ಜನರ ದಾರಿ ತಪ್ಪಿಸುತ್ತಿರುವ ಆದಿತ್ಯನಾಥ್: ಡಾ. ಕಫೀಲ್ ಖಾನ್

Update: 2018-08-27 15:45 GMT

ಲಖ್ನೊ, ಆ.27: 2017ರಲ್ಲಿ ಗೋರಖ್‌ಪುರದ ಸರಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಬಾಬಾ ರಾಘವ ದಾಸ ವೈದ್ಯಕೀಯ ಕಾಲೇಜಿನ ಮಕ್ಕಳತಜ್ಞ ಡಾ. ಕಫೀಲ್ ಖಾನ್ ಆರೋಪಿಸಿದ್ದಾರೆ.

ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿರಲಿಲ್ಲ ಎಂಬ ಮುಖ್ಯಮಂತ್ರಿಯ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಡಾ. ಕಫೀಲ್, ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆ ಸರಿಯಿಲ್ಲ. ತನಗೆ ಬರಬೇಕಾದ ಬಾಕಿಯನ್ನು ಪಾವತಿಸಿದರೆ ಮಾತ್ರ ಆಮ್ಲಜನಕ ಪೂರೈಕೆ ಮಾಡುವುದಾಗಿ ಪೂರೈಕೆದಾರ ಆಸ್ಪತ್ರೆಯ ಆಡಳಿತ ಮಂಡಳಿಗೆ ಪತ್ರ ಬರೆದಿದ್ದ ಎಂದು ಸೋಮವಾರ ಮಾಧ್ಯಮಗಳಿಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.

ಮಕ್ಕಳು ಮಿದುಳು ಜ್ವರದಿಂದ ಸಾವನ್ನಪ್ಪಿದ್ದಾರೆ ಎಂಬ ಮುಖ್ಯಮಂತ್ರಿಗಳ ಹೇಳಿಕೆಯನ್ನೂ ತಳ್ಳಿಹಾಕಿರುವ ಡಾ.ಕಫೀಲ್, ನವಜಾತ ಶಿಶುಗಳಿಗೆ ಮಿದುಳು ಜ್ವರ ಬರುವುದಿಲ್ಲ ಎಂದು ವಾದಿಸಿದ್ದಾರೆ. ಗೋರಖ್‌ಪುರ ಆಸ್ಪತ್ರೆಯಲ್ಲಿ ನಡೆದ ದುರಂತಕ್ಕೆ ಡಾ. ಕಫೀಲ್ ಅವರನ್ನು ತಪ್ಪಿತಸ್ಥರನ್ನಾಗಿಸಿ ಜೈಲಿಗಟ್ಟಲಾಗಿತ್ತು. ಕೆಲವು ದಿನಗಳ ಹಿಂದಷ್ಟೇ ಅವರು ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು.

ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದ ದುರಂತದಲ್ಲಿ 60ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ್ದರು. ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿದ್ದ ಘಟನೆಗೆ ಕಾರಣ ಎಂಬ ಆರೋಪಗಳು ಕೇಳಿಬಂದಿದ್ದವು. ಶನಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಮುಖ್ಯಮಂತ್ರಿ ಆದಿತ್ಯನಾಥ್, ಈ ಘಟನೆ ಆಮ್ಲಜಕನದ ಕೊರತೆಯಿಂದ ಸಂಭವಿಸಿರಲಿಲ್ಲ ಎಂದು ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News