ಕೆಟ್ಟಸಾಲಗಳ ವಿರುದ್ಧ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ವಿಫಲ: ಆರ್‌ಬಿಐಗೆ ಸಂಸದೀಯ ಸಮಿತಿಯ ತರಾಟೆ

Update: 2018-08-27 15:28 GMT

ಹೊಸದಿಲ್ಲಿ,ಆ.27: 2015,ಡಿಸೆಂಬರ್‌ನಲ್ಲಿ ಕೈಗೊಳ್ಳಲಾಗಿದ್ದ ಆಸ್ತಿ ಗುಣಮಟ್ಟ ಪರಾಮರ್ಶೆ(ಎಕ್ಯೂಆರ್)ಗೆ ಮೊದಲು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೆಟ್ಟಸಾಲಗಳನ್ನು ತಡೆಯುವಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲಗೊಂಡಿದ್ದಕ್ಕಾಗಿ ಆರ್‌ಬಿಐ ಅನ್ನು ಸಂಸತ್ತಿನ ಹಣಕಾಸು ಕುರಿತು ಸ್ಥಾಯಿ ಸಮಿತಿಯು ಸೋಮವಾರ ತರಾಟೆಗೆತ್ತಿಕೊಂಡಿದೆ.

ಎಕ್ಯೂಆರ್‌ಗೆ ಮುನ್ನ ಒತ್ತಡದಲ್ಲಿರುವ ಸಾಲಗಳ ಕುರಿತ ಮುನ್ಸೂಚನೆಗಳನ್ನು ಏಕೆ ಗ್ರಹಿಸಲಾಗಿರಲಿಲ್ಲ ಎನ್ನುವುದನ್ನು ಆರ್‌ಬಿಐ ಪತ್ತೆ ಹಚ್ಚುವುದು ಅಗತ್ಯವಾಗಿದೆ ಎಂದು ಮೂಲಗಳು ತಿಳಿಸಿದವು.

ಹಿರಿಯ ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿಯು ಸೋಮವಾರ ತನ್ನ ವರದಿಗೆ ಅಂತಿಮ ಮುದ್ರೆಯನ್ನು ಒತ್ತಿದ್ದು,ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅದನ್ನು ಮಂಡಿಸುವ ಸಾಧ್ಯತೆಯಿದೆ.

 ಆರ್‌ಬಿಐನ ನವೀಕರಣ ಯೋಜನೆಗಳ ಮೂಲಕ ಒತ್ತಡದಲ್ಲಿರುವ ಸಾಲಗಳು ಸದಾ ಹಸಿರಾಗಿರುವ ಹಿಂದಿನ ಕಾರಣಗಳನ್ನು ತಿಳಿಯಲು ಸಮಿತಿಯು ಬಯಸಿದೆ.

ಬ್ಯಾಂಕುಗಳ ಅನುತ್ಪಾದಕ ಆಸ್ತಿಗಳು(ಎನ್‌ಪಿಎ)ಅಥವಾ ಕೆಟ್ಟಸಾಲಗಳು ಹೆಚ್ಚುತ್ತಲೇ ಇದ್ದು,ಇದೊಂದು ಪರಂಪರೆಯಾಗಿಬಿಟ್ಟಿದೆ ಮತ್ತು ಆರ್‌ಬಿಐ ಈ ನಿಟ್ಟಿನಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಿಲ್ಲ ಎಂದು ಮೂಲಗಳು ತಿಳಿಸಿದವು.

ಮಾರ್ಚ್ 2015 ಮತ್ತು ಮಾರ್ಚ್ 2018ರ ನಡುವಿನ ಅವಧಿಯಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿಯ ಎನ್‌ಪಿಎ ಪ್ರಮಾಣದಲ್ಲಿ ಸುಮಾರು 6.2 ಕೋ.ರೂ.ಗಳಷ್ಟು ಏರಿಕೆಯಾಗಿದೆ ಮತ್ತು ಇದು 5.1 ಕೋ.ರೂ.ಗಳಷ್ಟು ಪರ್ಯಾಪ್ತ ಒದಗಣೆಗೆ ಕಾರಣವಾಗಿದೆ ಎಂದು ವರದಿಯನ್ನು ಉಲ್ಲೇಖಿಸಿ ಮೂಲಗಳು ತಿಳಿಸಿದವು.

 2017 ಡಿಸೆಂಬರ್‌ಗೆ ಇದ್ದಂತೆ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾಲ ಮತ್ತು ಜಿಡಿಪಿಯ ಅನುಪಾತ ಕುಸಿದಿರುವುದನ್ನೂ ಸಮಿತಿಯು ತನ್ನ ವರದಿಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News