ಹಿಂದೂ ಧರ್ಮದ ಪ್ರತಿಷ್ಠಿತ ಸಂಸ್ಥೆಯಾದ ವಿಹಿಂಪದ ಮೂಲಕ ನಡೆದ ಮತಾಂತರವನ್ನು ಸಂಶಯಿಸಬೇಕಿಲ್ಲ

Update: 2018-08-23 10:36 GMT

ಚೆನ್ನೈ, ಆ.23: ಎರಡು ವರ್ಷಗಳ ಹಿಂದೆ ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಮಹಿಳೆ ತನಗೆ ಪರಿಶಿಷ್ಟ ಜಾತಿ ಕೋಟಾದಡಿ ಜೂನಿಯರ್ ಗ್ರಾಜುವೇಟ್ ಅಸಿಸ್ಟೆಂಟ್ ಹುದ್ದೆಯನ್ನು ನೀಡುವಂತೆ ಶಿಕ್ಷರಕರ ನೇಮಕಾತಿ ಮಂಡಳಿಗೆ ಆದೇಶಿಸಬೇಕೆಂದು ಕೋರಿ ಮದ್ರಾಸ್ ಹೈಕೋರ್ಟಿನಲ್ಲಿ ಸಲ್ಲಿಸಿರುವ ಅಪೀಲನ್ನು ಎತ್ತಿ ಹಿಡಿದಿರುವ ಹೈಕೋರ್ಟ್, 2005ರಲ್ಲಿ ಶಿಕ್ಷಕಿ ಹುದ್ದೆ ಪಡೆದಿದ್ದ ಆಕೆಯ ನೇಮಕಾತಿಯನ್ನು ದೃಢೀಕರಿಸಬೇಕೆಂದು ತಮಿಳುನಾಡು ಸರಕಾರಕ್ಕೆ ಸೂಚಿಸಿದೆ.

ಈ  ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ಆರ್ ಸುರೇಶ್ ಕುಮಾರ್,  ಆಕೆ ಹಿಂದೂ ಧರ್ಮದ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ವಿಶ್ವ ಹಿಂದು ಪರಿಷದ್ ನೇತೃತ್ವದಲ್ಲಿ ಮತಾಂತರಗೊಂಡಿರುವುದರಿಂದ ಆಕೆ ಕ್ರೈಸ್ತ ಧರ್ಮದಿಂದ ಹಿಂದು ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಯಾವುದೇ ಸಂಶಯ ಬೇಡ ಎಂದರು.

ಆದರೆ ಅರ್ಜಿದಾರೆ ತಿರುಚಿರಾಪಳ್ಳಿಯ ಎ. ಮೇಗಲೈ ತಾನು ಸತತವಾಗಿ ಹಿಂದು ಧರ್ಮ ಮತ್ತು ಪದ್ಧತಿಗಳನ್ನು ಅನುಸರಿಸುತ್ತಿರುವ ಬಗ್ಗೆ ಯಾವುದೇ ದಾಖಲೆ ಒದಗಿಸಿಲ್ಲ ಎಂದು ರಾಜ್ಯ ಸರಕಾರ  ಹೇಳಿತ್ತು.

ಆಕೆ ಕ್ರೈಸ್ತ ಧರ್ಮದ ಪರಿಶಿಷ್ಟ ಜಾತಿಗೆ ಸೇರಿದವಳಾಗಿದ್ದಳು ಹಾಗೂ ಸ್ವಇಚ್ಛೆಯಿಂದ ನಂತರ ಹಿಂದು ಧರ್ಮಕ್ಕೆ ಸೇರಿರುವ ಅಂಶವನ್ನೂ ನ್ಯಾಯಾಧೀಶರು ಪರಿಗಣನೆಗೆ ತೆಗೆದುಕೊಂಡಿದ್ದಾರೆ.

ಆಕೆ ನವೆಂಬರ್ 1, 1998ರಂದು ಅಗತ್ಯ ಧಾರ್ಮಿಕ ಪ್ರಕ್ರಿಯೆಗಳನ್ನು ಅನುಸರಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾಗಿಯೂ ಸತತವಾಗಿ ಹಿಂದು ಪದ್ಧತಿಗಳನ್ನು ಅನುಸರಿಸುತ್ತಿದ್ದಾಳೆಂದು ಆಕೆ ವಾಸಿಸುವ ಪರಿಸರದ ಜನರು ತಿಳಿಸಿದ್ದಾರೆ ಎಂಬುದನ್ನೂ ನ್ಯಾಯಾಧೀಶರು ಹೇಳಿ ಸರಕಾರದ ವಾದವನ್ನು ಒಪ್ಪಲು ನಿರಾಕರಿಸಿದ್ದಾರೆ. ಅಲ್ಲದೆ ಆಕೆ ಹಿಂದು ಆದಿ ದ್ರಾವಿಡರ್ ಸಮುದಾಯಕ್ಕೆ ಸೇರಿದವಳೆಂಬುದಕ್ಕೆ ಎಲ್ಲಾ ಆಧಾರಗಳೂ ಇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News