಇಷ್ಟೊಂದು ಉತ್ಪ್ರೇಕ್ಷಿಸಿ ಹೇಳುವ ಅಗತ್ಯವೇನಿತ್ತು ಎಂದು ಅವರು ಪ್ರಶ್ನಿಸಿದರು. “ರಾಜಕಾರಣಿ, ಕೆಲವೊಮ್ಮೆ ಜನರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ತಪ್ಪು ದಾರಿಗೆಳೆಯಲ್ಪಟ್ಟ ಈ ಯುವಕರಿಗೆ ಸರಿಯಾದ ಕೌನ್ಸೆಲಿಂಗ್ ದೊರೆಯುವುದು ಎಂದು ನಂಬುತ್ತೇನೆ'' ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News