ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಸ್ಟಾಲಿನ್ ನಾಮಪತ್ರ ಸಲ್ಲಿಕೆ

Update: 2018-08-26 16:19 GMT

ಚೆನ್ನೈ,ಆ.26: ಪಕ್ಷದ ಅಧ್ಯಕ್ಷ ಹುದ್ದೆಗೇರಲು ಸಜ್ಜಾಗಿರುವ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ರವಿವಾರ ಇಲ್ಲಿಯ ಪಕ್ಷದ ಕೇಂದ್ರಕಚೇರಿಯಲ್ಲಿ ಹುದ್ದೆಗೆ ತನ್ನ ನಾಮಪತ್ರ ಸಲ್ಲಿಸಿದರು. ಪಕ್ಷದ ಮುಖ್ಯಸ್ಥರಾಗಿದ್ದ ಅವರ ತಂದೆ ಎಂ.ಕೆ.ಕರುಣಾನಿಧಿಯವರ ನಿಧನದಿಂದಾಗಿ ಈ ಹುದ್ದೆ ತೆರವಾಗಿದೆ.

 ಹಿರಿಯ ನಾಯಕ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ದುರೈಮುರುಗನ್ ಅವರು ಖಜಾಂಚಿ ಹುದ್ದೆಗೆ ನಾಮಪತ್ರ ಸಲ್ಲಿಸಿದರು. ಈವರೆಗೆ ಈ ಹುದ್ದೆಯನ್ನು ಸ್ಟಾಲಿನ್ ನಿರ್ವಹಿಸುತ್ತಿದ್ದರು.

ಆ.28ರಂದು ನಡೆಯಲಿರುವ ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಈ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.

ಕಾರ್ಯಕರ್ತರ ಭರ್ಜರಿ ಸ್ವಾಗತದ ನಡುವೆ ಪಕ್ಷದ ಕಚೇರಿಗೆ ಆಗಮಿಸಿದ ಸ್ಟಾಲಿನ್ (65)ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್.ಭಾರತಿ ಅವರಿಗೆ ತನ್ನ ನಾಮತ್ರವನ್ನು ಸಲ್ಲಿಸಿದರು. ಎಲ್ಲ 65 ಡಿಎಂಕೆ ಜಿಲ್ಲಾ ಕಾರ್ಯದರ್ಶಿಗಳು ಅಧ್ಯಕ್ಷ ಹುದ್ದೆಗೆ ಸ್ಟಾಲಿನ್ ಮತ್ತು ಖಜಾಂಚಿ ಹುದ್ದೆಗೆ ದುರೈಮುರುಗನ್ ಅವರ ಹೆಸರುಗಳನ್ನು ಸೂಚಿಸಿದ್ದಾರೆ.

2014ರಲ್ಲಿ ಡಿಎಂಕೆಯಿಂದ ಉಚ್ಚಾಟಿತರಾಗಿರುವ ಹಿರಿಯ ಸೋದರ ಎಂ.ಕೆ.ಅಳಗಿರಿ ಅವರು ಸ್ಟಾಲಿನ್ ನಾಯಕತ್ವವನ್ನು ಪ್ರಶಿಸಿದ್ದು,ಸೆ.5ರಂದು ಚೆನ್ನೈನಲ್ಲಿ ಕರುಣಾನಿಧಿಯವರ ಸಮಾಧಿಯವರೆಗೆ ಶಾಂತಿ ರ್ಯಾಲಿಯನ್ನು ನಡೆಸುವುದಾಗಿ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News