ವಿಚಾರಣೆಯ ವ್ಯಾಪ್ತಿಗೆ ಚುನಾವಣಾ ಅಪರಾಧ: ಅರ್ಜಿ ತಿರಸ್ಕರಿಸಿದ ಸುಪ್ರೀಂ

Update: 2018-08-27 15:41 GMT

ಹೊಸದಿಲ್ಲಿ, ಆ.27: ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣೆ ಸಂದರ್ಭದಲ್ಲಿ ನಡೆಸುವ ಅಪರಾಧಗಳನ್ನು ನ್ಯಾಯಾಲಯದ ವಿಚಾರಣೆ ವ್ಯಾಪ್ತಿಗೆ ತರಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಳ್ಳಿಹಾಕಿದೆ.

ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳು ಮತದಾರರಿಗೆ ಲಂಚ ನೀಡುವುದು, ಸುಳ್ಳು ಭರವಸೆ, ಅನಗತ್ಯ ಪ್ರಭಾವ ಬೀರುವುದು ಇತ್ಯಾದಿ ಅಪರಾಧಗಳನ್ನು ನ್ಯಾಯಾಲಯದ ವಿಚಾರಣೆಯ ಪರಿಧಿಯೊಳಗೆ ತಂದು ಕನಿಷ್ಟ ಎರಡು ವರ್ಷದ ಜೈಲುಶಿಕ್ಷೆ ವಿಧಿಸಬೇಕೆಂದು ಕೋರಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ನಿರಾಕರಿಸಿದ ಸುಪ್ರೀಂಕೋರ್ಟ್‌ನ ನ್ಯಾಯಪೀಠ, ಅರ್ಜಿಯನ್ನು ಗಮನಿಸಿ ತಳ್ಳಿಹಾಕಲಾಗಿದೆ ಎಂದು ತಿಳಿಸಿದೆ.

2000ನೇ ಇಸವಿಯ ಬಳಿಕ, ಲೋಕಸಭೆ ಮತ್ತು ರಾಜ್ಯಸಭೆಯ ಚುನಾವಣೆಯ ಹೊರತಾಗಿ ಉಪಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಕೆಲವು ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳ ಪರವಾಗಿ ಲಂಚ ನೀಡಲಾಗುತ್ತಿದೆ. ಈಗಿನ ಕಾನೂನಿನ ಪ್ರಕಾರ ಲಂಚ ನೀಡುವುದನ್ನು ಗುರುತಿಸಲಾಗದ ಅಪರಾಧ ಎಂದು ಪರಿಗಣಿಸಿ ಕನಿಷ್ಟ ಪ್ರಮಾಣದ ಶಿಕ್ಷೆ ಮಾತ್ರ ನೀಡಲಾಗುತ್ತಿದೆ. 2012ರಲ್ಲಿ ಈ ಬಗ್ಗೆ ಗೃಹಸಚಿವಾಲಯಕ್ಕೆ ಪತ್ರ ಬರೆದಿದ್ದ ಚುನಾವಣಾ ಆಯೋಗವು, ಲಂಚ ನೀಡುವುದನ್ನು ಗುರುತಿಸಲಾಗುವ ಅಪರಾಧ ಎಂದು ಪರಿಗಣಿಸಿ, ವಾರಂಟ್‌ನ ಅಗತ್ಯವಿಲ್ಲದೆ ಅಂತವರನ್ನು ಬಂಧಿಸಿ ಕನಿಷ್ಟ ಎರಡು ವರ್ಷ ಜೈಲು ಶಿಕ್ಷೆ ವಿಧಿಸಬೇಕು ಎಂದು ಶಿಫಾರಸು ಮಾಡಿತ್ತು. ಇದಕ್ಕೆ ಉತ್ತರಿಸಿದ್ದ ಗೃಹ ಸಚಿವಾಲಯ ಈ ಕುರಿತ ಪ್ರಕ್ರಿಯೆಗೆ ಚಾಲನೆ ನೀಡಿರುವುದಾಗಿ ತಿಳಿಸಿದೆ. ಆದರೆ ಇದುವರೆಗೂ ಈ ನಿಟ್ಟಿನಲ್ಲಿ ಸರಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News