ಒಂದಲ್ಲ ಎರಡಲ್ಲ, ನೂರಾರು ಸತ್ಯ ಸಂಗತಿಗಳು!

Update: 2018-08-25 18:38 GMT

ಬಾನು ಎಂಬ ದನದ ಜೊತೆಗೆ ಸದಾ ಆಟವಾಡುತ್ತಾ ಕಾಲ ಕಳೆಯುವ ಸಮೀರ ಎಂಬ ಹುಡುಗನೊಬ್ಬ ಹುಲಿಯಂಥ ಮನುಷ್ಯರ ನಡುವೆ ಹೇಗೆ ಕಳೆದು ಹೋಗುತ್ತಾನೆ ಮತ್ತು ಹೇಗೆ ಹುಲಿಗಳನ್ನು ಕೂಡ ಹಸುಗಳಂತೆ ಬದಲಿಸಿ ಮರಳುತ್ತಾನೆ ಎನ್ನುವುದೇ ಚಿತ್ರದ ಒಂದೆಳೆ ಕತೆ. ಹಾಗೆಂದ ಮಾತ್ರಕ್ಕೆ ಇದು ಪುಣ್ಯಕೋಟಿಯ ಡ್ರಾಮಾ ಅಲ್ಲ. ಪ್ರಸ್ತುತ ಸಂದರ್ಭದ ನೈಜವಾದ ಚಿತ್ರಣ.

 ಚಿತ್ರದಲ್ಲಿ ಸಮೀರ ಮುಸ್ಲಿಂ ಸಮುದಾಯದ ಹುಡುಗ. ಆ ಕುಟುಂಬದ ಮಂದಿ ದನ ಸಾಕುವುದರಲ್ಲಿ ಎಷ್ಟೊಂದು ಆತ್ಮೀಯತೆ ಹೊಂದಿದ್ದಾರೆ ಎನ್ನುವುದನ್ನು ಚಿತ್ರ ಮನದಟ್ಟು ಮಾಡಿಸುತ್ತಾ ಹೋಗುತ್ತದೆ. ಸಮೀರನ ಕುಟುಂಬದೊಂದಿಗೆ ಆತ್ಮೀಯತೆ ಹೊಂದಿರುವ ರಾಜಣ್ಣ, ಈ ಘಟನೆಗೆ ಸ್ಪಂದಿಸುವ ರೀತಿ ಸೌಹಾರ್ದದ ಪ್ರತೀಕ. ಸಾಮಾನ್ಯವಾಗಿ ನೈಜ ಘಟನೆಯೊಂದನ್ನು ಚಿತ್ರವಾಗಿಸುವಾಗ ಅದಕ್ಕೆ ಸಾಕಷ್ಟು ಬಣ್ಣಗಳನ್ನು ಸೇರಿಸಲಾಗುತ್ತದೆ. ಆದರೆ ಒಂದೆರಡು ಘಟನೆಗಳನ್ನು ಇಟ್ಟುಕೊಂಡೇ ಸಹಜ ಮನರಂಜನಾ ಚಿತ್ರ ಮಾಡಿದ್ದಾರೆ ಸತ್ಯ ಪ್ರಕಾಶ್. ಇದು ಅವರಿಗೆ ಹೊಸತೇನೂ ಅಲ್ಲ. ಈ ಹಿಂದೆ ‘ರಾಮಾ ರಾಮಾ ರೇ’ ಚಿತ್ರದ ಮೂಲಕ ಇಂಥದೇ ಪ್ರಯೋಗ ಮಾಡಿ ಗೆದ್ದಿದ್ದರು. ಅಲ್ಲಿನಂತೆ ಇಲ್ಲಿಯೂ ಬೀದಿಗಳಲ್ಲೇ ಹೆಚ್ಚು ಕತೆಗಳು ನಡೆಯುತ್ತವೆ ಎನ್ನುವುದನ್ನು ಬಿಟ್ಟರೆ ಬೇರೆ ಯಾವುದೇ ಹೋಲಿಕೆಗಳಿಲ್ಲ.

