“ಶೌಚಾಲಯ, ಕುಡಿಯುವ ನೀರು, ಆಹಾರವೂ ಇಲ್ಲ”

Update: 2018-08-23 16:56 GMT

ಹೊಸದಿಲ್ಲಿ, ಆ.23: ‘ಇಂಡಿಯನ್ ಐಡಲ್’ ರಿಯಾಲಿಟಿ ಶೋನ 10ನೇ ಅವತರಣಿಕೆ ಆರಂಭವಾಗಿದ್ದು, ಇಂತಹ ಶೋಗಳ ತೆರೆಯ ಹಿಂದೆ ಏನು ನಡೆಯುತ್ತಿದೆ ಎನ್ನುವುದನ್ನು 2012ರಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಬಹಿರಂಗಪಡಿಸಿದ್ದಾರೆ. ಇದೀಗ ಅವರ ಪೋಸ್ಟ್ ವೈರಲ್ ಆಗಿದೆ. ಜತೆಗೆ ರಿಯಾಲಿಟಿ ಶೋಗಳು ಸ್ಪರ್ಧಿಗಳನ್ನು ಹೇಗೆ ಪರಿಗಣಿಸುತ್ತವೆ ಎಂಬ ಪ್ರಶ್ನೆ ಹುಟ್ಟುಹಾಕಿದೆ.

“ರಿಯಾಲಿಟಿ ಶೋಗಳು ನಿಮ್ಮ ಪ್ರತಿಭೆ ಪೋಷಿಸುವ ಬದಲು ನಿಮ್ಮ ಕನಸುಗಳನ್ನು ನಾಶಪಡಿಸುವ ವೇದಿಕೆ” ಎಂದು ನಿಶಾಂತ್ ಕೌಶಿಕ್ ಎಂಬವರು ಟ್ವೀಟ್ ಮಾಡಿದ್ದಾರೆ. 2012ರ ಮೇ ತಿಂಗಳಲ್ಲಿ ಮುಂಬೈಗೆ ಆಡಿಶನ್ ಗಾಗಿ ಆಗಮಿಸಿದಾಗಿನ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.

“ಮುಂಬೈ ಶಾಲಾ ಮೈದಾನದ ಹೊರಗೆ ಎರಡು ಕಿಲೋಮೀಟರ್ ಸರದಿ ಸಾಲು ಕಂಡುಬಂದಿತ್ತು. ಕೆಲವರು ಉತ್ಸಾಹದಿಂದ ಬಂದಿದ್ದರೆ, ಕೆಲವರು ನನ್ನಂತೆ ಮಜಾ ತೆಗೆದುಕೊಳ್ಳಲು ಬಂದವರು. ಕೆಲವರ ಜತೆ ಕುಟುಂಬದವರೂ ಬಂದರೆ ಮತ್ತೆ ಕೆಲವರು ಒಬ್ಬರೇ ಬರುತ್ತಾರೆ. ಮಧ್ಯಾಹ್ನ 1 ಗಂಟೆಗೆ ಪ್ರವೇಶ ದ್ವಾರ ತೆರೆಯಲಾಗಿತ್ತು. ಆದರೆ ಹಿಂದಿನ ದಿನವೇ ಆಗಮಿಸಿ ತಾವೇ ಮೊದಲಿಗರಾಗಬೇಕು ಎಂದು ಮುಂಜಾನೆ 7ರಿಂದಲೇ ಸ್ಪರ್ಧಾಕಾಂಕ್ಷಿಗಳು ಸಾಲು ನಿಂತಿದ್ದರು. ಅಲ್ಲಿ ಶೌಚಾಲಯ, ಕುಡಿಯುವ ನೀರು, ಆಹಾರ ಮಳಿಗೆಯಂತಹ ಕನಿಷ್ಠ ಸೌಕರ್ಯಗಳೂ ಇರಲಿಲ್ಲ. ಅಷ್ಟಾಗಿಯೂ ತಮ್ಮ ಸರದಿ ತಪ್ಪುತ್ತದೆ ಎಂಬ ಕಾರಣಕ್ಕೆ ಜನ ಸಾಲಿನಿಂದ ಕದಲುತ್ತಿರಲಿಲ್ಲ” ಎಂದು ಕೌಶಿಕ್ ಬರೆದಿದ್ದಾರೆ.

“ಕ್ಯಾಮರಾ ಸಿಬ್ಬಂದಿ ತಮಗೆ ಇಷ್ಟಬಂದವರನ್ನು ಕರೆದು ಬೇಕಾಬಿಟ್ಟಿ ಪರೀಕ್ಷೆ ನಡೆಸುತ್ತಾರೆ. ಕೆಲವರು ಮೊದಲೇ ಧ್ವನಿಪರೀಕ್ಷೆಯಾಗಲಿ ಎಂದು ಲಂಚ ನೀಡುವವರೂ ಇದ್ದಾರೆ. ರಾತ್ರಿ 8ರವರೆಗೂ ಆಡಿಶನ್ ನಡೆಯಲೇ ಇಲ್ಲ. ಕೆಲವರು ಆಕ್ರೋಶಭರಿತರಾಗಿ ತೀರ್ಪುಗಾರರು ಎಲ್ಲಿ ಎಂದು ಏರುಧ್ವನಿಯಲ್ಲಿ ಕೇಳುತ್ತಿದ್ದರು. ಒಬ್ಬನಿಗೆ ಕ್ಯಾಮೆರಾ ಸಿಬ್ಬಂದಿ ಎಲ್ಲರ ಸ್ಪರ್ಧಾಕಾಂಕ್ಷಿಗಳ ಮುಂದೆಯೇ ಥಳಿಸಿದರು” ಎಂದು ಕೌಶಿಕ್ ಆರೋಪಿಸಿದ್ದಾರೆ.

ಸಾಧನ ಸಲಕರಣೆಗಳನ್ನು ವ್ಯವಸ್ಥೆ ಮಾಡಲು ಬಂದ ಕೂಲಿಗಳ ಮೇಲೂ ದೌರ್ಜನ್ಯ ಎಸಗಲಾಗುತ್ತದೆ. ಟಿವಿ ಚಾನಲ್‍ಗಳು ತಮ್ಮ ಟಿಆರ್‍ಪಿಗಾಗಿ ನಡೆಸುವ ಇಂಥ ಕಸರತ್ತುಗಳು ನಿಜಕ್ಕೂ ಪ್ರತಿಭೆಗಳನ್ನು ಹತ್ತಿಕ್ಕುವ, ಜನರನ್ನು ಅಣಕಿಸುವ ಶೋಗಳು ಎಂದು ಕೌಶಿಕ್ ತಮ್ಮ ಪೋಸ್ಟ್ ನಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News