ಪೆಟ್ರೋಲ್, ಡೀಸೆಲ್ ಬೆಲೆ ದಾಖಲೆ ಪ್ರಮಾಣಕ್ಕೆ ಏರಿಕೆ

Update: 2018-08-27 15:45 GMT

ಹೊಸದಿಲ್ಲಿ, ಆ.27: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿತವಾದ ಹಿನ್ನೆಲೆಯಲ್ಲಿ ಸೋಮವಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯಲ್ಲಿ ದಾಖಲೆ ಪ್ರಮಾಣದ ಏರಿಕೆಯಾಗಿದ್ದು, ಡೀಸೆಲ್ ಬೆಲೆ ಲೀಟರ್‌ಗೆ 69.46 ರೂ.ಗೆ, ಪೆಟ್ರೋಲ್ ಬೆಲೆ ರೂ.78ಕ್ಕೆ ತಲುಪಿದೆ.

 ಡೀಸೆಲ್ ಬೆಲೆ ಲೀಟರ್‌ಗೆ 14 ಪೈಸೆ, ಪೆಟ್ರೋಲ್ ಬೆಲೆ ಲೀಟರ್‌ಗೆ 12 ಪೈಸೆ ಏರಿಕೆಯಾಗಿದೆ ಎಂದು ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳ ಪ್ರಕಟಣೆ ತಿಳಿಸಿದೆ. ಇದರೊಂದಿಗೆ ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಟ ಮಟ್ಟಕ್ಕೆ ತಲುಪಿದ್ದು ದಿಲ್ಲಿಯಲ್ಲಿ ಪ್ರತೀ ಲೀಟರ್‌ಗೆ 69.46 ರೂ.ಗೆ, ಮುಂಬೈಯಲ್ಲಿ 73.74 ರೂ.ಗೆ ತಲುಪಿದೆ.ದಿಲ್ಲಿಯಲ್ಲಿ ಮಾರಾಟ ತೆರಿಗೆ ಕಡಿಮೆಯಾಗಿರುವ ಕಾರಣ ಇತರ ಮೆಟ್ರೊಪಾಲಿಟನ್ ನಗರಗಳಿಗಿಂತ ದಿಲ್ಲಿಯಲ್ಲಿ ತೈಲ ಬೆಲೆ ಕಡಿಮೆಯಿರುತ್ತದೆ. ಈ ಹಿಂದೆ ಮೇ ತಿಂಗಳಿನಲ್ಲಿ ದಿಲ್ಲಿಯಲ್ಲಿ 69.31ರೂ.ಗೆ ತಲುಪಿರುವುದು ಇದುವರೆಗಿನ ದಾಖಲೆಯಾಗಿದೆ. ಪೆಟ್ರೋಲ್ ಬೆಲೆ ದಿಲ್ಲಿಯಲ್ಲಿ 77.91 ರೂ, ಮುಂಬೈಯಲ್ಲಿ 85.33 ರೂ.ಗೆ ತಲುಪಿದೆ.

ರೂಪಾಯಿ ಮೌಲ್ಯದಲ್ಲಿ ಕುಸಿತವಾದ ಹಿನ್ನೆಲೆಯಲ್ಲಿ ಆಗಸ್ಟ್ 16ರಿಂದ ತೈಲ ಬೆಲೆಗಳು ಏರುಗತಿಯಲ್ಲಿ ಸಾಗಿದೆ. ಕಳೆದ 12 ದಿನಗಳಲ್ಲಿ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 77 ಪೈಸೆ, ಡೀಸೆಲ್ ಬೆಲೆ 74 ಪೈಸೆ ಹೆಚ್ಚಾಗಿದೆ. ಈ ಹಿಂದೆ ಪ್ರತೀ ತಿಂಗಳ 1ನೇ ಮತ್ತು 15ನೇ ತಾರೀಕಿನಂದು ತೈಲ ಬೆಲೆ ಪರಿಷ್ಕರಣೆ ನಡೆಸುತ್ತಿದ್ದ ಸರಕಾರಿ ಸ್ವಾಮ್ಯದ ಸಂಸ್ಥೆಗಳು, ಕಳೆದ ಜೂನ್‌ನಿಂದ ಪ್ರತೀ ದಿನ ಬೆಲೆ ಪರಿಷ್ಕರಣೆ ಮಾಡುತ್ತಿವೆ. 2014ರ ನವೆಂಬರ್‌ನಿಂದ 2016ರ ಜನವರಿವರೆಗಿನ ಅವಧಿಯಲ್ಲಿ ಕೇಂದ್ರ ಸರಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 9 ಬಾರಿ ಏರಿಸಿದ್ದು ಪ್ರತೀ ಲೀಟರ್ ಪೆಟ್ರೋಲ್ ಮೇಲೆ 11.77 ರೂ, ಡೀಸೆಲ್ ಮೇಲೆ 13.47 ರೂ. ಅಬಕಾರಿ ಸುಂಕ ವಿಧಿಸಲಾಗುತ್ತಿದೆ.

ಕೇವಲ ಒಮ್ಮೆ ಮಾತ್ರ ತೆರಿಗೆ ಕಡಿತಗೊಳಿಸಲಾಗಿದೆ. ಸುಂಕ ಏರಿಕೆಯ ಕಾರಣ ತೈಲೋತ್ಪನ್ನಗಳ ಮೇಲಿನ ಸುಂಕ ಸಂಗ್ರಹ ಕಳೆದ ನಾಲ್ಕು ವರ್ಷದಲ್ಲಿ ದ್ವಿಗುಣವಾಗಿದ್ದು 2014-15ರಲ್ಲಿ 99,184 ಕೋಟಿ ರೂ. ಇದ್ದ ತೆರಿಗೆ ಸಂಗ್ರಹ 2017-18ರಲ್ಲಿ 1,84,091 ರೂ.ಗೆ ತಲುಪಿದೆ. ರಾಜ್ಯಗಳ ವ್ಯಾಟ್ ಸಂಗ್ರಹದಲ್ಲೂ ಏರಿಕೆಯಾಗಿದ್ದು 2014-15ರಲ್ಲಿ 1,37,157 ಕೋಟಿ ರೂ. ಸಂಗ್ರವವಾಗಿದ್ದರೆ 2017-18ರಲ್ಲಿ 1,84,091 ಕೋಟಿ ರೂ.ಗೆ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News