ಜಂತುಹುಳ ಬಾಧೆಯ ಬಗ್ಗೆ ನಿಮಗೆ ಗೊತ್ತಿರಬೇಕಾದದ್ದು ಇಲ್ಲಿದೆ

Update: 2018-08-27 10:48 GMT

ಜನರನ್ನು, ಹೆಚ್ಚಾಗಿ ಮಕ್ಕಳನ್ನು ಕಾಡುವ ಅಸ್ಕರಿಯಾಸಿಸ್ ಅಥವಾ ಜಂತುಹುಳ ಬಾಧೆಗೆ ಪರಾವಲಂಬಿ ಜೀವಿಗಳು ಕಾರಣವಾಗಿವೆ. ಕೆಲವು ಪರಾವಲಂಬಿ ಜೀವಿಗಳು ನಿರುಪದ್ರವಿಯಾಗಿದ್ದು, ಯಾವುದೇ ಕಾಯಿಲೆಯನ್ನುಂಟು ಮಾಡುವುದಿಲ್ಲ. ಇತರ ಪರಾವಲಂಬಿ ಜೀವಿಗಳು ಸಸ್ಯಗಳಲ್ಲಿ ಮತ್ತು ಪ್ರಾಣಿಗಳಲ್ಲಿ ಕಾಯಿಲೆಗಳಿಗೆ ಕಾರಣವಾಗುತ್ತವೆ.

ಪರಾವಲಂಬಿ ಜೀವಿಗಳನ್ನು ಎಂಡೊಪ್ಯಾರಾಸೈಟ್ಸ್ ಮತ್ತು ಎಕ್ಟೊಪ್ಯಾರಾಸೈಟ್ಸ್ ಎಂದು ವರ್ಗೀಕರಿಸಲಾಗಿದೆ. ಮೊದಲನೆಯದು ತಮ್ಮ ಆತಿಥೇಯ ಜೀವಿಯ ಶರೀರದೊಳಗೆ ವಾಸವಿದ್ದರೆ, ಎರಡನೆಯ ವರ್ಗದ ಪರಾವಲಂಬಿಗಳು ಅದರ ಶರೀರದ ಮೇಲೆ ಮೊಕ್ಕಾಂ ಹೂಡಿರುತ್ತವೆ.

ವೈಜ್ಞಾನಿಕವಾಗಿ ಅಸ್ಕರಿಯಾಸಿಸ್ ಲುಂಬ್ರಿಕಾಯ್ಡ್ಸಿ ಎಂದು ಕರೆಯಲಾಗುವ ದೊಡ್ಡಗಾತ್ರದ ರೌಂಡ್‌ವರ್ಮ್ ಅಥವಾ ದುಂಡುಹುಳ ಅಸ್ಕರಿಯಾಸಿಸ್ ಸೋಂಕಿಗೆ ಕಾರಣವಾಗುತ್ತದೆ. ವಯಸ್ಕ ದುಂಡುಹುಳುಗಳು 12 ಇಂಚ್‌ಗಳವರೆಗೂ ಬೆಳೆಯುತ್ತವೆ ಮತ್ತು ಜಠರಗರುಳ ನಾಳ,ಶ್ವಾಸಕೋಶದಂತಹ ಶರೀರದ ಅಂಗಗಳನ್ನು ತಮ್ಮ ಆವಾಸಸ್ಥಾನವನ್ನಾಗಿ ಮಾಡಿಕೊಂಡಿರುತ್ತವೆ. ಈ ಪರಾವಲಂಬಿಗಳು ತಮ್ಮ ಸಂಪೂರ್ಣ ಜೀವನಚಕ್ರವನ್ನು ಮಾನವನ ಶರೀರದಲ್ಲಿಯೇ ಕಳೆಯುತ್ತವೆ.

