ನಕಲಿ ಮತದಾರರ ಕುರಿತ ಅರ್ಜಿ: ಪ್ರತಿಕ್ರಿಯಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ
ಹೊಸದಿಲ್ಲಿ, ಆ.23: ಚುನಾವಣೆ ನಡೆಯಲಿರುವ ಮಧ್ಯಪ್ರದೇಶ ಹಾಗೂ ರಾಜಸ್ತಾನದಲ್ಲಿ ಮತದಾರರ ಪಟ್ಟಿಯಲ್ಲಿ ನಕಲಿ ಮತದಾರರ ಸೇರ್ಪಡೆಯಾಗಿದೆ ಎಂಬ ಕಾಂಗ್ರೆಸ್ ಮುಖಂಡರಾದ ಕಮಲ್‌ನಾಥ್ ಮತ್ತು ಸಚಿನ್ ಪೈಲಟ್ ಅವರ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಗುರುವಾರ ಅರ್ಜಿಯ ವಿಚಾರಣೆ ಸಂದರ್ಭ ಹೇಳಿಕೆ ನೀಡಿದ ಕಾಂಗ್ರೆಸ್ ಪ್ರತಿನಿಧಿ ವಕೀಲ ಎ.ಎಂ.ಸಿಂಘ್ವಿ , ಮಧ್ಯಪ್ರದೇಶದಲ್ಲಿ ಕಮಲ್‌ನಾಥ್ ವೈಯಕ್ತಿಕವಾಗಿ ನಡೆಸಿದ ಸಮೀಕ್ಷೆಯ ಪ್ರಕಾರ ರಾಜ್ಯದ ಮತದಾರರ ಪಟ್ಟಿಯಲ್ಲಿ 60 ಲಕ್ಷಕ್ಕೂ ಹೆಚ್ಚು ನಕಲಿ ಮತದಾರರಿರುವುದು ಬೆಳಕಿಗೆ ಬಂದಿದೆ . ರಾಜಸ್ತಾನದಲ್ಲೂ ಇದೇ ರೀತಿಯ ಪರಿಸ್ಥಿತಿಯಿದೆ ಎಂದರು. ಹೇಳಿಕೆಯನ್ನು ಆಲಿಸಿದ ನ್ಯಾಯಾಧೀಶರಾದ ಎ.ಕೆ.ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠವು ಈ ಬಗ್ಗೆ ಪ್ರತಿಕ್ರಿಯಿಸುವಂತೆ ಸೂಚಿಸಿ ಕೇಂದ್ರ ಚುನಾವಣಾ ಆಯೋಗ, ಮಧ್ಯಪ್ರದೇಶ ಮತ್ತು ರಾಜಸ್ತಾನದ ಚುನಾವಣಾ ಆಯೋಗಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಿತು. ಮುಂಬರುವ ವಿಧಾನಸಭೆ ಚುನಾವಣೆ ಸಂದರ್ಭ ವಿದ್ಯುನ್ಮಾನ ಮತಯಂತ್ರಗಳ ವಿವಿಪ್ಯಾಟ್‌ಗಳನ್ನು ಅನಿರೀಕ್ಷಿತವಾಗಿ ತಪಾಸಣೆ ನಡೆಸಬೇಕೆಂದು ಕಮಲನಾಥ್ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.