ನನ್ನ ತಂದೆಯನ್ನು ಕೊಂದವನು ಸತ್ತಾಗ ಆತನ ಮಕ್ಕಳಲ್ಲಿ ನನ್ನನ್ನು ಕಂಡಿದ್ದೇನೆ: ರಾಹುಲ್ ಗಾಂಧಿ
ಹೊಸದಿಲ್ಲಿ, ಆ.23: “ನನ್ನ ತಂದೆ ರಾಜೀವ್ ಗಾಂಧಿಯನ್ನು ಹತ್ಯೆಗೈದ ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಹತ್ಯೆಯಾದಾಗ ನನಗೆ ಮತ್ತು ನನ್ನ ಸಹೋದರಿ ಪ್ರಿಯಾಂಕಾಗೆ ಸಂತೋಷವಾಗಿರಲಿಲ್ಲ” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಪ್ರಭಾಕರನ್ ಹತ್ಯೆಯಿಂದ ಅವರ ಮಕ್ಕಳ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ನಮಗನ್ನಿಸಿತ್ತು ಎಂದು ಅವರು ತಿಳಿಸಿದ್ದಾರೆ. ಜರ್ಮನಿಯ ಬುಸೆರಿಯಸ್ ಸಮ್ಮರ್ ಸ್ಕೂಲ್‌ನಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ, “ಹಿಂಸಾಚಾರದ ಕಾರಣ ನಾನು ನನ್ನ ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡಿದ್ದೇನೆ” ಎಂದು ತಿಳಿಸಿದ್ದಾರೆ. “ನನ್ನ ಅಜ್ಜಿ (ಇಂದಿರಾ ಗಾಂಧಿ) ಮತ್ತು ತಂದೆ (ರಾಜೀವ್ ಗಾಂಧಿ) ಇಬ್ಬರನ್ನೂ ಹತ್ಯೆ ಮಾಡಲಾಗಿತ್ತು. ಹಾಗಾಗಿ ನಾನು ಹಿಂಸಾಚಾರದಿಂದ ಸಂಕಷ್ಟಕ್ಕೊಳಗಾಗಿದ್ದೇನೆ. ನಾನು ನನ್ನ ಅನುಭವದಿಂದ ಮಾತನಾಡುತ್ತಿದ್ದೇನೆ. ಹಿಂಸಾಚಾರದ ನಂತರ ನೀವು ಮುಂದಕ್ಕೆ ಸಾಗಬೇಕಾದರೆ ಕ್ಷಮೆಯೊಂದೇ ದಾರಿ. ಬೇರೆ ಯಾವ ದಾರಿಯೂ ಇಲ್ಲ. ಮತ್ತು ಕ್ಷಮಿಸಬೇಕಾದರೆ ನಿಜವಾಗಿ ಏನಾಯಿತು ಮತ್ತು ಯಾಕಾಯಿತು ಎಂಬುದನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. “1991ರಲ್ಲಿ ನನ್ನ ತಂದೆ ಉಗ್ರರಿಗೆ ಬಲಿಯಾಗಿದ್ದರು. ಅವರನ್ನು ಹತ್ಯೆ ಮಾಡಿದ್ದ ವ್ಯಕ್ತಿ 2009ರಲ್ಲಿ ಶ್ರೀಲಂಕಾದ ಗದ್ದೆಯಲ್ಲಿ ಸತ್ತು ಬಿದ್ದಿದ್ದ. ಆಗ ನಾನು ನನ್ನ ಸಹೋದರಿಗೆ ಕರೆ ಮಾಡಿದೆ. ಆದರೆ ನಾನು ಸಂತೋಷಗೊಂಡಿರಲಿಲ್ಲ. ಈ ಸಂದರ್ಭದಲ್ಲಿ ನಾನು ಸಂಭ್ರಮಿಸಬೇಕಿತ್ತು. ಆದರೆ ನನಗೆ ಆಗುತ್ತಿಲ್ಲ ಎಂದು ನಾನು ಆಕೆಗೆ ತಿಳಿಸಿದೆ. ಆಕೆ ಕೂಡಾ ಹೌದು, ನನಗೂ ಸಂತೋಷವಾಗಲಿಲ್ಲ ಎಂದು ಹೇಳಿದ್ದಳು” ಎಂದು ರಾಹುಲ್ ಆ ದಿನವನ್ನು ಮೆಲುಕು ಹಾಕಿದ್ದಾರೆ.
ಪ್ರಭಾಕರನ್ ಓರ್ವ ದುಷ್ಟ ವ್ಯಕ್ತಿಯಾಗಿರಬಹುದು. ಆದರೆ ಆತನ ಸಾವಿನಿಂದ ಆತನ ಮಕ್ಕಳ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿತ್ತು. “ಆ ಮಕ್ಕಳಲ್ಲಿ ನಾನು ನನ್ನನ್ನು ಕಂಡಿದ್ದೇನೆ. ನನ್ನ ತಂದೆ ಸತ್ತಾಗ ನಾನು ಹೇಗೆ ಅತ್ತಿದ್ದೇನೋ ಅವರೂ ಹಾಗೆಯೇ ಅಳುತ್ತಿರಬಹುದು” ಎಂದು ರಾಹುಲ್ ವಿಷಾದ ವ್ಯಕ್ತಪಡಿಸಿದ್ದಾರೆ.