► ಲಕ್ಷಣಗಳು

ದುಂಡುಹುಳುಗಳು ಶರೀರದಲ್ಲಿ ಇರುವುದು ಸ್ಪಷ್ಟವಾಗುವವರೆಗೂ ಅಸ್ಕರಿಯಾಸಿಸ್‌ನ ಲಕ್ಷಣಗಳು ಸಾಮಾನ್ಯವಾಗಿ ಗಮನಕ್ಕೆ ಬರುವುದಿಲ್ಲ. ಹೊಟ್ಟೆನೋವು ಮತ್ತು ಕೆಮ್ಮು ಅಸ್ಕರಿಯಾಸಿಸ್‌ನ ಎರಡು ಪ್ರಮುಖ ಲಕ್ಷಣಗಳಾಗಿವೆ. ಕೆಮ್ಮು, ಉಸಿರಾಟದಲ್ಲಿ ತೊಂದರೆ, ಶ್ಲೇಷ್ಮದಲ್ಲಿ ರಕ್ತ, ಜ್ವರ ಮತ್ತು ಎದೆನೋವು ಇವು ಜಂತುಗಳು ಶ್ವಾಸಕೋಶದಲ್ಲಿದ್ದಾಗ ಕಂಡುಬರುವ ಲಕ್ಷಣಗಳಾಗಿವೆ.

ಜಂತುಗಳು ಕರುಳಿನಲ್ಲಿ ನೆಲೆಸಿದ್ದಾಗ ವಾಕರಿಕೆ ಮತ್ತು ವಾಂತಿ,ಅತಿಸಾರ ಮತ್ತು ಅನಿಯಮಿತ ಮಲವಿಸರ್ಜನೆ,ಹಸಿವು ಕ್ಷೀಣಗೊಳ್ಳುವಿಕೆ,ಮಲದಲ್ಲಿ ಜಂತುಹುಳಗಳ ಗೋಚರ,ಹೊಟ್ಟೆನೋವು,ಪೌಷ್ಟಿಕಾಂಶಗಳ ಹೀರುವಿಕೆ ವ್ಯತ್ಯಯಗೊಂಡು ಮಕ್ಕಳಲ್ಲಿ ಬೆಳವಣಿಗೆಗೆ ಅಡ್ಡಿ,ಕರುಳಿನಲ್ಲಿ ತಡೆಯಿಂದಾಗಿ ವಾಂತಿ ಮತ್ತು ತೀವ್ರ ನೋವು,ಹೊಟ್ಟೆಯಲ್ಲಿ ಬಿಗಿತ,ಹೊಟ್ಟೆ ಊದುವಿಕೆ ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

► ಕಾರಣಗಳು

 ಅನೈರ್ಮಲ್ಯ ಮತ್ತು ಈ ಹುಳಗಳ ಮೊಟ್ಟೆಗಳಿಂದ ಕಲುಷಿತಗೊಂಡಿರುವ ಆಹಾರ ಹಾಗೂ ಪಾನೀಯಗಳ ಸೇವನೆ ಜಂತುಗಳ ಸೋಂಕುಂಟಾಗಲು ಮುಖ್ಯ ಕಾರಣಗಳಾಗಿವೆ. ಮಕ್ಕಳು ಕಲುಷಿತ ಮಣ್ಣಿನ ಸಂಪರ್ಕದ ಮೂಲಕ ಈ ಸೋಂಕಿಗೊಳಗಾಗುತ್ತಾರೆ. ಒಮ್ಮೆ ಶರೀರವನ್ನು ಪ್ರವೇಶಿಸಿದ ಬಳಿಕ ಈ ಜಂತುಗಳು ಕರುಳಿನಲ್ಲಿ ಸಂತಾನೋತ್ಪತ್ತಿಯನ್ನು ಮಾಡುತ್ತವೆ ಮತ್ತು ರಕ್ತದೊಂದಿಗೆ ಶ್ವಾಸಕೋಶಗಳಿಗೆ ಸಾಗುತ್ತವೆ. ಅಲ್ಲಿಂದ ಈ ಹುಳಗಳು ಮತ್ತೆ ಕರುಳಿನಲ್ಲಿ ಸೇರಿಕೊಂಡು ಅಲ್ಲಿ ಪುನಃ ಸಂತಾನೋತ್ಪತ್ತಿ ಮಾಡುತ್ತವೆ. ಇದು ಮಾನವ ಶರೀರದಲ್ಲಿ ಅವುಗಳ ಜೀವನಚಕ್ರವಾಗಿದೆ.

