ಐಪಿಎಸ್ ಅಧಿಕಾರಿ ಆದಿತ್ಯನಾಥ್ ಗೆ ಬರೆದ ‘ವಿವಾದಾತ್ಮಕ ಪತ್ರ’ ಸೋರಿಕೆ

Update: 2018-08-27 15:48 GMT

ಹೊಸದಿಲ್ಲಿ, ಆ.27: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಹೇಳುವ ವೀಡಿಯೋವೊಂದು ವೈರಲ್ ಆದ ನಂತರ ವಿವಾದಕ್ಕೆ ಸಿಲುಕಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಆಗಸ್ಟ್ 31ರಂದು ಅವರು ವೃತ್ತಿಯಿಂದ ನಿವೃತ್ತರಾಗಲಿದ್ದಾರೆ.

ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿ ಸೂರ್ಯಕುಮಾರ್ ಶುಕ್ಲಾ ಉತ್ತರ ಪ್ರದೇಶ ಸರಕಾರವು ತನ್ನ ನಿವೃತ್ತಿಯ ನಂತರ ನೀಡಬಹುದಾದ 4 ಹುದ್ದೆಗಳ ಬಗ್ಗೆ ಮುಖ್ಯಮಂತ್ರಿ ಆದಿತ್ಯನಾಥ್ ಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸೋರಿಕೆಯಾಗಿದೆ. ಜುಲೈ 23ರಂದು ಈ ಪತ್ರವನ್ನು ಬರೆಯಲಾಗಿದೆ.

2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ತಾನು ಉತ್ಸುಕನಾಗಿದ್ದೇನೆ ಎಂದೂ ಈ ಐಪಿಎಸ್ ಅಧಿಕಾರಿ ಪತ್ರದಲ್ಲಿ ತಿಳಿಸಿದ್ದಾರೆ. ರಾಜ್ಯ ಯೋಜನಾ ಆಯೋಗದ ಮುಖ್ಯಸ್ಥ ಹುದ್ದೆಯನ್ನೂ ತನಗೆ ನೀಡಬಹುದು ಅಥವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯಸ್ಥ ಹುದ್ದೆಯನ್ನೂ ನೀಡಬಹುದೆಂದು ಅವರು ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಎನ್ ಡಿಟಿವಿ ಶುಕ್ಲಾರನ್ನು ಸಂಪರ್ಕಿಸಿದ್ದು, “ನಿರ್ದಿಷ್ಟ ಪತ್ರಗಳನ್ನು ನಾನು ಖಚಿತಪಡಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ. ನಿವೃತ್ತಿಯ ನಂತರ ಪ್ರತಿಯೊಬ್ಬ ಅಧಿಕಾರಿಯೂ ರಾಜ್ಯಕ್ಕಾಗಿ ಸೇವೆ ಸಲ್ಲಿಸಲು ಬಯಸುವುದು ಸತ್ಯ. ಅಧಿಕಾರದಲ್ಲಿರುವ ಸರಕಾರಕ್ಕೆ ಈ ಬಗ್ಗೆ ಶಿಫಾರಸು ಸಲ್ಲಿಸುವುದರಲ್ಲಿ ತಪ್ಪೇನಿದೆ” ಎಂದವರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

“ನಾವು ರಾಮಭಕ್ತರು. ಶೀಘ್ರ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಪ್ರತಿಜ್ಞೆ ಕೈಗೊಳ್ಳುವ” ಎಂದು ಶುಕ್ಲಾ ಹೇಳುತ್ತಿದ್ದ ವಿಡಿಯೋವೊಂದು ಫೆಬ್ರವರಿಯಲ್ಲಿ ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News