ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ರೆಡ್‌ಕಾರ್ನರ್ ನೋಟಿಸ್ ಅಗತ್ಯವಿಲ್ಲ: ಸಿಬಿಐ

Update: 2018-08-27 15:43 GMT

ಹೊಸದಿಲ್ಲಿ, ಆ.27: ದೇಶದಿಂದ ಪಲಾಯನ ಮಾಡಿರುವ ಉದ್ಯಮಿ ಮೆಹುಲ್ ಚೋಕ್ಸಿಯನ್ನು ರೆಡ್‌ಕಾರ್ನರ್ ನೋಟಿಸ್ ಇಲ್ಲದೆಯೂ ಹಸ್ತಾಂತರಕ್ಕೆ ಮನವಿ ಸಲ್ಲಿಸಬಹುದು ಎಂದು ವಿದೇಶ ವ್ಯವಹಾರ ಇಲಾಖೆಗೆ ಸಿಬಿಐ ತಿಳಿಸಿದೆ. ವಿದೇಶಕ್ಕೆ ಪರಾರಿಯಾಗುವ ಆರೋಪಿ ತಲೆಮರೆಸಿಕೊಂಡಿದ್ದರೆ ಆಗ ಆತನನ್ನು ಪತ್ತೆಹಚ್ಚಲು ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಲಾಗುತ್ತದೆ. ಆದರೆ ಮೆಹುಲ್ ಚೋಕ್ಸಿ ತನ್ನ ಪೌರತ್ವ ಪಡೆದುಕೊಂಡಿದ್ದಾನೆ ಎಂದು ಆ್ಯಂಟಿಗ ದೇಶ ಈಗಾಗಲೇ ದೃಢಪಡಿಸಿದೆ. ಆತ ಈಗ ಆ್ಯಂಟಿಗ ದೇಶದ ಪಾಸ್‌ಪೋರ್ಟ್ ಹೊಂದಿದ್ದಾನೆ. ಆದ್ದರಿಂದ ಆತನನ್ನು ಪತ್ತೆಹಚ್ಚುವ ಪ್ರಶ್ನೆ ಬರುವುದಿಲ್ಲ ಎಂದು ಸಿಬಿಐ ತಿಳಿಸಿದೆ. ಪಿಎನ್‌ಬಿ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚೋಕ್ಸಿಯನ್ನು ತಾತ್ಕಾಲಿಕವಾಗಿ ಬಂಧನಲ್ಲಿಡುವಂತೆ ಆ್ಯಂಟಿಗ ದೇಶದ ತನಿಖಾ ಸಂಸ್ಥೆಗೆ ಸಿಬಿಐ ಪತ್ರ ಬರೆದಿದೆ. ಇದಕ್ಕೆ ಉತ್ತರಿಸಿರುವ ಆ್ಯಂಟಿಗದ ಅಧಿಕಾರಿಗಳು ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಿದ ಮಾತ್ರಕ್ಕೆ ಚೋಕ್ಸಿ ಅವರ ಚಲನವಲವನ್ನು ನಿಯಂತ್ರಿಸಲು ಸಾಧ್ಯವಾಗದು ಎಂದು ತಿಳಿಸಿದ್ದಾರೆ.

 ಆದ್ದರಿಂದ ಚೋಕ್ಸಿಯ ತಾತ್ಕಾಲಿಕ ಬಂಧನ ಹಾಗೂ ಹಸ್ತಾಂತರ ಪ್ರಕ್ರಿಯೆಗೆ ರೆಡ್‌ಕಾರ್ನರ್ ನೋಟಿಸ್ ಪೂರ್ವಾಪೇಕ್ಷಿತವಲ್ಲ ಎಂದು ಸಿಬಿಐ ಅಧಿಕಾರಿಗಳು ಸಚಿವಾಲಯಕ್ಕೆ ತಿಳಿಸಿದ್ದಾರೆ. ತನ್ನ ವಿರುದ್ಧ ಮಾಡಲಾಗಿರುವ ಆರೋಪಗಳು ರಾಜಕೀಯ ಪ್ರೇರಿತವಾಗಿರುವ ಕಾರಣ ರೆಡ್‌ಕಾರ್ನರ್ ನೋಟಿಸ್ ಜಾರಿ ಮಾಡಬಾರದು ಎಂದು ಚೋಕ್ಸಿ ಇಂಟರ್‌ಪೋಲ್‌ಗೆ ಮನವಿ ಮಾಡಿಕೊಂಡಿದ್ದಾನೆ.

ಭಾರತದ ಜೈಲುಗಳ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದ್ದು ತನ್ನನ್ನು ಇಲ್ಲಿ ಬಂಧಿಸಿಟ್ಟರೆ ತನ್ನ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅಲ್ಲದೆ ತನ್ನ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಮಾಧ್ಯಮಗಳು ವೈಭವೀಕರಿಸಿದ್ದು ಭಾರತದ ನ್ಯಾಯಾಲಯಗಳು ಮಾಧ್ಯಮಗಳ ವರದಿಯ ಪ್ರಭಾವಕ್ಕೆ ಒಳಗಾಗಿ ಸಮರ್ಪಕ ವಿಚಾರಣೆ ನಡೆಸುವ ನಿರೀಕ್ಷೆ ಇಲ್ಲ ಎಂದು ಚೋಕ್ಸಿ ಇಂಟರ್‌ಪೋಲ್‌ಗೆ ಮನವಿ ಮಾಡಿಕೊಂಡಿದ್ದಾನೆ. ಚೋಕ್ಸಿಯ ಅರ್ಜಿಯನ್ನು ಸ್ವೀಕರಿಸಿದ ಇಂಟರ್‌ಪೋಲ್, ಇದಕ್ಕೆ ಸಿಬಿಐನಿಂದ ಪ್ರತಿಕ್ರಿಯೆ ಕೇಳಿತ್ತು. ಇದಕ್ಕೆ ಉತ್ತರಿಸಿದ್ದ ಸಿಬಿಐ, ಚೋಕ್ಸಿಯ ಹೇಳಿಕೆಯನ್ನು ಅಲ್ಲಗಳೆದಿದ್ದು ಆತ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News