► ರೋಗನಿರ್ಧಾರ

ರೋಗಿಗಳ ಮಲದ ಸ್ಯಾಂಪಲ್‌ನ್ನು ಪರೀಕ್ಷಿಸುವ ಮೂಲಕ ವೈದ್ಯರು ರೋಗನಿರ್ಧಾರವನು ್ನಮಾಡುತ್ತಾರೆ. ಶರೀರದಲ್ಲಿ ಪರಾವಲಂಬಿಗಳ ಬೆಳವಣಿಗೆಯನ್ನು ಪತ್ತೆ ಹಚ್ಚಲು ಸಿಟಿ ಸ್ಕಾನ್,ಕ್ಷ-ಕಿರಣ,ಅಲ್ಟ್ರಾ ಸೌಂಡ್‌ನಂತಹ ತಪಾಸಣೆಗಳನ್ನೂ ವೈದ್ಯರು ಕೈಗೊಳ್ಳಬಹುದು.

► ಚಿಕಿತ್ಸೆ

ಈ ಸೋಂಕಿನ ಚಿಕಿತ್ಸೆಗಾಗಿ ವೈದ್ಯರು ರೋಗಿಗಳಿಗೆ ಸಾಮಾನ್ಯವಾಗಿ ಆ್ಯಂಟಿಪ್ಯಾರಾಸಿಟಿಕ್ ಔಷಧಿಗಳನ್ನು ಶಿಫಾರಸು ಮಾಡುತ್ತಾರೆ. ಸೋಂಕು ಮುಂದುವರಿದ ಹಂತದಲ್ಲಿದ್ದರೆ ಕರುಳಿನಲ್ಲಿ ತಡೆಗಳನ್ನುಂಟು ಮಾಡಿರುವ ಜಂತುಗಳನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು.

ಔಷಧಿ ಸೇವನೆಯನ್ನು ಪ್ರಾರಂಭಿಸಿದ ಬಳಿಕ ಸೋಂಕಿನ ಲಕ್ಷಣಗಳು ಕ್ರಮೇಣ ಮಾಯವಾಗಬಹುದು. ಆದರೆ ಜಂತುಗಳು ಇನ್ನೂ ಜೀವಂತವಿರಬಹುದು ಮತ್ತು ಇದು ಸೋಂಕು ಅತಿಯಾಗಿದ್ದರೆ ಕರುಳಿನಲ್ಲಿ ತಡೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

► ತಡೆ ಹೇಗೆ?

ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರಿಂದ ಅಸ್ಕರಿಯಾಸಿಸ್ ಸೋಂಕಿನಿಂದ ದೂರವಿರಬಹುದು. ಊಟದ ಮುನ್ನ ಸಾಬೂನಿನಿಂದ ಚೆನ್ನಾಗಿ ಕೈತೊಳೆದುಕೊಳ್ಳುವುದು ಮತ್ತು ಸ್ವಚ್ಛವಾದ ಸ್ಥಳದಲ್ಲಿ ಆಹಾರ ಸೇವನೆ ಮುಖ್ಯವಾಗಿದೆ. ಹಣ್ಣುಗಳು ಮತ್ತು ತರಕಾರಿಗಳನ್ನು ಬಳಸುವ ಮುನ್ನ ಸ್ವಚ್ಛವಾದ ನೀರಿನಿಂದ ತೊಳೆಯುವುದು ಅಗತ್ಯ ಎನ್ನುವುದನ್ನು ಮರೆಯಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News