ಸಂವಿಧಾನದ 35ಎ ವಿಧಿ ರದ್ದು ವದಂತಿ: ಕಾಶ್ಮೀರದ ಕೆಲವೆಡೆ ಸ್ವಯಂಪ್ರೇರಿತ ಬಂದ್ ಆಚರಣೆ

Update: 2018-08-27 15:49 GMT

ಶ್ರೀನಗರ, ಆ.27: ಸಂವಿಧಾನದ 35ಎ ವಿಧಿಯನ್ನು ರದ್ದುಗೊಳಿಸಲಾಗುತ್ತದೆ ಎಂಬ ವದಂತಿಯ ಬಳಿಕ ಕಾಶ್ಮೀರದ ಹಲವೆಡೆ ಯುವಜನತೆ ಹಾಗೂ ಭದ್ರತಾ ಪಡೆಗಳ ಮಧ್ಯೆ ಘರ್ಷಣೆ ನಡೆದಿದ್ದು ಕೆಲವು ಭಾಗಗಳಲ್ಲಿ ಸ್ವಯಂಪ್ರೇರಿತ ಬಂದ್ ಆಚರಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ವಿಶೇಷ ಹಕ್ಕು ಮತ್ತು ಸೌಲಭ್ಯ ನೀಡುವ 35ಎ ವಿಧಿಯ ಶಾಸನಬದ್ಧತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. 35ಎ ವಿಧಿಯನ್ನು ರದ್ದುಗೊಳಿಸಲಾಗಿದ್ದು, ಜನರು ಇದನ್ನು ಪ್ರತಿಭಟಿಸಬೇಕು ಮತ್ತು ಮುಷ್ಕರದಲ್ಲಿ ಪಾಲ್ಗೊಳ್ಳಬೇಕು ಎಂದು ಧ್ವನಿವರ್ಧಕದಲ್ಲಿ ಕೆಲವರು ಪ್ರಚಾರ ಮಾಡಿದ್ದು ಇದನ್ನು ನಂಬಿದ ಕೆಲವರು ಶ್ರೀನಗರ ಹಾಗೂ ಅನಂತನಾಗ್ ಜಿಲ್ಲೆಯಲ್ಲಿ ಸ್ವಯಂಪ್ರೇರಿತವಾಗಿ ಬಂದ್ ಆಚರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಅನಂತನಾಗ್ ಹಾಗೂ ಸಫಕಾದಲ್ ಪ್ರದೇಶದಲ್ಲಿ ಕೆಲವರು ಭದ್ರತಾ ಪಡೆಗಳತ್ತ ಕಲ್ಲೆಸೆದರಲ್ಲದೆ ಘರ್ಷಣೆಗೆ ಮುಂದಾದರು. ವದಂತಿಯನ್ನು ನಂಬಬೇಡಿ ಎಂದು ಭದ್ರತಾ ಪಡೆಗಳು ಸ್ಥಳೀಯರಲ್ಲಿ ಮನವಿ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು .

ಕೆಲವು ಮಾಧ್ಯಮಗಳಲ್ಲಿ 35ಎ ವಿಧಿಯ ಬಗ್ಗೆ ಸುದ್ದಿ ಪ್ರಕಟವಾಗಿದ್ದು ಇದು ಆಧಾರರಹಿತವಾಗಿದೆ ಎಂದು ಜನತೆಗೆ ಮನವರಿಕೆ ಮಾಡಿದ ಭದ್ರತಾ ಪಡೆಗಳು, ಶಾಂತಿ ಕಾಪಾಡುವಂತೆ ಮನವಿ ಮಾಡಿದರು. 35ಎ ವಿಧಿಯ ಬಗ್ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಆಗಸ್ಟ್ 31ರಂದು ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಭೇಟಿಯಾಗಲಿರುವ ಸರ್ವಪಕ್ಷ ನಿಯೋಗ

35ಎ ವಿಧಿಯ ಕುರಿತು ಸಲ್ಲಿಸಲಾಗಿರುವ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರುವಾಗ ಅದನ್ನು ಸಮರ್ಥಿಸಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸುವ ನಿಟ್ಟಿನಲ್ಲಿ ಜಮ್ಮು-ಕಾಶ್ಮೀರದ ಸರ್ವಪಕ್ಷಗಳ ನಿಯೋಗವು ಪ್ರಧಾನಿಯವರನ್ನು ಭೇಟಿ ಮಾಡಲಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸೈಫುದ್ದೀನ್ ಸೋಝ್ ತಿಳಿಸಿದ್ದಾರೆ. ದೂರ ನಿಂತು ಪರಿಸ್ಥಿತಿಯನ್ನು ಗಮನಿಸುವ ಕೇಂದ್ರ ಸರಕಾರದ ನಿಲುವು ಹಾಸ್ಯಾಸ್ಪದವಾಗಿದೆ. ಕಾಶ್ಮೀರದ ಜನತೆಯ ಇಚ್ಛೆಗೆ ವಿರುದ್ಧವಾಗಿ 35ಎ ವಿಧಿಯನ್ನು ರದ್ದುಗೊಳಿಸಿದರೆ ರಾಜ್ಯದಲ್ಲಿ ಪ್ರಕ್ಷುಬ್ಧತೆ ನೆಲೆಸಬಹುದು ಎಂಬುದನ್ನು ಸರಕಾರ ಗಮನದಲ್ಲಿಟ್ಟುಕೊಂಡು , ಸುಪ್ರೀಂಕೋರ್ಟ್‌ನಲ್ಲಿ ತನ್ನ ನಿಲುವನ್ನು ಪ್ರಸ್ತುತಪಡಿಸಬೇಕು ಎಂದು ಪ್ರಧಾನಿ ಹಾಗೂ ಗೃಹ ಸಚಿವರನ್ನು ನಿಯೋಗ ಒತ್ತಾಯಿಸಲಿದೆ ಎಂದವರು ತಿಳಿಸಿದ್ದಾರೆ. ಸಂವಿಧಾನದ 35ಎ ವಿಧಿಯನ್ನು ರಕ್ಷಿಸುವ ನಿಟ್ಟಿನಲ್ಲಿ ರಾಜ್ಯದ ಜನತೆ ವಿಶಿಷ್ಟ ಒಗ್ಗಟ್ಟು ಪ್ರದರ್ಶಿಸಿದ್ದಾರೆ ಎಂದು ಸೋಝ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News