ನ್ಯಾಯದ ಪರವಾಗಿ ಕೂಗೆತ್ತುವ ಚಿತ್ರಗಳಲ್ಲಿ ಅಪರಾಧದ ವಿಜೃಂಭಣೆ ಸಾಮಾನ್ಯ. ಆದರೆ ಅಪರಾಧದತ್ತ ಹೆಜ್ಜೆ ಹಾಕುವವರನ್ನು ಹಾಸ್ಯಾತ್ಮಕವಾಗಿ ತೋರಿಸುತ್ತಾ, ಸೆಂಟಿಮೆಂಟ್ ವಿಚಾರದಲ್ಲಿ ಅವರು ಶರಣಾಗುವ ದೃಶ್ಯಗಳನ್ನು ಆಪ್ತವಾಗುವಂತೆ ಸೆರೆ ಹಿಡಿಯುವ ಕಲೆ ನಿರ್ದೇಶಕರಿಗೆ ಸಿದ್ದಿಸಿದೆ. ಹಾಗಾಗಿಯೇ ಚಿತ್ರದಲ್ಲಿ ತೊಂಬತ್ತು ಪರ್ಸೆಂಟ್‌ನಷ್ಟು ಹೊಸಮುಖದ ಪ್ರತಿಭೆಗಳಿದ್ದರೂ ಚಿತ್ರ ಕೊನೆಯಾಗುವ ಹೊತ್ತಲ್ಲಿ ಎಲ್ಲರೂ ಮನಸ್ಸಿಗೆ ಆತ್ಮೀಯರಾಗಿ ಬಿಡುತ್ತಾರೆ.

ಸಮೀರನಾಗಿ ಮಾ.ರೋಹಿತ್ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಅನಾರೋಗ್ಯದ ಮುದುಕನಾಗಿ ಎಂ.ಕೆ. ಮಠ ಜೀವಿಸಿದ್ದಾರೆ. ಹುಲಿಯಾಗಿ ಸಾಯಿಕೃಷ್ಣ ಕುಡ್ಲ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ವಾಸುಕಿ ವೈಭವ್ ಸಂಗೀತದ ಹಾಡು ಸಿ. ಅಶ್ವಥ್ ಹಾಕಿಕೊಟ್ಟ ಮಾದರಿಯನ್ನು ನೆನಪಿಸುತ್ತದೆ. ಸಂದರ್ಭಾನುಸಾರವಾಗಿ ಸಾಗುವ ಸಹಜ ಮಾತುಗಳಲ್ಲೇ ಸೃಷ್ಟಿಯಾದಂಥ ಹಾಸ್ಯ ಸಂಭಾಷಣೆಗಳು ಪ್ರೇಕ್ಷಕರಿಗೆ ತಾಜಾ ಲವಲವಿಕೆ ನೀಡುತ್ತವೆ.

ಥಿಯೇಟರ್‌ನಿಂದ ಹೊರಗೆ ಬಂದ ಮೇಲೆಯೂ ‘ಮೆನಿ ಮೆನಿ ರಿಟರ್ನ್ ಆಫ್ ದಿ ಡೇ’ ಎಂಬ ಸಂಭಾಷಣೆ ನೆನಪಾಗಿ ನಗು ಮೂಡಿಸುತ್ತದೆ. ಬಾನುವಿನ ಹುಡುಕಾಟ ತುಸು ಹೆಚ್ಚೇ ಅನಿಸಿದರೂ ಕೂಡ ಹುಡುಕುತ್ತಾ ನಮ್ಮದೇ ಮನದೊಳಗಿನ ಹುಡುಕಾಟಕ್ಕೆ ನಾಂದಿಯಾಗುವ ಕಾರಣ ಅದನ್ನು ಕ್ಷಮಿಸಬಹುದು. ಚಿತ್ರದಲ್ಲಿ ಹೇಳುವಂತೆ ಕಳೆದುಕೊಳ್ಳುವುದರ ನೋವು ಕಳೆದುಕೊಂಡವರಿಗಷ್ಟೇ ಗೊತ್ತು. ಹಾಗಾಗಿ ಕನ್ನಡ ಚಿತ್ರಪ್ರೇಮಿಗಳು ಇಂಥದೊಂದು ಚಿತ್ರವನ್ನು ನೋಡುವ ಅವಕಾಶ ಕಳೆದುಕೊಳ್ಳಬಾರದು.

ಕಲಾವಿದರು: ಮಾ. ರೋಹಿತ್, ನಾಗಭೂಷಣ್, ಸಾಯಿಕೃಷ್ಣ ಕುಡ್ಲ, ಎಂ.ಕೆ. ಮಠ ಮತ್ತಿತರರು
ನಿರ್ದೇಶಕ: ಸತ್ಯ ಪ್ರಕಾಶ್
ನಿರ್ಮಾಪಕಿ: ಸ್ಮಿತಾ ಉಮಾಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News