ಇಂದಿರಾ ಗಾಂಧಿ ಪಾತ್ರದಲ್ಲಿ ವಿದ್ಯಾ ಬಾಲನ್

Update: 2018-08-25 11:10 GMT

ವಿದ್ಯಾ ಬಾಲನ್ ತಾನೋರ್ವ ಪ್ರತಿಭಾವಂತ ನಟಿ ಎಂಬುದನ್ನು ಡರ್ಟಿ ಪಿಕ್ಚರ್ಸ್, ಕಹಾನಿ, ಮೆರಿ ಸುಲು ಮುಂತಾದ ಸಿನೆಮಾಗಳಲ್ಲಿ ಸಾಬೀತು ಪಡಿಸಿದ್ದಾರೆ. ಇದೀಗ ವೆಬ್ ಸಿರೀಸ್ ಒಂದರಲ್ಲಿ ವಿದ್ಯಾ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಪಾತ್ರ ಮಾಡಲು ಮುಂದಾಗಿದ್ದಾರೆ.

ಸಾಗರಿಕಾ ಘೋಷ್ ಬರೆದಿರುವ ‘ಇಂದಿರಾ: ಭಾರತದ ಅತ್ಯಂತ ಪ್ರಬಲ ಪ್ರಧಾನ ಮಂತ್ರಿ’ ಎಂಬ ಪುಸ್ತಕವನ್ನಾಧರಿಸಿ ಈ ವೆಬ್ ಸರಣಿಯನ್ನು ನಿರ್ಮಿಸಲಾಗುತ್ತಿದೆ. ಆರಂಭದಲ್ಲಿ ಇದನ್ನು ಸಿನೆಮಾ ಮಾಡಬೇಕು ಎಂಬ ಯೋಚನೆಯಿದ್ದರೂ ನಂತರ ನಿರ್ಮಾಪಕರು ವೆಬ್ ಸರಣಿ ಮಾಡಲು ಮುಂದಾಗಿದ್ದಾರೆ. ಈ ಪುಸ್ತಕದಲ್ಲಿ ಸಿನೆಮಾ ಮಾಡಲು ಆಗದಷ್ಟು ವಸ್ತುಗಳಿವೆ. ಹಾಗಾಗಿ ನಾವು ಅದನ್ನು ವೆಬ್ ಸರಣಿ ಮಾಡುವ ನಿರ್ಧಾರಕ್ಕೆ ಬಂದೆವು. ಅದರ ಎಷ್ಟು ಸರಣಿಗಳು ಬರಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ವಿದ್ಯಾ ತಿಳಿಸಿದ್ದಾರೆ. ಚಿತ್ರ ನಿರ್ಮಾಪಕ ರೋನಿ ಸ್ಕ್ರೂವಾಲಾ ಈ ವೆಬ್ ಸರಣಿಯಲ್ಲಿ ಹಣ ಹೂಡುತ್ತಿದ್ದಾರೆ. ಅಷ್ಟಕ್ಕೂ ಇಂದಿರಾ ಗಾಂಧಿ ಬಗ್ಗೆ ಚಿತ್ರ ತಯಾರಿಸಲು ಗಾಂಧಿ ಕುಟುಂಬದ ಅನುಮತಿಯ ಅಗತ್ಯವಿಲ್ಲವೇ ಎಂದು ಕೇಳಿದರೆ, ಇಲ್ಲ, ಯಾಕೆಂದರೆ ನಮಗೆ ಈಗಾಗಲೇ ಆ ಪುಸ್ತಕದ ಹಕ್ಕು ದೊರೆತಿದೆ ಎಂದು ವಿದ್ಯಾ ಹೇಳುತ್ತಾರೆ. ಇಂದಿರಾ ಗಾಂಧಿ ಬಗ್ಗೆ ಜನರ ಮನಸ್ಸಿನಲ್ಲಿರುವ ಪರಿಕಲ್ಪನೆಗೆ ವಿದ್ಯಾ ಬಾಲನ್ ಯಾವ ರೀತಿ ಜೀವ ತುಂಬುತ್ತಾರೆ ಎಂಬುದನ್ನು ವೆಬ್ ಸರಣಿ ಆರಂಭವಾದ ನಂತರವೇ ತಿಳಿಯಬೇಕಷ್ಟೇ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News